ತರುಣ್, ತರುಣ್ ಮತ್ತು ತರುಣ್ ….
– “ರ್‍ಯಾಂಬೋ -2′ ಚಿತ್ರದ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಅದೆಷ್ಟು ಬಾರಿ ತರುಣ್ ಹೆಸರು ಪ್ರಸ್ತಾಪವಾಯಿತೋ ಲೆಕ್ಕವಿಲ್ಲ. ವೇದಿಕೆ ಮೇಲಿದ್ದ 13 ಮಂದಿಯಲ್ಲಿ 12 ಮಂದಿ ತರುಣ್ ಹೆಸರು ಹೇಳದೇ ಮಾತು ಮುಗಿಸುತ್ತಿರಲಿಲ್ಲ. ಆ 13 ಮಂದಿಯಲ್ಲಿ ತರುಣ್ ಕೂಡಾ ಒಬ್ಬರಾಗಿದ್ದರಿಂದ ಅವರ ಹೆಸರನ್ನು ಅವರೇ ಹೇಳಿಕೊಳ್ಳುವಂತ್ತಿರಲಿಲ್ಲ. ನಿಮಗೆ ಗೊತ್ತಿರುವಂತೆ “ರ್‍ಯಾಂಬೋ-2′ ಶರಣ್ ನಾಯಕರಾಗಿರುವ ಚಿತ್ರ. “ರ್‍ಯಾಂಬೋ’ ಮೂಲಕ ಹೀರೋ ಆಗಿ ಬೆಳೆದವರು ಶರಣ್. ಆ ಸಿನಿಮಾದ ಹಿಂದೆಯೂ ತರುಣ್ ಇದ್ದರು. ಈಗ “ರ್‍ಯಾಂಬೋ-2′ ಚಿತ್ರದಲ್ಲೂ ತರುಣ್ ಸುಧೀರ್ ಇದ್ದಾರೆ. ಹಾಗಂತ ನಿರ್ದೇಶಕರಾಗಿ ಅಲ್ಲ, ಬದಲಾಗಿ ಸಿನಿಮಾದ ಕ್ರಿಯೇಟಿವ್ ಹೆಡ್ ಆಗಿ. ನಿರ್ದೇಶನದ ಜವಾಬ್ದಾರಿಯನ್ನು ಅನಿಲ್ ಅವರಿಗೆ ನೀಡಲಾಗಿದೆ. ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡ ಚಿತ್ರ ಈಗ ರೀರೆಕಾರ್ಡಿಂಗ್ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು.
ಚಿತ್ರ ಅದ್ಧೂರಿಯಾಗಿ ಮೂಡಿಬಂದ ಖುಷಿ ತರುಣ್ ಅವರಿಗಿದೆ. ಅದೇ ಖುಷಿಯಲ್ಲಿ ಅವರು ಮೈಕ್ ಎತ್ತಿಕೊಂಡರು. “ಇಲ್ಲಿ ಎಲ್ಲರೂ ನನ್ನ ಹೆಸರು ಹೇಳುತ್ತಿದ್ದಾರೆ. ಆದರೆ, ಪ್ರತಿಯೊಬ್ಬರು ಈ ಸಿನಿಮಾದಲ್ಲಿ ತುಂಬಾ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ಎಲ್ಲರ ಹುಮ್ಮಸ್ಸಿನ ಪರಿಣಾಮವಾಗಿ ಈ ಸಿನಿಮಾ ಮೂಡಿಬಂದಿದೆ. ಈ ಹಿಂದೆ ಮಾಡಿದ “ರ್‍ಯಾಂಬೋ’ ಎಲ್ಲರಿಗೂ ಒಂದು ಹೊಸ ದಾರಿ ಮಾಡಿಕೊಟ್ಟಿತು. ಅದೇ ರೀತಿ “ರ್‍ಯಾಂಬೋ-2′ ಕಥೆಯನ್ನು ಎಲ್ಲರೂ ಚರ್ಚಿಸಿ ಅಂತಿಮವಾಗಿ ಜೊತೆಯಾಗಿ ನಿರ್ಮಾಣ ಮಾಡಲು ಮುಂದಾದೆವು. ಆಗ ನಮಗೆ ಬೆಂಬಲವಾಗಿ ನಿಂತಿದ್ದು ಅಟ್ಲಾಂಟ ನಾಗೇಂದ್ರ’ ಎಂದರು ತರುಣ್.
