Advertisement

ರಮೇಶ್‌ ಜಾರಕಿಹೊಳಿಗೆ ಕೊಕ್‌?

03:45 AM Jan 25, 2017 | Team Udayavani |

ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ನೂರಾರು ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಪತ್ತೆ ಪ್ರಕರಣಕ್ಕೆ 
ಸಂಬಂಧಿಸಿದಂತೆ ಸಣ್ಣ ಕೈಗಾರಿಕೆ ಸಚಿವ ರಮೇಶ್‌ ಜಾರಕಿಹೊಳಿ ತಲೆದಂಡಕ್ಕೆ ಕಾಂಗ್ರೆಸ್‌ ಪಾಳಯದಲ್ಲಿ ವೇದಿಕೆ ಸಜ್ಜಾಗಿದೆ.

Advertisement

ಸಚಿವ ರಮೇಶ್‌ ಜಾರಕಿಹೊಳಿ ಅವರ ಒಡೆತನಕ್ಕೆ ಸೇರಿದ ಸಕ್ಕರೆ ಕಾರ್ಖಾನೆ ಮತ್ತು ನಿವಾಸ ಹಾಗೂ ಕಚೇರಿಗಳಲ್ಲಿ
ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು ಸಾರ್ವಜನಿಕವಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಮುನ್ನವೇ ರಮೇಶ್‌ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್‌ ಅವರು ಸಚಿವ ಜಾರಕಿಹೊಳಿಗೆ ತಮ್ಮನ್ನು ಭೇಟಿ ಮಾಡಿ ಐಟಿ ದಾಳಿ ಬಗ್ಗೆ ಮಾಹಿತಿ ನೀಡುವಂತೆ
ನಿರ್ದೇಶಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಜಾರಕಿಹೊಳಿ ವಿರುದ್ದ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ
ಎನ್ನಲಾಗಿದೆ. ಈ ನಡುವೆ, ತಮ್ಮನ್ನು ಸಂಪುಟ ದಿಂದ ಕೈ ಬಿಟ್ಟು ಸಹೋದರ ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ
ನೀಡಿದ್ದ ವಿದ್ಯಮಾನದಿಂದ ಅತೃಪ್ತಗೊಂಡು ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಿಂದಲೇ ದೂರ ಸರಿದಿದ್ದ ಸತೀಶ್‌ ಜಾರಕಿಹೊಳಿ, ಅವಕಾಶ ಸಿಕ್ಕರೆ ಮತ್ತೂಮ್ಮೆ ಮಂತ್ರಿಯಾಗುವ ಕನಸು ಕಾಣತೊಡಗಿದ್ದಾರೆ.  ಐಟಿ ದಾಳಿಯಿಂದ ತಮಗೆ ಬಂದಿರುವ ಕಳಂಕವನ್ನು
ನಿವಾರಿಸಿ ಸಚಿವ ಸ್ಥಾನ ಉಳಿಸಿಕೊಳ್ಳಲು ರಮೇಶ್‌ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸತೊಡಗಿದ್ದಾರೆ. ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಇಬ್ಬರೂ ಒಂದೆರೆಡು ದಿನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು
ಪ್ರತ್ಯೇಕವಾಗಿ ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಈತನ್ಮಧ್ಯೆ ಮಂಗಳವಾರ ಬೆಳಗ್ಗೆ ಸಚಿವ ರಮೇಶ್‌ ಜಾರಕಿಹೊಳಿ ಬೆಂಗಳೂರು ನಗರದಲ್ಲಿರುವ ಸರ್ಕಾರಿ ನಿವಾಸಕ್ಕೆ ಆಗಮಿಸಿದರಾದರೂ  ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದ ಕಾರಣ ಅವರ ಭೇಟಿ
ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್‌. ಕೆ.ಅತೀಕ್‌ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚಿಸಿದರು.

ಕೈವಾಡ ಶಂಕೆ 
ಸಚಿವ ರಮೇಶ್‌ ಜಾರಕಿಹೊಳಿ ಅವರ ಸಕ್ಕರೆ ಕಾರ್ಖಾನೆ ಹಾಗೂ ನಿವಾಸದ ಮೇಲೆ ಐಟಿ ದಾಳಿಯ ಹಿಂದೆ ಬೆಳಗಾವಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್‌ ಮುಖಂಡನ ಕೈವಾಡ ಇರಬಹುದೆಂದು ರಾಜಕೀಯ ವಲಯದಲ್ಲಿ ಶಂಕೆ ವ್ಯಕ್ತವಾಗಿದೆ. ಐಟಿ ದಾಳಿಗೆ 
ಗುರಿಯಾಗಿರುವ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಿ ಹೆಬ್ಟಾಳ್ಕರ್‌ ಅವರು ಐಟಿ ದಾಳಿಯ ಹಿಂದೆ ಕಾಂಗ್ರೆಸಿಗರ ಪಾತ್ರ ಇರುವುದರ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದಾರೆ ಎಂದು “ಉದಯವಾಣಿ’ಗೆ ವಿಶ್ವಸನೀಯ
ಮೂಲಗಳು ತಿಳಿಸಿವೆ.

Advertisement

ಉದಯವಾಣಿ ವರದಿ 
ಐಟಿ ದಾಳಿಗೂ ಮುನ್ನವೇ ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಸತೀಶ್‌ ಜಾರಕಿಹೊಳಿ ಅವರನ್ನು ಸೇರ್ಪಡೆ ಮಾಡಿಕೊಳ್ಳುವ  ಪ್ರಯತ್ನಗಳು ನಡೆದಿದ್ದವು. ಈ ಬಗ್ಗೆ ಉದಯವಾಣಿ ಮೂರು ದಿನಗಳ ಹಿಂದೆಯೇ ವಿಶೇಷ ವರದಿ ಮಾಡಿ ಗಮನ ಸೆಳೆದಿತ್ತು.

ನನ್ನ ತೇಜೋವಧೆ ಯತ್ನ ಐಟಿ ದಾಳಿ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಐಟಿ ದಾಳಿ ನನ್ನ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಮೆಲೆ ಆಗಿದೆಯಷ್ಟೆ. ವೈಯಕ್ತಿಕ ಸಂಪತ್ತಿನ ಮೇಲೆ ಆಗಿಲ್ಲ. ನಾನು ಯಾವುದೇ ಅಕ್ರಮ ಆಸ್ತಿ ಮಾಡಿಲ್ಲ. 12 ಕೆ.ಜಿ. ಚಿನ್ನ ಪತ್ತೆಯಾಯಿತು ಎಂಬುದು ಸುಳ್ಳು. ಐಟಿ ದಾಳಿಯ ಮಾಹಿತಿ ಬಹಿರಂಗಪಡಿಸುವಂತಿಲ್ಲ. ಇಂತಹ ಪ್ರಯತ್ನಗಳ ಹಿಂದೆ ನನ್ನ ತೇಜೋವಧೆ ಮಾಡುವ ಉದ್ದೇಶವೂ ಇರಬಹುದು. ನಾನು ನನ್ನದೇ ಆದ ರೀತಿಯಲ್ಲಿ ಕಾನೂನು ಹೋರಾಟ ನಡೆಸುತ್ತೇನೆ.
ರಮೇಶ್‌ ಜಾರಕಿಹೊಳಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next