ಬೆಳಗಾವಿ: ಸಿದ್ದರಾಮಯ್ಯ ಸಿಎಂ ಇರುವವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೆ. ಅವರ ಅವ ಧಿ ಮುಗಿದ ನಂತರ ಹೇಳಲಾಗಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಬೆಳಗಾವಿ ನಗರದ ಯೋಗಿಕೊಳ್ಳ ಪ್ರದೇಶದಲ್ಲಿ 6 ಟಿಎಂಸಿ ನೀರು ನಿಲ್ಲಿಸಲು ಉದ್ದೇಶಿಸಿ ಮಾಡಲಾದ ಘಟ್ಟಿ ಬಸವಣ್ಣ ಡ್ಯಾಂ ಯೋಜನೆಯನ್ನು ನಿಲ್ಲಿಸಲು ಮಹಾನಾಯಕ ಪ್ಲಾನ್ ಮಾಡಿದ್ದ. ಯೋಜನೆ ನಿಲ್ಲಿಸಲು ಅಧಿ ಕಾರಿಗಳಿಂದ ಸತೀಶ್ ಜಾರಕಿಹೊಳಿ ಹೆಸರು ಹೇಳಿಸಿದ್ದ. ಆದರೆ ನಾನು ಸತೀಶ ಜತೆ ಮಾತನಾಡಿದಾಗ ಆ ಯೋಜನೆಯನ್ನು ನಿಲ್ಲಿಸುವ ಉದ್ದೇಶ ನನ್ನದಿಲ್ಲ ಎಂದಿದ್ದಾರೆ. ಮಹಾನಾಯಕ ಸುಳ್ಳು ಹೇಳಿ ಯೋಜನೆ ನಿಲ್ಲಿಸುವ ಹುನ್ನಾರ ನಡೆಸಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಅನುಷ್ಠಾನಗೊಳಿಸಿ ಈ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾನಾಯಕನ ದರ್ಪ, ವಿಷ ಕನ್ಯೆ ಸೊಕ್ಕಿಗೆ ತಕ್ಕ ಪಾಠ: ರಮೇಶ್
ಗೋಕಾಕ್: ಮಹಾನಾಯಕನ ದರ್ಪ, ವಿಷಕನ್ಯೆಯ ಸೊಕ್ಕಿನ ರಾಜಕಾರಣಕ್ಕೆ ಜನ ಬೇಸತ್ತು ಸೌಮ್ಯ ಸ್ವಭಾವದ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸುವ ಮೂಲಕ ಜನತೆ ಐತಿಹಾಸಿಕ ದಾಖಲೆ ನಿರ್ಮಿಸಿ ಕೊಟ್ಟಿದ್ದಾರೆಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ನೂತನ ಸಂಸದ ಜಗದೀಶ್ ಶೆಟ್ಟರ್ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದಬ್ಟಾಳಿಕೆ, ಭೂ ಕಬಳಿಕೆ ಘಟನೆಗಳಿಂದ ಬಿಜೆಪಿಗೆ 50 ಸಾವಿರ ಲೀಡ್ ಸಿಕ್ಕಿದೆ. ದುರಹಂಕಾರ ಹಾಗೂ ಸ್ವಾರ್ಥ ರಾಜಕಾರಣ ಶಾಶ್ವತವಲ್ಲ. ಜನತೆ ಬುದ್ಧಿವಂತರಿದ್ದು, ಸಮಯಕ್ಕೆ ಸರಿಯಾಗಿ ತಕ್ಕ ಪಾಠ ಕಲಿಸುತ್ತಾರೆ. ನಾವು ಬಡವರ ಕಾಳಜಿಯಿಂದ ಸತತವಾಗಿ ಆಯ್ಕೆಯಾಗಿ ಬರುತ್ತಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದ್ದರಿಂದ ನಾನು ಸ್ವಲ್ಪ ನೊಂದಿದ್ದೆ. ಜನರು ನನ್ನ ಮೇಲೆ ಇಟ್ಟ ಪ್ರೀತಿ ಮತ್ತು ಅಭಿಮಾನದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದು ನನಗೆ ಸಂತಸ ತಂದಿದೆ ಎಂದರು.