ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಶೀಘ್ರದಲ್ಲಿ ಉಪಚುನಾವಣೆ ಬರಲಿದ್ದು, ಪ್ರತಾಪ್ ಗೌಡ ಪಾಟೀಲ್ ರನ್ನು ಗೆಲ್ಲಿಸಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕರೆ ನೀಡಿದರು.
ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ನಂದವಾಡಗಿ ಏತನೀರಾವರಿಗೆ ಸಂಬಧಿಸಿದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಪ್ರತಾಪ್ ಗೌಡರನ್ನು ಮತ್ತೊಮೆ ಗೆಲ್ಲಿಸಿದಲ್ಲಿ ಬಹುದಿನಗಳ ಬೇಡಿಕೆಯಾದ 5ಎ ಕಾಲುವೆ ಕಾಮಗಾರಿ ಮುಗಿಸಿಕೊಡಲಾಗುವುದು. ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಹೊಣೆ ನನ್ನದು ಎಂದರು.
ಬೈ ಎಲೆಕ್ಷನ್ ನಲ್ಲಿ ಗೆದ್ದ ಬಳಿಕ ಪ್ರತಾಪ್ ಗೌಡ ಪಾಟೀಲ್ ಸಚಿವರಾಗಿ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಭರವಸೆ ನೀಡಿದರು. ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರತಾಪಗೌಡ ಪಾಟೀಲರು ಕಾರಣ. ಸರ್ಕಾರ ರಚನೆಗೆ ಅವರ ಕೊಡುಗೆ ಜಾಸ್ತಿ ಎಂದು ಸ್ಮರಿಸಿದರು.
ರಾಯಚೂರು, ಕೊಪ್ಪಳ, ಯಾದಗಿರಿಯಲ್ಲಿ ಹಲವು ನೀರಾವರಿ ಯೋಜನೆ ಜಾರಿ ಮಾಡಲಾಗುವುದು. ಎನ್ ಆರ್ ಬಿಸಿ ಕಾಲುವೆ ದುರಸ್ತಿಯಲ್ಲಿ ಕಳಪೆ ಕಮಗಾರಿ ನಡೆದಿರುವ ಆರೋಪ ಕೇಳಿ ಬಂದಿವೆ. ಕಳಪೆ ಕಾಮಗಾರಿಯಾದಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಮಗ್ರ ತನಿಖೆ ಮಾಡಿಸಲಾಗುವುದು. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ನೀರಾವರಿಯಾಗುತ್ತಿದೆ ಎಂದು ಈ ಭಾಗದ ಹಲವು ಮುಖಂಡರು ಆರೋಪ ಮಾಡಿದ್ದಾರೆ. ಈ ಬಗ್ಗೆಯೂ ಸಮಗ್ರ ತನಿಖೆ ಮಾಡಿಸಲಾಗುವುದು ಎಂದರು.
ಬರುವ ದಿನಗಳಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ. ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸುವ ಮೂಲಕ ಕೋವಿಡ್ ಓಡಿಸಬೇಕು. ಕೋವಿಡ್ ಸೋಂಕು ದೊಡ್ಡ ರೋಗವೇ ಅಲ್ಲ, ಜನ ಭಯಪಡಬೇಕಿಲ್ಲ. ಒಂದಾದ್ರೂ ಸಾವೇ, ಸಾವಿರ ಸಾವು ಆದರೂ ಸಾವೇ. ಅದನ್ನು ನಿಯಂತ್ರಿಸಬೇಕಿದೆ ಎಂದರು.