Advertisement

ರಮೇಶ ಜಾರಕಿಹೊಳಿ ರಾಜೀನಾಮೆ ಬಿಡುಗಡೆಯಾಗದ ಸಿನೆಮಾದಂತೆ

11:32 PM May 25, 2019 | Lakshmi GovindaRaj |

ಬೆಳಗಾವಿ: ರಮೇಶ ಜಾರಕಿಹೊಳಿ ಅವರ ರಾಜೀನಾಮೆ ವಿಷಯ ಬಿಡುಗಡೆಯಾಗದೆ ಡಬ್ಬದಲ್ಲೇ ಉಳಿದುಕೊಂಡ ಸಿನೆಮಾ ಇದ್ದ ಹಾಗೆ. ಅದು ಬಿಡುಗಡೆ ಆಗುವುದೇ ಇಲ್ಲ ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಟಾಂಗ್‌ ನೀಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, “ರಮೇಶ ಜಾರಕಿಹೊಳಿಯದು ಹಳೆಯ ಸಿನಿಮಾ. ಬಿಡುಗಡೆ ಆಗೋದು ಅನುಮಾನ. ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವುದು ನಾಳೆ ಖಚಿತ. ನಾಡಿದ್ದು ಖಚಿತ ಎಂದು ನಾವು ಕೇಳುತ್ತಲೇ ಇದ್ದೇವೆ. ಆದರೆ, ಇದುವರೆಗೆ ಏನೂ ಆಗಿಲ್ಲ. ಈ ಸಿನಿಮಾವನ್ನು ಮಾಧ್ಯಮದವರೇ ಬಿಡುಗಡೆ ಮಾಡಬೇಕು’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ವೈಫಲ್ಯಕ್ಕೆ ಮೈತ್ರಿ ಕಾರಣ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಥಿತಿ ಶೋಚನೀಯವಾಗಲು ಬಹುಶಃ ಹೊಂದಾಣಿಕೆ ಕಾರಣ. ಕೆಲವು ಕಡೆಗಳಲ್ಲಿ ಮೈತ್ರಿ ಧರ್ಮ ಸರಿಯಾಗಿ ಪಾಲನೆಯಾಗಿಲ್ಲ. ಇಷ್ಟು ದಿನ ಜೆಡಿಎಸ್‌- ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇತ್ತು. ಕಾಂಗ್ರೆಸ್‌-ಜೆಡಿಎಸ್‌ ಒಂದಾಗಲು ಯಾವುದೇ ಔಷಧಿ ನಾಟಿರಲಿಲ್ಲ. ಈಗ ಮೋದಿಯ ಔಷಧಿ ಫಲ ನೀಡಿದೆ. ಚುನಾವಣೆಯಲ್ಲಿ ಬಿದ್ದ ಮೋದಿ ಹೊಡೆತದಿಂದ ನಾವೆಲ್ಲ ಒಂದಾಗಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಕಾಂಗ್ರೆಸ್‌ ಬೆಂಬಲಿಸಿದ್ದರು. ಹೀಗಾಗಿ, ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೆಚ್ಚು ಮುನ್ನಡೆ ಗಳಿಸಿತ್ತು. ಆಗಿನ ಪರಿಸ್ಥಿತಿ ಬೇರೆ. ಈಗಿನ ಪರಿಸ್ಥಿತಿಯೇ ಬೇರೆ. ಈಗ ಅವರೆಲ್ಲ ಪ್ಯೂರ್‌ ಗೋಲ್ಡ್‌ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

“ಆಪರೇಷನ್‌ ಹಸ್ತ’ಕ್ಕೆ ರೆಡಿ: ಮೇ 29ರಿಂದ ರಾಜ್ಯದಲ್ಲಿ “ಆಪರೇಷನ್‌ ಕಮಲ’ ನಡೆಯಲಿದೆ ಎಂದು ಭವಿಷ್ಯ ನುಡಿದ ಅವರು, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ -ಜೆಡಿಎಸ್‌ ಎಲ್ಲ ಕ್ರಮ ಕೈಗೊಂಡಿದೆ. ಅಗತ್ಯ ಎನಿಸಿದರೆ ನಾವೂ ಸಹ “ಆಪರೇಶನ್‌ ಹಸ್ತ’ ಮಾಡಲು ಕಾರ್ಯತಂತ್ರ ರೂಪಿಸಿದ್ದೇವೆ ಎಂದರು.

