ಬೆಳಗಾವಿ: ಜಾರಕಿಹೊಳಿ ಸಹೋದರರ ವಾಕ್ಸಮರ ತಾರಕಕ್ಕೇರಿದ ಬೆನ್ನಲ್ಲೇ ಬುಧವಾರ ಬಿಜೆಪಿ ಹಿರಿಯ ಮುಖಂಡ ಗೋವಿಂದ ಕಾರಜೋಳ ಹಾಗೂ ರಮೇಶ ಜಾರಕಿಹೊಳಿ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಗೋವಿಂದ ಕಾರಜೋಳ, “ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮೊದಲೇ ಮೈತ್ರಿ ಸರ್ಕಾರ ಪತನವಾಗಲಿದೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಹಲವಾರು ಶಾಸಕರು ಹೊರ ಬರುತ್ತಾರೆ. ಕಾಂಗ್ರೆಸ್‌ನಲ್ಲಿ ನಾಯಕರೇ ಇಲ್ಲ.
ಜೆಡಿಎಸ್ ಒಂದೇ ಮನೆಯ ಪಾರ್ಟಿಯಾಗಿದ್ದಕ್ಕೆ ಕೆಲವು ಶಾಸಕರು ಹೊರ ಬರುತ್ತಿದ್ದಾರೆ. ನಾನು ಬೆಂಗಳೂರಿಗೆ ಹೋಗುತ್ತಿರುವುದಕ್ಕೂ ನನ್ನ ಜೊತೆ ವಿಮಾನದಲ್ಲಿ ರಮೇಶ ಜಾರಕಿಹೊಳಿ ಬರುತ್ತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬರುವುದಾದರೆ ಸ್ವಾಗತ. ರಮೇಶ್ ಜೊತೆಗೆ ಇನ್ನೂ ಅನೇಕ ಶಾಸಕರು ಇದ್ದಾರೆ. ಆದರೆ, ಬರುವವರೆಗೆ ಕಾಯಬೇಕು’ ಎಂದರು.
ರಮೇಶ ಜಾರಕಿಹೊಳಿ ಪಕ್ಷ ತೊರೆಯುವುದಿಲ್ಲ ಎಂಬ ವಿಶ್ವಾಸವಿದೆ. ನಂಬರ್ ಗೇಮ್‌ನಿಂದ ಸರ್ಕಾರ ನಡೆಯುತ್ತವೆ. ಐದಾರು ಶಾಸಕರು ವಿನಾಕಾರಣ ಪಕ್ಷ ಬಿಡುವ ಮಾತುಗಳನ್ನಾಡುತ್ತಿದ್ದಾರೆ. ಈ ಸಂಖ್ಯಾ ಆಟದೊಂದಿಗೆ ಸರ್ಕಾರ ಬೀಳಿಸಬೇಕು ಎಂಬುದು ರಾಜ್ಯದ್ರೋಹದ ಕೆಲಸ. ಅವರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ.
-ಎಚ್.ಕೆ.ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ.