Advertisement

ರಮೇಶ್‌ ಜಾರಕಿಹೊಳಿ, ಹೆಬ್ಟಾಳ್ಕರ್‌ಗೆ ಸೇರಿದ 162 ಕೋಟಿ ರೂ. ಪತ್ತೆ ?

03:45 AM Jan 24, 2017 | Harsha Rao |

ಬೆಂಗಳೂರು: ಸಣ್ಣ ಕೈಗಾರಿಕಾ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ್‌ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಬರೋಬ್ಬರಿ 162.06 ಕೋಟಿ ರೂ.ಘೋಷಣೆ ಮಾಡದ ನಗದು, ವಿವರಣೆ ನೀಡದ 41 ಲಕ್ಷ ರೂ. ಮತ್ತು 12.8 ಕೆ.ಜಿ.ಚಿನ್ನಾಭರಣಗಳು ಪತ್ತೆಯಾಗಿವೆ.

Advertisement

ಗೋವಾ ಮತ್ತು ಕರ್ನಾಟಕ ವಲಯದ ಐಟಿ ಅಧಿಕಾರಿಗಳು ಜ.19ರಂದು ರಮೇಶ್‌ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ, ಅವರ ಆಪ್ತರ ಮನೆಗಳ ಮೇಲೂ ದಾಳಿ
ನಡೆಸಲಾಗಿತ್ತು.

ಬೆಳಗಾವಿ, ಗೋಕಾಕ್‌ ಮತ್ತು ಬೆಂಗಳೂರಿನ ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಇವರು ತಾವು ನಡೆಸುತ್ತಿರುವ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಹಾಗೂ ಆದಾಯ ಮತ್ತು ಬಂಡವಾಳ ಹೂಡಿಕೆ ಮಾಡಿರುವ ಕುರಿತು ಸರಿಯಾದ
ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡದಿರುವುದು ದಾಳಿ ವೇಳೆ ಕಂಡು ಬಂದಿತ್ತು. ದಾಳಿ ವೇಳೆ, 162.06 ಕೋಟಿ ರೂ. ಘೋಷಣೆ ಮಾಡದ ನಗದು ಪತ್ತೆಯಾಗಿದೆ. ಅಲ್ಲದೆ, 41 ಲಕ್ಷ ರೂ.ಬಗ್ಗೆ ಅಧಿಕಾರಿಗಳಿಗೆ ಸೂಕ್ತ ವಿವರಣೆ ನೀಡಿಲ್ಲ. ಹೀಗಾಗಿ ಆ ಎಲ್ಲಾ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, 12.8 ಕೆ.ಜಿ.ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅಲ್ಲದೆ, ಪರಿಶೀಲನೆ ವೇಳೆ ಹಲವು ಕಡತಗಳು ಪತ್ತೆಯಾಗಿದ್ದು, ಅವುಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಹಲವು ರೀತಿಯಲ್ಲಿ ಅಕ್ರಮ:
ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಟಾಳಕರ್‌ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಸಕ್ಕರೆ ವ್ಯವಹಾರ ನಡೆಸುತ್ತಿದ್ದಾರೆ. ಇಬ್ಬರೂ ಆದಾಯ ತೆರಿಗೆ ಇಲಾಖೆಗೆ ಒಂದೇ ಮಾದರಿಯಲ್ಲಿ ವಂಚಿಸಿರುವುದು
ಗೊತ್ತಾಗಿದೆ.

ತೆರಿಗೆ ವಂಚನೆಯಲ್ಲಿ ಇಬ್ಬರು ಸಂಸ್ಥೆಗಳ ಪೂರೈಕೆದಾರರು ಸೇರಿ ಇತರರು ಭಾಗಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಅವರನ್ನು ಸಹ ಹೆಚ್ಚಿನ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ. ಕೋ-ಆಪರೇಟಿವ್‌ ಸೊಸೈಟಿಯಿಂದ ಅವರಿಬ್ಬರ ವ್ಯವಹಾರಗಳಿಗೆ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. 

Advertisement

ಅಲ್ಲದೆ, ಸಕ್ಕರೆ ಕಂಪನಿಯಲ್ಲಿ ಸಂಬಂಧಪಡದ ವ್ಯಕ್ತಿಗಳನ್ನು ಷೇರುದಾರರನ್ನಾಗಿ ಮತ್ತು ಹೂಡಿಕೆದಾರರನ್ನಾಗಿ ಮಾಡಿಕೊಂಡಿರುವುದು ದಾಖಲೆಗಳ ಪರಿಶೀಲನೆ ವೇಳೆ ಬಹಿರಂಗಗೊಂಡಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯವಹಾರ ನಡೆಸಲಾಗಿದೆ. ಬೇರೆ, ಬೇರೆ ಯೋಜನೆಗಳಿಗೆ ಹಣದ ದುರ್ಬಳಕೆ ಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಮಾಹಿತಿ ಕಲೆ ಹಾಕಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

– 12.8 ಕೇಜಿಯಷ್ಟು ಚಿನ್ನಾಭರಣ ಪತ್ತೆ
– ಐಟಿ ದಾಳಿಯಿಂದ ಮಾಹಿತಿ ಬಯಲು

Advertisement

Udayavani is now on Telegram. Click here to join our channel and stay updated with the latest news.

Next