ನಿರ್ದೇಶಕ ಅನಿಲ್ ಈ ಹಿಂದೆಯೇ ಶರಣ್ ಜೊತೆ ಸಿನಿಮಾ ಮಾಡಬೇಕಿತ್ತಂತೆ. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ಕೂಡಿ ಬಂದ ಖುಷಿ ಅವರದು. “ರ್‍ಯಾಂಬೋ ಒಂದು ಜರ್ನಿ ಸಬೆjಕ್ಟ್. ಶ್ರೀಲಂಕಾ ಬಾರ್ಡರ್‌ನಿಂದ ಪಾಕಿಸ್ತಾನ ಬಾರ್ಡರ್‌ವರೆಗೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಕಾರು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿಂದೆ ಶರಣ್-ಚಿಕ್ಕಣ್ಣ ತಮ್ಮ ಮಾತಿನ ಮೂಲಕ ನಗಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಮಾತಿಗಿಂತ ಅವರ ಬಾಡಿ ಲ್ಯಾಂಗ್ವೇಜ್, ನಟನೆಯಲ್ಲಿ ನಗಿಸುತ್ತಾರೆ’ ಎಂದರು. ನಾಯಕ ಶರಣ್‌ಗೆ ಮತ್ತೆ ಹಳೆ ತಂಡ ಜೊತೆಯಾದ ಖುಷಿ ಇದೆಯಂತೆ. “ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿ ಮಾತು ಕಡಿಮೆ ಇದೆ. ಹಾಗಂತ ಕಾಮಿಡಿಗೇನೂ ಭರವಿಲ್ಲ. “ರ್‍ಯಾಂಬೋ’ ನೋಡಿದವರಿಗೆ ಇದು ಅದರ ಮುಂದುವರಿದ ಭಾಗದಂತೆ ಕಾಣಬಹುದು. ಅದನ್ನು ನೋಡದೇ “ರ್‍ಯಾಂಬೋ-2′ ನೋಡುವವರಿಗೆ ಇದು ಬೇರೇಯೇ ಸಿನಿಮಾವಾಗಿ ಇಷ್ಟವಾಗಬಹುದು’ ಎಂಬುದು ಶರಣ್ ಮಾತು. ಚಿತ್ರದ ನಾಯಕ ಆಶಿಕಾ ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಲುಕ್‌ನ ಪಾತ್ರ ಸಿಕ್ಕಿದೆಯಂತೆ. ಚಿತ್ರದಲ್ಲಿ ಚಿಕ್ಕಣ್ಣ ಡಿಜೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದು ತಂತ್ರಜ್ಞರೆಲ್ಲರೂ ಸೇರಿಕೊಂಡು ಮಾಡಿರುವ ಸಿನಿಮಾ. ಇಲ್ಲಿ ಕೆಲಸ ಮಾಡಿದ ಬಹುತೇಕ ಮಂದಿ ನಿರ್ಮಾಣದ ಭಾಗವಾಗಿದ್ದಾರೆ. ಅದು ಚಿತ್ರದಲ್ಲಿ ನಟಿಸಿದ ಚಿಕ್ಕಣ್ಣನಿಂದ ಹಿಡಿದು ಕಲಾ ನಿರ್ದೇಶಕ ಮೋಹನ್ ಬಿ ಕೆರೆವರೆಗೂ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಸುಧಾಕರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿದೆ. ಅಂದಹಾಗೆ, ಇವರೆಲ್ಲರೂ ಈ ಸಿನಿಮಾದ ನಿರ್ಮಾಣದಲ್ಲೂ ತೊಡಗಿದ್ದಾರೆ. ಚಿತ್ರ ಶರಣ್ ಅವರ ಲಡ್ಡು ಸಿನಿಮಾಸ್‌ನಡಿ ತಯಾರಾಗುತ್ತಿದೆ.
ರವಿಪ್ರಕಾಶ್ ರೈ