ಬೆಂಗಳೂರು: ಕಬ್ಬು ಬೆಳೆಗಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮತ್ತೊಂದೆಡೆ ಕಬ್ಬು ಬೆಳೆಗಾರರ ಬಾಕಿ ಪಾವತಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಿಂದ ರಮೇಶ್ ಜಾರಕಿಹೊಳಿ ಎದ್ದು ಹೊರನಡೆದ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕಬ್ಬು ಬೆಳೆಗಾರರ ಕುರಿತು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಚಿವರ ಕಾರ್ಖಾನೆಗಳಿಂದಲೇ ಸಾಕಷ್ಟು ಹಣ ಬಾಕಿ ಇದೆ. ಈ ಬಗ್ಗೆ ಸಚಿವರೇ ಮಾತನಾಡುತ್ತಿಲ್ಲ ಎಂದು ಹೇಳಿದಾಗ. ಇದಕ್ಕೆ ಪ್ರತಿಕ್ರಿಯೆ ನೀಡದೆ ರಮೇಶ್ ಜಾರಕಿಹೊಳಿ ಸಭೆಯಿಂದ ಎದ್ದು ಹೊರಹೋಗಿದ್ದಾರೆ ಎಂದು ವರದಿ ತಿಳಿಸಿದೆ.
ಕೈ ನಾಯಕರಿಗೆ ಕಿಸಾನ್ ಘಟಕದಿಂದ ಪತ್ರ:
ರಾಜ್ಯದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕ ಕೈ ಮುಖಂಡರಿಗೆ ಪತ್ರ ಬರೆದಿದೆ. ಕಬ್ಬು ಬೆಳೆಗಾರರಿಗೆ ಕೂಡಲೇ ಬಾಕಿ ಹಣ ಪಾವತಿ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿದೆ ಎಂದು ವರದಿ ವಿವರಿಸಿದೆ.
ಬಹುತೇಕ ಕಾಂಗ್ರೆಸ್ ನಾಯಕರೇ ಸಕ್ಕರೆ ಕಾರ್ಖಾನೆ ಹೊಂದಿದ್ದು, ಮೊದಲು ಕೈ ಮುಖಂಡರು ಪಾವತಿಸಲು ಬಾಕಿ ಇರುವ ಹಣವನ್ನು ಚುಕ್ತಾ ಮಾಡಲಿ ಎಂದು ಪತ್ರದಲ್ಲಿ ಸಲಹೆ ನೀಡಿದೆ.
ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಬರೆದಿರುವ ಪತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಆನಂದ್ ನ್ಯಾಮಗೌಡ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಹೆಸರನ್ನು ಉಲ್ಲೇಖಿಸಿ ಬಾಕಿ ಪಾವತಿಸುವಂತೆ ತಿಳಿಸಿದ್ದಾರೆ.