Advertisement

ರಮೇಶ ಜಾರಕಿಹೊಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎರಡು ತಿಂಗಳ ಹಿಂದೆಯೇ ಸಚಿವ ಸ್ಥಾನದ ಆಫರ್‌ ನೀಡಿದ್ದಾರೆ. ಆದರೆ, ರಮೇಶ ಜಾರಕಿಹೊಳಿ ಮಂತ್ರಿ ಅಲ್ಲ, ಮುಖ್ಯಮಂತ್ರಿ ಇಲ್ಲವೇ ಪ್ರಧಾನ ಮಂತ್ರಿ ಆಫರ್‌ ಕೊಟ್ಟರೂ ಬರುವುದಿಲ್ಲ. ಇಷ್ಟೆಲ್ಲ ಆಫರ್‌ ಕೊಟ್ಟರೂ ನಮ್ಮ ಸರ್ಕಾರವನ್ನು ಅಲುಗಾಡಿಸೋದನ್ನು ಬಿಡಲ್ಲ.

ಹೀಗಾಗಿ, ಅವರ ಮನವೊಲಿಸುವುದನ್ನು ಬಿಟ್ಟು ಬಿಡಿ ಎಂದು ನಾನು ಮುಖ್ಯಮಂತ್ರಿಗೆ ಹೇಳಿದ್ದೇನೆ ಎಂದರು. ರಾಜೀನಾಮೆ ಕೊಡ್ತೀನಿ, ಕೊಡ್ತೀನಿ ಎಂದು ರಮೇಶ ಹೇಳುತ್ತಲೇ ಇದ್ದಾರೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ.

ರಮೇಶ ಜಾರಕಿಹೊಳಿ ಪಕ್ಷದಿಂದ ಹೊರಗೆ ಕಾಲು ಇಟ್ಟು ಬಹಳ ದಿನ ಆಗಿದೆ. ಅವರ ಮೇಲಿನ ಆಸೆ ಬಿಡುವುದು ಒಳ್ಳೆಯದು. ಸರಕಾರಕ್ಕೆ ಆತಂಕ ಉಂಟು ಮಾಡುವ ಪ್ರಯತ್ನ ಮಾಡುತ್ತಲೇ ಇರುವ ರಮೇಶ ಜಾರಕಿಹೊಳಿಗೆ ಸಂಖ್ಯಾಬಲದ ಕೊರತೆ ಇದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಷಯ ಹಾಗೂ ಚರ್ಚೆ ಈ ಚುನಾವಣೆಯ ಫಲಿತಾಂಶದಿಂದ ಕ್ಲೋಸ್‌ ಆಗಿದೆ. ಉಳಿದ ನಾಲ್ಕು ವರ್ಷ ಹೈಕಮಾಂಡ್‌ ಆದೇಶದಂತೆ ಲೆಫ್ಟ್‌, ರೈಟ್‌ ಅಂತ ಒಂದೇ ಲೈನ್‌ನಲ್ಲಿ ನಾವೆಲ್ಲರೂ ಹೋಗಬೇಕು. ಕಮಾಂಡರ್‌ ಹೇಳಿದ ಹಾಗೇ ಪರೇಡ್‌ ಮಾಡೋದು ಅಷ್ಟೇ ಈಗ ಉಳಿದಿದೆ.
-ಸತೀಶ್‌ ಜಾರಕಿಹೊಳಿ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next