Advertisement

ಕೂಡ್ಲಿಗಿ ಉಸ್ತುವಾರಿಯಿಂದ ಸಚಿವ ಜಾರಕಿಹೊಳಿಗೆ ಕೊಕ್‌?

06:00 AM Oct 28, 2018 | Team Udayavani |

ಬಳ್ಳಾರಿ: ಲೋಕಸಭೆ ಉಪಚುನಾವಣೆಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿದ್ದ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಕೈಬಿಟ್ಟಿರುವ ಪ್ರದೇಶ ಕಾಂಗ್ರೆಸ್‌ ಸಮಿತಿ ಆ ಸ್ಥಾನಕ್ಕೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರನ್ನು ನಿಯೋಜಿಸಿದೆ. ಜಿಲ್ಲಾ
ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಜಾರಕಿಹೊಳಿ ನಡುವಿನ ಬೆಳಗಾವಿ ಮುನಿಸು ಈ ಉಪಚುನಾವಣೆ ಮೇಲೂ ಪ್ರಭಾವ ಬೀರುವ ಸಾಧ್ಯತೆ ಈ ದಿಢೀರ್‌ ಬದಲಾವಣೆಗೆ ಕಾರಣ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಎರಡು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್‌, ಗಣಿ ನಾಡು ಬಳ್ಳಾರಿಯ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಮಾತ್ರ ಪಕ್ಷದ ಹಿರಿಯ
ಮುಖಂಡ ವಿ.ಎಸ್‌.ಉಗ್ರಪ್ಪ ಅವರನ್ನು ಕಣಕ್ಕಿಳಿಸಿದೆ. 

Advertisement

ಜವಾಬ್ದಾರಿ ಬದಲು: ಜಿಲ್ಲೆಯಲ್ಲಿ ಆರು ಕಾಂಗ್ರೆಸ್‌ ಶಾಸಕರಿದ್ದರೂ, ಉಪಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಕಾಂಗ್ರೆಸ್‌, ಗೆಲ್ಲಲು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ತಲಾ ಒಬ್ಬೊಬ್ಬ ಸಚಿವರನ್ನು
ಉಸ್ತುವಾರಿಯನ್ನಾಗಿ ನಿಯೋಜಿಸಿದೆ. ಈ ಪೈಕಿ ಸಚಿವ ಜಾರಕಿಹೊಳಿ ಅವರಿಗೆ ವಾಲ್ಮೀಕಿ ಸಮುದಾಯದ ಅತಿ ಹೆಚ್ಚು ಮತ ಹೊಂದಿರುವ ಕೂಡ್ಲಿಗಿ ಕ್ಷೇತ್ರದ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಕ್ಷೇತ್ರಕ್ಕೆ ಆಗಮಿಸಿದ ಮೊದಲ ದಿನವೇ ಅವರು ಮಾಧ್ಯಮಗಳ ಬಳಿ ಡಿ.ಕೆ. ಶಿವಕುಮಾರ್‌ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರೊಂದಿಗೆ ಶಮನವಾಗಿದೆ ಎಂದುಕೊಂಡಿದ್ದ ಬೆಳಗಾವಿ ಭಿನ್ನಮತ ಬಳ್ಳಾರಿಯಲ್ಲೂ ಕಾಣಿಸಿಕೊಂಡಿತ್ತು. ಇದು ಉಪಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೂಡ್ಲಿಗಿ ಉಸ್ತುವಾರಿಯಿಂದ ರಮೇಶ್‌ ಜಾರಕಿಹೊಳಿ ಅವರನ್ನು ಕೈಬಿಟ್ಟು, ಜಮಖಂಡಿ ಕ್ಷೇತ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

ಭುಗಿಲೆದ್ದ ಭಿನ್ನಮತ: ಬೆಳಗಾವಿಯಲ್ಲಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯದಲ್ಲಿ ಶುರುವಾಗಿದ್ದ ಜಾರಕಿಹೊಳಿ ಸಹೋದರರು ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಭಿನ್ನಮತ ಆಗಲೇ ಶಮನವಾಗಿದೆ ಎನ್ನಲಾಗಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿರಸ, ಕೂಡ್ಲಿಗಿಯಲ್ಲಿ ರಮೇಶ್‌ ಜಾರಕಿಹೊಳಿಯವರು, “ಡಿ.ಕೆ.ಶಿವಕುಮಾರ್‌ ಶೋ ಮಾಡೋದನ್ನು ಬಿಟ್ಟು ಕೆಲಸ ಮಾಡಲಿ’ ಎಂದು ಹೇಳುವ ಮೂಲಕ ಪುನಃ ಸ್ಫೋಟಗೊಂಡಿತ್ತು. ಅಲ್ಲದೇ, ಸತೀಶ್‌ ಜಾರಕಿಹೊಳಿಯವರೂ ಡಿಕೆಶಿ ಭಾಗಿಯಾಗಿದ್ದ ಪ್ರಚಾರ ಸಮಾವೇಶವೊಂದರಿಂದ ಹೊರ ನಡೆದಿದ್ದರು. ಇದು ಪಕ್ಷದಲ್ಲಿ ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೂಡ್ಲಿಗಿ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಟಿ.
ರಘುಮೂರ್ತಿಯವರನ್ನು ನಿಯೋಜಿಸಲಾಗಿದೆ.  ಅವರು ಸಹ ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡರಾಗಿದ್ದು, ಉಸ್ತುವಾರಿಗಳ
ಬದಲಾವಣೆಯಿಂದಾಗಿ ಪಕ್ಷದೊಳಗಿನ ಒಂದಷ್ಟು ಗೊಂದಲಗಳು ನಿವಾರಣೆಯಾಗಿವೆ. 

ನಾನೇ ಕ್ಷೇತ್ರ ಬದಲಿಸಿಕೊಂಡಿದ್ದೇನೆ
ಬಳ್ಳಾರಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಲಾಗಿತ್ತು. ನಾನೇ ಬದಲಾಯಿಸಿಕೊಂಡು ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಂದಿದ್ದೇನೆ. ನನ್ನ ಸ್ನೇಹಿತರಾಗಿದ್ದ
ಸಿದ್ದುನ್ಯಾಮಗೌಡರ ಮಗ ಚುನಾವಣೆಯಲ್ಲಿ ಸ್ಪ ರ್ಧಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಅಥಣಿ ಗಡಿಭಾಗದಲ್ಲಿ ಜಮಖಂಡಿ ಕ್ಷೇತ್ರದ 20 ಹಳ್ಳಿಗಳು ಬರಲಿದ್ದು, ಅಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಬಂದಿದ್ದೇನೆ. ಬಳ್ಳಾರಿಯಲ್ಲಿ ತುಂಬಾ ಜನರಿದ್ದಾರೆ. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಹೇಳಿ ನಾನೇ ಕ್ಷೇತ್ರವನ್ನು ಬದಲಿಸಿಕೊಂಡಿದ್ದೇನೆ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. 

ವೆಂಕೋಬಿ ಸಂಗನಕಲ್ಲು

Advertisement
Advertisement

Udayavani is now on Telegram. Click here to join our channel and stay updated with the latest news.

Next