Advertisement

ಬಿಡುವಿಲ್ಲದ ಕೆಲಸದಿಂದ ಬಳಲಿದ್ದರು ರಮೀಳಾ

12:29 PM Oct 06, 2018 | |

ಬೆಂಗಳೂರು: ಬಿಬಿಎಂಪಿಯ ನೂತನ ಉಪಮೇಯರ್‌ ಆಗಿ ಅಧಿಕಾರ ಸ್ವೀಕರಿಸಿದ್ದ ಜೆಡಿಎಸ್‌ನ ರಮೀಳಾ ಉಮಾಶಂಕರ್‌ ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. 

Advertisement

ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ ಡಾ.ಜಿ.ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶೆಂಪೂರ್‌, ಶಾಸಕರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಚ್‌.ಎಂ.ರೇವಣ್ಣ, ರಾಮಲಿಂಗಾರೆಡ್ಡಿ, ಟಿ.ಎ.ಶರವಣ, ಮುಖ್ಯಮಂತ್ರಿಗಳ ಪತ್ನಿ ಅನಿತಾ ಕುಮಾರಸ್ವಾಮಿ, ಮೇಯರ್‌ ಗಂಗಾಂಬಿಕೆ, ಮಾಜಿ ಮೇಯರ್‌ ಸಂಪತ್‌ರಾಜ್‌, ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಸೇರಿದಂತೆ ನಗರ ಶಾಸಕರು, ಪಾಲಿಕೆ ಸದಸ್ಯರು, ಬೆಂಬಳಿಗರು ಗೋವಿಂದರಾಜ ನಗರದ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ!: ರಮೀಳಾ ಅವರು ಮಧುಮೇಹ ಹಾಗೂ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ರಮೀಳಾ ಅವರು ಮೇಯರ್‌ ಮತ್ತು ಉಪಮೇಯರ್‌ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಿ ಸರಿಯಾಗಿ ಔಷಧಗಳನ್ನು ತೆಗೆದುಕೊಂಡಿರಲಿಲ್ಲ. ಜತೆಗೆ ಉಪಮೇಯರ್‌ ಆಗಿ ಆಯ್ಕೆಯಾದ ಬಳಿಕ ಬಿಡುವಿಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು. ಜತೆಗೆ ತಮ್ಮ ಕಚೇರಿಗೆ ಪೂಜೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರೊಂದಿಗೆ ಹೆಚ್ಚು ಸಿಹಿ ಪದಾರ್ಥ ಸೇವಿಸಿದ್ದರು ಎಂದು ಹೇಳಲಾಗಿದೆ.

ಅಧಿಕಾರದಲ್ಲಿದ್ದಾಗ ಮೃತಪಟ್ಟ ಎರಡನೇ ಉಪಮೇಯರ್‌: ನಗರ ಪಾಲಿಕೆ ವಿಭಾಗಗಳು ಅಸ್ತಿತ್ವದಲ್ಲಿದ್ದಾಗ ಗಣೇಶ ಮಂದಿರ ವಿಭಾಗದ ತ್ಯಾಗರಾಜನಗರ ವಾರ್ಡ್‌ನ ಸದಸ್ಯರಾಗಿದ್ದ ವೆಂಕಟರಮಣ ಎಂಬುವವರು 1983-84ರಲ್ಲಿ ಉಪಮೇಯರ್‌ ಆಗಿ ಅಧಿಕಾರದಲ್ಲಿದ್ದಾಗಲೇ ಮೃತಪಟ್ಟಿದ್ದರು. ಇದೀಗ ರಮೀಳಾ ಉಮಾಶಂಕರ್‌ ಅವರು ಅಧಿಕಾರದಲ್ಲಿದ್ದಾಗ ಮೃತಪಟ್ಟ ಎರಡನೇ ಉಪಮೇಯರ್‌. 

ಮೂರನೇ ಸಾವು: ರಮೀಳಾ ಅವರು ಬಿಬಿಎಂಪಿಯ ಹಾಲಿ ಅವಧಿಯಲ್ಲಿ ಮೃತಪಟ್ಟ ಮೂರನೇ ಸದಸ್ಯರಾಗಿದ್ದಾರೆ. ಈ ಮೊದಲು ಲಕ್ಕಸಂದ್ರ ವಾರ್ಡ್‌ನ ಮಹೇಶ್‌ ಬಾಬು ಹಾಗೂ ಬಿನ್ನಿಪೇಟೆ ವಾರ್ಡ್‌ನ ಮಹದೇವಮ್ಮ ಮೃತಪಟ್ಟಿದ್ದರು. 

