ಬೆಳಗಾವಿ: ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯನವರ ಏಜೆಂಟ್ ಆಗಿ ಕೆಲಸ ಮಾಡಿದ್ದಾರೆ ಎಂದು ಗೋಕಾಕ ಅನರ್ಹ ಶಾಸಕ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಗುರುವಾರ ಗೋಕಾಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜೀನಾಮೆ ನೀಡಿದಾಗ ಕೂಲಂಕುಶವಾಗಿ ಪರಿಶೀಲನೆ ನಡೆಸದೆ ಮಾಜಿ ಸ್ಪೀಕರ್ ರಮೇಶ ಕುಮಾರ್ ಸಿದ್ದರಾಮಯ್ಯನ ಏಜಂಟರಂತೆ ಕೆಲಸ ಮಾಡಿ ನಮ್ಮನ್ನು ಅನರ್ಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯದ ಮೇಲೆ ಸಂಪೂರ್ಣವಾಗಿ ನಮಗೆ ನಂಬಿಕೆ ಇದೆ. ನ್ಯಾಯ ನಮ್ಮ ಪರವಾಗಿ ಬರುತ್ತದೆ ಎನ್ನುವ ವಿಶ್ವಾಸ ಇದೆ ಎಂದರು. ಗೋಕಾಕ ಕ್ಷೇತ್ರದ ಜನರು ಸ್ವಲ್ಪಗೊಂದಲದಲ್ಲಿ ಇದ್ದಾರೆ ಅದಕ್ಕಾಗಿ ಸಭೆ ನಡೆಸಲಾಗುತ್ತಿದೆ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದರೆ ಸೋಮವಾರ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜನ ಸೇರಿಸುವ ನಿರ್ಧಾರ ಮಾಡಿದ್ದೇವೆ ಎಂದರು.
ಗೋಕಾಕ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಹಿರಿಯ ಅಣ್ಣನಾಗಿ ನಾನು ಲಖನ್ ಭೇಟಿ ಮಾಡಿ ಹೇಳುತ್ತೇನೆ. ಚುನಾವಣೆಗೆ ಸ್ಪರ್ಧಿಸಲು ಇದು ಸಕಾಲವಲ್ಲ. ಅವನ ನನ್ನ ಪ್ರೀತಿಯ ತಮ್ಮ. ಲಖನ್ ಮುಂದಿನ ಚುನಾವಣೆಯಲ್ಲಿ ನಿಲ್ಲಲಿ ಎಂದು ಮನವರಿಕೆ ಮಾಡಿ ಕೊಡುತ್ತೇನೆ ಎಂದು ಹೇಳಿದರು.
ಲಖನ್ ಗೆ ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟು ಕೊಡುತ್ತೇನೆ.ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ ತಾಕತ್ ನೋಡುತ್ತೇನೆ ಎಂದು ಸವಾಲು ಹಾಕಿದರು.
ನನ್ನ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ಅಳಿಯ ಅಂಬಿರಾವ್ ಮೇಲೆ ಸತೀಶ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.