ಬೆಳಗಾವಿ: ಸಚಿವ ಸ್ಥಾನ ಕಳೆದುಕೊಂಡ ನಂತರ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡು ಕಳೆದ ಒಂದು ವಾರದಿಂದ ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳದಲ್ಲಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೊನೆಗೂ ಗೋಕಾಕದಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಬುಧವಾರ ಬೆಳಗ್ಗೆ ಮತ್ತೆ ಯಾರಿಗೂ ಸೂಚನೆ ನೀಡದೆ ಅಜ್ಞಾತ ಸ್ಥಳಕ್ಕೆ ತೆರಳಿರುವ ರಮೇಶ ಜಾರಕಿಹೊಳಿ ಇನ್ನೂ ತಮ್ಮ ರಾಜಕೀಯ ನಡೆಯ ನಿಗೂಢತೆಯನ್ನು ಕಾಯ್ದುಕೊಂಡಿದ್ದಾರೆ.
ಮಂಗಳವಾರ ತಡರಾತ್ರಿ ಗೋಕಾಕಕ್ಕೆ ಆಗಮಿಸಿದ್ದ ಅವರು, ಬುಧವಾರ ಬೆಳಗ್ಗೆ ಸಹೋದರ ಸತೀಶ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಬೆಳಗ್ಗೆ ಯಾರಿಗೂ ತಮ್ಮ ಮುಂದಿನ ಕಾರ್ಯಕ್ರಮದ ಸುಳಿವು ನೀಡದೇ ಗೋಕಾಕದಿಂದ ಪ್ರಯಾಣ ಬೆಳೆಸಿದ್ದಾರೆ. ಆದರೆ ಎಲ್ಲಿಗೆ ಹೋದರು ಎಂಬುದು ತಿಳಿದಿಲ್ಲ ಎಂದು ಅವರ ಆಪ್ತ ಮೂಲಗಳು ಹೇಳಿವೆ.
ಬಲ್ಲ ಮೂಲಗಳ ಪ್ರಕಾರ ರಮೇಶ ಜಾರಕಿಹೊಳಿ ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ಮಾಲವಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಇದು ಖಚಿತಪಟ್ಟಿಲ್ಲ. ಇದರ ನಡುವೆ ನೀವು ಎಲ್ಲೇ ಇರಿ, ನಮ್ಮ ಕಣ್ಮುಂದೆ ಇರಿ ಎಂಬ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರ ರಮೇಶ ಜಾರಕಿಹೊಳಿ ಕುರಿತ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಮಾಡಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬುಧವಾರ ಗೋಕಾಕದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಸತೀಶ ಜಾರಕಿಹೊಳಿ ತಾವು ಇನ್ನೂ ಸಹೋದರ ರಮೇಶ ಅವರ ಜೊತೆ ಮಾತುಕತೆ ಮಾಡಿಲ್ಲ. ಅವರು ಇದುವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.