ಅಥಣಿ: ಸ್ನೇಹಿತರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅಥಣಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಆಗುವುದು ಬಿಡುವುದು ಆ ಮೇಲಿನ ಮಾತು. ಈಗ ಮಂತ್ರಿಯಾಗಲು ನನ್ನ ತಮ್ಮ ಸೇರಿ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಠಳ್ಳಿ ಇದ್ದಾರೆ. ಮಂತ್ರಿಯಾಗಲು ಹೈ ಕಮಾಂಡ್ ಅಥವಾ ಸಂಘ ಪರಿವಾರದ ಮೇಲೆ ಯಾವುದೇ ಒತ್ತಡ ತಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂತ್ರಿ ಆಗುವುದಕ್ಕಿಂತ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳ ಅನುಷ್ಠಾನಗೊಳ್ಳುವುದೇ ನನಗೆ ಪ್ರಾಮುಖ್ಯವಾಗಿದೆ. ಐದಾರು ತಿಂಗಳ ಅವ ಧಿಯಲ್ಲಿ ಅಥಣಿ ಅಭಿವೃದ್ಧಿ ಕುಂಠಿತಗೊಂಡಿತ್ತು. ನೀರಾವರಿ ಯೋಜನೆಗಳಿಗೆ ಚಾಲನೆ ಸಿಗಲಿದ್ದು, ಈ ಕಾರಣಕ್ಕಾಗಿಯೇ ಅಥಣಿಗೆ ಭೇಟಿ ನೀಡಿರುವೆ ಎಂದರು.
ಸಿಡಿ ಪ್ರಕರಣ ಅಂತ್ಯಗೊಳಿಸಿ ನಿಮ್ಮನ್ನು ಬೊಮ್ಮಾಯಿ ಸರಕಾರದಲ್ಲಿ ಬಿಜೆಪಿ ಹೈ ಕಮಾಂಡ್ ಮಂತ್ರಿ ಮಾಡಬಹುದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಪ್ರಕರಣದ ಕುರಿತಾಗಿ ಈಗಲೇ ನಾನು ಉತ್ತರಿಸುವುದಿಲ್ಲ. 2023ರ ವರೆಗೆ ಬಿಜೆಪಿಯನ್ನು ಮತ್ತಷ್ಟು ಭದ್ರಗೊಳಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲುವಂತೆ ಮಾಡಿ ಬಿಜೆಪಿ ಮತ್ತೂಮ್ಮೆ ಅಧಿ ಕಾರಕ್ಕೆ ತರುವ ಗುರಿ ತಮ್ಮದಾಗಿದೆ ಎಂದರು.
ನಾನು ನೀರಾವರಿ ಸಚಿವನಾಗಲು ಅಥಣಿ ಶಾಸಕ ಮಹೇಶ ಕುಮಠಳ್ಳಿಯೇ ಕಾರಣ. ಮಹೇಶ ಕುಮಠಳ್ಳಿ ಇಂದು ತಮ್ಮ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದಾರೆ. ಬಿಜೆಪಿ ಹೈ ಕಮಾಂಡ್ ಕೈಗೊಂಡ ನಿರ್ಣಯಕ್ಕೆ ಅವರು ಬದ್ಧರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಈ ತ್ಯಾಗಕ್ಕೆ ಉತ್ತಮ ಫಲ ಸಿಗಲಿದೆ. ರಾಜಕೀಯದಲ್ಲಿ ಷಡ್ಯಂತ್ರಗಳು ಸಾಮಾನ್ಯ. ಅದರಲ್ಲಿ ತಮಗಿಂತ ಶೂರರಿದ್ದವರಿಗಂತೂ ಷಡ್ಯಂತ್ರ ಮಾಡೇ ಮಾಡುತ್ತಾರೆ. ಇವುಗಳಿಗೆ ನಾನು ಹೆದರುವನಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಸಂತೋಷವಾಗಿದ್ದೇನೆ. ಬಿಜೆಪಿ ರಾಜ್ಯ ಹಾಗೂ ದಿಲ್ಲಿ ಮಟ್ಟದ ಹೈ ಕಮಾಂಡ್ ಮತ್ತು ಸಂಘ ಪರಿವಾರ ನನಗೆ ಪ್ರೀತಿ, ವಿಶ್ವಾಸ ನೀಡಿದೆ. ನಾನು 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ಅಲ್ಲಿ ನನಗೆ ಪ್ರೀತಿ. ವಿಶ್ವಾಸ ಸಿಗಲಿಲ್ಲ. ಆದರೆ ಸಂಘ ಪರಿವಾರ ಮತ್ತು ಬಿಜೆಪಿ ನನ್ನನ್ನು ಗೌರವಿಸಿದೆ. ಹೀಗಾಗಿ ಬಿಜೆಪಿಯಲ್ಲಿ ಇರುವುದು ನನಗೆ ಸಂತೋಷ ತಂದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಮಹೇಶ ಕುಮಠಳ್ಳಿ, ಧುರೀಣರಾದ ಕಿರಣಕುಮಾರ ಪಾಟೀಲ, ಮಲ್ಲಪ್ಪ ಹಂಚಿನಾಳ, ಅಮೂಲ ನಾಯಿಕ, ಸುರೇಶ ಮಾಯಣ್ಣವರ, ಮಲ್ಲಿಕಾರ್ಜುನ ಅಂದಾನಿ, ಶಿಬಗೌಡ ಜಗದೇವ, ಅನೀಲ ಸೌದಾಗರ, ಶಶಿಕಾಂತ ಸಾಳವಿ ಇದ್ದರು.