Advertisement
ಕಾಂಗ್ರೆಸ್‌ನಲ್ಲಿ ಉಳಿಯಬೇಕೇ ? ಬಿಜೆಪಿ ಸೇರಿ ಸಮ್ಮಿಶ್ರ ಸರ್ಕಾರ ಉರುಳಿಸಬೇಕೇ ? ಎಂಬ ಆಲೋಚನೆಯಲ್ಲಿ ರಮೇಶ ಜಾರಕಿಹೊಳಿ ಇರುವಾಗ ಈ ಚುನಾವಣೆಯಲ್ಲಿ ಅವರ ಪಾತ್ರದ ಬಗ್ಗೆ ಎರಡೂ ಪಕ್ಷಗಳಲ್ಲಿ ಪರಾಮರ್ಶೆ ನಡೆದಿರುವುದು ಬಹಳ ಕುತೂಹಲ ಮೂಡಿಸಿದೆ. ಮೈತ್ರಿ ಸರಕಾರದ ಅಳಿವು-ಉಳಿವಿನಲ್ಲಿ ರಮೇಶ ಅವರ ಕೆಲಸ ಬಹಳ ಮಹತ್ವದ್ದಾಗಿರುವದರಿಂದ ಅವರ ಮುಂದಿನ ನಡೆ ಈಗ ಎಲ್ಲರಲ್ಲಿ ಕಾತುರ ಹುಟ್ಟಿಸಿದೆ.
Related Articles
Advertisement
ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಾಯ ಮಾಡಿದ ರಮೇಶ ಜಾರಕಿಹೊಳಿ ಮೂರೂ ಕಡೆ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿಗೆ ಬರುತ್ತಿದ್ದಾರೆ. ಅವರ ವಿಧಾನಸಭಾ ಕ್ಷೇತ್ರ ಗೋಕಾಕದಲ್ಲಿ ತಮಗೆ ಒಳ್ಳೆಯ ಮುನ್ನಡೆ ಸಿಕ್ಕಿದೆ. ಹೀಗಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಂಸದ ಸುರೇಶ ಅಂಗಡಿ ಹೇಳಿರುವುದು ನಾನಾ ರೀತಿಯ ರಾಜಕೀಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಚುನಾವಣೆಯ ಮೊದಲ ದಿನದಿಂದಲೂ ಕಾಂಗ್ರೆಸ್ ಪಕ್ಷದ ಎಲ್ಲ ಚಟುವಟಿಕೆಗಳಿಂದ ಬಹಳ ದೂರ ಉಳಿದಿದ್ದ ರಮೇಶ ಜಾರಕಿಹೊಳಿ ಒಮ್ಮೆಯೂ ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿಯಲಿಲ್ಲ. ಸ್ವತಃ ತಮ್ಮ ಕ್ಷೇತ್ರ ಗೋಕಾಕದಲ್ಲಿಯೂ ಅವರು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿಲ್ಲ. ಬದಲಾಗಿ ತಟಸ್ಥರಾಗಿ ಉಳಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಬಹುತೇಕ ಸಮಯ ತಾವು ಕಾಂಗ್ರೆಸ್ ಬಿಡುವುದು ನಿಶ್ವಿತ ಎಂದು ಹೇಳಿ ಕೊಂಡೇ ಓಡಾಡಿದ್ದ ರಮೇಶ ಜಾರಕಿಹೊಳಿ ಚುನಾವಣೆಯ ಸಮಯದಲ್ಲಿ ಪರೋಕ್ಷವಾಗಿ ಬಿಜೆಪಿ ಪರ ನಿಂತಿದ್ದಲ್ಲದೆ ತಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಸೂಚನೆ ಸಹ ನೀಡಿದ್ದರು. ಇದಕ್ಕೆ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಮುನ್ನಡೆಯೇ ಸಾಕ್ಷಿ.
* ಕೇಶವ ಆದಿ