Advertisement

ಪ್ಯಾರಿಸ್‌ನಿಂದ ಹಾರಿಬಂದ ಬಟರ್‌ಫ್ಲೈ!

02:34 PM Dec 28, 2017 | Team Udayavani |

ಅದು ದೂರದ ಪ್ಯಾರಿಸ್‌. ಅಲ್ಲಿ ತಯಾರಾಗುತ್ತಿದ್ದದ್ದು ಒಂದಲ್ಲ, ಎರಡಲ್ಲ, ಒಟ್ಟಿಗೆ ನಾಲ್ಕು ಭಾಷೆಯ ಚಿತ್ರಗಳು, ಕಲಾವಿದರು, ತಂತ್ರಜ್ಞರು ಸೇರಿ 152 ಜನರ ನಿರಂತರ ಕೆಲಸ. ಬರೋಬ್ಬರಿ 42 ದಿನಗಳ ಕಾಲ ವಿದೇಶದಲ್ಲೇ ಬೀಡು…! ಇದು ರಮೇಶ್‌ ಅರವಿಂದ್‌ ನಿರ್ದೇಶನದ “ಬಟರ್‌ಫ್ಲೈ’ ಚಿತ್ರದ ಸುದ್ದಿ. ಹೌದು, ಬಾಲಿವುಡ್‌ನ‌ಲ್ಲಿ ಸೂಪರ್‌ ಹಿಟ್‌ ಎನಿಸಿಕೊಂಡು ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡ “ಕ್ವೀನ್‌’ ಚಿತ್ರ ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ.
 
ಮನುಕುಮಾರ್‌ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರಗಳಿಗೆ ನಿರ್ಮಾಪಕರು. ಶೇ.80 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಪ್ಯಾರಿಸ್‌ನಲ್ಲಾದ ಚಿತ್ರೀಕರಣ ಅನುಭವ ಕುರಿತು ಹೇಳಿಕೊಂಡಿದ್ದು ಹೀಗೆ. ನಿರ್ದೇಶಕ ರಮೇಶ್‌ ಅರವಿಂದ್‌ ಅವರಿಗೆ ಎಂದಿಗಿಂತಲೂ ತುಸು ಹೆಚ್ಚು ಖುಷಿಯಾಗಿದೆ. ಅದಕ್ಕೆ ಕಾರಣ, “ಬಟರ್‌ಫ್ಲೈ’ ಮೂಡಿ ಬಂದಿರುವ ರೀತಿ. “ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ದೇಶನ ಮಾಡುತ್ತಿರುವ ರಮೇಶ್‌ ಅರವಿಂದ್‌ಗೆ ಪ್ಯಾರಿಸ್‌ನಲ್ಲಿ ಸಾಕಷ್ಟು ಅನುಭವ ಆಗಿದೆ. ಅಷ್ಟು ದಿನ ಅಲ್ಲಿದ್ದ ಅವರು, ಫ್ರೆಂಚ್‌ ಭಾಷೆಯಲ್ಲಿ ಸುಸ್ವಾಗತ, ವಂದನೆಗಳು ಸೇರಿದಂತೆ ಇತ್ಯಾದಿ ಕನ್ನಡ ಪದಗಳಿಗೆ ಫ್ರೆಂಚ್‌ ಭಾಷೆಯಲ್ಲಿ ಹೇಗೆಲ್ಲಾ ಹೇಳಬೇಕೆಂಬುದನ್ನು ಕಲಿತಿದ್ದಾರೆ. ಅದೊಂದು ಸಾಧನೆ ಅಂತಾನೂ ಅವರು ಭಾವಿಸಿಕೊಂಡಿದ್ದಾರೆ. ಇನ್ನು, ಪ್ಯಾರಿಸ್‌ ದೇಶದಲ್ಲಿ ನಾಲ್ಕು ಭಾಷೆಯ ಚಿತ್ರ ಕಲಾವಿದರು, ತಂತ್ರಜ್ಞರು ಸೇರಿದಂತೆ ಸುಮಾರು 150 ಜನರನ್ನು ಕರೆದುಕೊಂಡು ಹೋಗಿದ್ದು ಬಹುಶಃ ಚಿತ್ರರಂಗದ ಇತಿಹಾಸ ಎನ್ನಬಹುದೇನೋ. 

Advertisement

ಅದೇನೆ ಇರಲಿ, ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ “ಬಟರ್‌ ಫ್ಲೈ’ನಲ್ಲಿ ಪಾರುಲ್‌ ಯಾದವ್‌ ನಟಿಸಿದರೆ, ತಮಿಳಿನಲ್ಲಿ ಕಾಜಲ್‌ಅಗರ್‌ವಾಲ್‌ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ತಮನ್ನಾ ಭಾಟಿಯ ಮತ್ತು ಮಲಯಾಳಂನಲ್ಲಿ ಮಂಜು ಮನೋಹರ್‌ ನಟಿಸುತ್ತಿದ್ದಾರೆ. ರಮೇಶ್‌ ಅರವಿಂದ್‌ ಅವರಿಗೆ ಪಾರುಲ್‌ ಯಾದವ್‌ ಅವರ ನಟನೆ ನೋಡಿ ಇನ್ನಷ್ಟು ಉತ್ಸಾಹ ಮೂಡಿದ್ದು ನಿಜವಂತೆ. ಕಾರಣ, ಮೈನಸ್‌ ಐದು ಉಷ್ಣಾಂಶದಲ್ಲೇ ಪಾರುಲ್‌ ಒಂದಷ್ಟೂ ಬೇಸರಿಸಿಕೊಳ್ಳದೇ, ಉತ್ಸಾಹದಿಂದ ನಟಿಸಿದ್ದಾರಂತೆ. ಇನ್ನು, ಕ್ಯಾಮೆರಾಮೆನ್‌ ಸತ್ಯಹೆಗಡೆ ಅವರ ಕೆಲಸವನನೂ ಕೊಂಡಾಡುವ ರಮೇಶ್‌ ಅರವಿಂದ್‌, ಇದೊಂದು ಬೇರೆ ರೀತಿಯ ಅನುಭವ ಕಟ್ಟಿಕೊಟ್ಟಿದೆ. 