Advertisement

ಮೊದಲು ಉಪಮೇಯರ್‌ ಚುನಾವಣೆ: ರಮೀಳಾ ಅವರ ನಿಧನದಿಂದ ತೆರವಾಗಿರುವ ಉಪಮೇಯರ್‌ ಸ್ಥಾನಕ್ಕೆ ಮತ್ತೂಮ್ಮೆ ಚುನಾವಣೆ ನಡೆಯಲಿದೆ. ಕೌನ್ಸಿಲ್‌ ಕಾರ್ಯದರ್ಶಿಗಳು ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದ ನಂತರದಲ್ಲಿ ಚುನಾವಣೆ ದಿನಾಂಕ ನಿಗದಿಯಾಗಲಿದೆ. ಜತೆಗೆ ಕಾವೇರಿಪುರ ವಾರ್ಡ್‌ ಪಾಲಿಕೆ ಸದಸ್ಯ ಸ್ಥಾನಕ್ಕೂ ಆರು ತಿಂಗಳೊಳಗೆ ಚುನಾವಣಾ ಆಯೋಗ ಚುನಾವಣೆ ನಡೆಸುವ ಸಾಧ್ಯತೆಯಿದೆ.

ರಮೀಳಾ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಬಹಳ ನೋವಾಗಿದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ಮಹಿಳಾ ಪ್ರತಿನಿಧಿಯಾಗಿದ್ದರು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ರಮೀಳಾ ಅವರ ನಿಧನ ಸುದ್ದಿ ತಿಳಿದು ದಿಗ್ಭ್ರಮೆಯಾಗಿದ್ದು, ನಿನ್ನೆಯಷ್ಟೇ ಅವರು ನಮ್ಮ ಮೆಟ್ರೋ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಭಾಗವಹಿಸಿದ್ದರು. ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದ ಅವರ ಅಗಲಿಕೆಯ ದುಃಖ ಭರಿಸುವ ಸ್ಥೈರ್ಯವನ್ನು ಅವರ ಕುಟುಂಬಕ್ಕೆ ಸಿಗಲಿ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ 

ರಮೀಳಾ ನನಗೆ 25 ವರ್ಷಗಳಿಂದ ಪರಿಚಿತರು, ಹಲವು ಬಾರಿ ಅವರ ಮನೆಗೆ ಬಂದಿದ್ದೇನೆ. ಉಪಮೇಯರ್‌ ಆಗಿ ಆಯ್ಕೆಯಾದ ಬಳಿಕ ಆಶೀರ್ವಾದ ಪಡೆಯಲು ನಮ್ಮ ಮನೆಗೆ ಬಂದಿದ್ದರು. ಅವರು ಹೃದಯಾಘಾತಕ್ಕೆ ಒಳಗಾಗಿರುವುದು ನೋವುಂಟು ಮಾಡಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ 

ಉಪಮೇಯರ್‌ ರಮೀಳಾ ಅವರ ಅಕಾಲಿಕ ನಿಧನ ಅತೀವ ನೋವು ತಂದಿದ್ದು, ಸಕ್ರಿಯ ಜನಪ್ರತಿನಿಧಿಯಾಗಿದ್ದ ಅವರನ್ನು ದೇವರು ಇಷ್ಟು ಬೇಗ ಕರೆಸಿಕೊಳ್ಳಬಾರದಿತ್ತು. ಆ ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. 
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಗುರುವಾರ ಎರಡು ಕಾರ್ಯಕ್ರಮಗಳಲ್ಲಿ ರಮೀಳಾ ಅವರು ನಮ್ಮ ಜತೆಯಲ್ಲಿಯೇ ಇದ್ದರು. ಅವರು ವಿಧಿವಶರಾಗಿರುವುದು ಬಹಳ ನೋವುಂಟು ಮಾಡಿದ್ದು, ಉಪಮೇಯರ್‌ ಆಗಿ ಜನಪರ ಕೆಲಸ ಮಾಡುವ ಕನಸು ಹೊಂದಿದ್ದರು.
– ಡಾ.ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ 

ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ರಮೀಳಾ ಸದಾ ಕ್ರಿಯಾಶೀಲರಾಗಿದ್ದರು. ಆ ಕಾರಣಕ್ಕಾಗಿಯೇ ಉಪಮೇಯರ್‌ ಹುದ್ದೆಯನ್ನೂ ಅಲಂಕರಿಸಿದ್ದರು. ಅವರ ಅಕಾಲಿಕ ನಿಧನದಿಂದ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. 
-ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ 

ಉಪಮೇಯರ್‌ ಆಗಿ ಆಯ್ಕೆಯಾದ ಬಳಿಕ ಹಲವು ನಗರದ ಅಭಿವೃದ್ಧಿಗೆ ಪೂರಕವಾದ ಕೆಲ ಯೋಜನೆಗಳ ಬಗ್ಗೆ ಚರ್ಚಿಸಿದ್ದರು. ಬಿಬಿಎಂಪಿಯ ಎಲ್ಲ ಕಚೇರಿಗಳಿಗೆ ರಜೆ ಘೋಷಿಸಿದ್ದು, ಪಾಲಿಕೆಯಿಂದಲೇ ಅಂತ್ಯಕ್ರಿಯೆಯ ಜವಾಬ್ದಾರಿ ವಹಿಸಿಕೊಳ್ಳಲಾಗಿದೆ. 
-ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next