ಗೋಕರ್ಣ, ಫ್ರಾನ್ಸ್‌ ಇತರೆಡೆ ಚಿತ್ರೀಕರಣ ಮಾಡಿದ್ದು, ಬಹುತೇಕ ಮುಗಿಯುತ್ತಾ ಬಂದಿದೆ. ನಾಲ್ಕು ಭಾಷೆಯ ಚಿತ್ರಗಳಿಗೆ ಒಂದು ಹಂತದ ಚಿತ್ರೀಕರಣ ಬಾಕಿ ಮಾತ್ರ ಉಳಿದಿದ್ದು, ಆಯಾ ಭಾಷೆಯ ನೇಟಿವಿಟಿಯನ್ನು ಚಿತ್ರೀಕರಿಸಿದರೆ ಚಿತ್ರೀಕರಣ ಮುಗಿಯಲಿದೆ ಎಂಬುದು ರಮೇಶ್‌ ಅರವಿಂದ್‌ ಅವರ ಮಾತು. ನಾಯಕಿ ಪಾರುಲ್‌ ಯಾದವ್‌ ಅವರಿಗೆ ಇದು ಹೊಸ ಇಮೇಜ್‌ ತಂದುಕೊಡುತ್ತೆ ಎಂಬ ಅದಮ್ಯ ವಿಶ್ವಾಸವಿದೆ. ಅವರಿಲ್ಲಿ ಪಾರ್ವತಿ ಎಂಬ ಪಾತ್ರ ನಿರ್ವಹಿಸಿದ್ದಾರೆ. ಅವರೇ ಹೇಳುವಂತೆ, “ಇದು ಎಲ್ಲಾ ತಾಯಂದಿರು, ಅಕ್ಕ, ತಂಗಿಯರು ನೋಡುವಂತಹ ಚಿತ್ರ. ಈಗಿನ ಯುವತಿಯರಿಗೂ ಅನ್ವಯವಾಗುವ ಸಿನಿಮಾ.

ಮದುವೆ ಬಳಿಕ ಗೋಕರ್ಣದಿಂದ ಪ್ಯಾರಿಸ್‌ಗೆಹಾರಿದ ಬಳಿಕ ಅಲ್ಲಿ ಆಗುವಂತಹ ಘಟನೆಗಳು ಸಿನಿಮಾದ ಹೈಲೈಟ್‌. ಅವೆಲ್ಲವನ್ನು ಹೇಗೆ ಎದುರಿಸಿ ಹೊರಬರುತ್ತಾಳೆ ಅನ್ನೋದು ಕಥೆ ಎಂಬುದು ಪಾರುಲ್‌ ಮಾತು. ಇನ್ನು, ಛಾಯಾಗ್ರಾಹಕ ಸತ್ಯಹೆಗಡೆ ಅವರಿಗೆ ಪ್ಯಾರಿಸ್‌ನಲ್ಲಿ ಮಾಡಿದ ಕೆಲಸ ಮರೆಯಲು ಸಾಧ್ಯವಿಲ್ಲವಂತೆ. ಸೆಟ್‌ನಲ್ಲಿ ರಮೇಶ್‌ ಅರವಿಂದ್‌ ಇರುತ್ತಿದ್ದ ರೀತಿ, ಅವರ ತಾಳ್ಮೆ, ಕೆಲಸ ತೆಗೆದುಕೊಳ್ಳುತ್ತಿದ್ದ ಬಗೆ ಎಲ್ಲವೂ ಉತ್ಸಾಹದಿಂದ ಕೆಲಸ ಮಾಡೋಕೆ ಕಾರಣವಾಯ್ತು’ ಎನ್ನುತ್ತಾರೆ ಅವರು. ಮಮತಾ ಸಾಗರ್‌ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರು ಪಾರುಲ್‌ ಅವರ ಬಾಡಿಲಾಂಗ್ವೇಜ್‌ ನೋಡಿಕೊಂಡೇ ಮಾತುಗಳನ್ನು ಪೋಣಿಸಿದ್ದಾರಂತೆ. ನಿರ್ಮಾಪಕ ಮನುಕುಮಾರ್‌ ಅವರಿಗೆ ಒಳ್ಳೆಯ ಸಿನಿಮಾ ಮಾಡಿರುವ ಖುಷಿ. ಅಮಿತ್‌ ತ್ರಿವೇದಿ ಜಯಂತ್‌ಕಾಯ್ಕಣಿ ರಚಿಸಿರುವ ಆರು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next