ದಾವಣಗೆರೆ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ತೀವ್ರವಾಗಿ ಖಂಡಿಸಿದ್ದಾರೆ.
ಭಾನುವಾರ ದಾವಣಗೆರೆಯ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಜಗದ್ಗುರುಗಳು, ಅಹಿಂಸಾ ಮಾರ್ಗದಲ್ಲಿ ಸಾಗುತ್ತಿದ್ದ ಮತ್ತು ತಮ್ಮ ಕೈಯಿಂದ ಬಡ ಜನರಿಗೆ ಉಪಕಾರ ಮಾಡುತ್ತಿದ್ದ ಜೈನಮುನಿ ಕಾಮಕುಮಾರ ನಂದಿಮುನಿಗಳ ಅಮಾನುಷ ಹತ್ಯೆ ಇಡೀ ನಾಗರೀಕ ಪ್ರಪಂಚವೇ ತಲೆ ತಗ್ಗಿಸುವಂಥ ಘಟನೆಯಾಗಿದೆ ಎಂದು ವಿಷಾದಿಸಿದ್ದಾರೆ.
ಮಾನವೀಯತೆಯೇ ಇಲ್ಲದ ದುಷ್ಟ ಶಕ್ತಿಗಳು ಈ ಕೃತ್ಯ ಎಸೆಗಿದ್ದು, ತಪ್ಪತಸ್ಥರಿಗೆ ಕಠಿಣ ಶಿಕ್ಷೆಯನ್ನು ಸರ್ಕಾರ ವಿಧಿಸುವಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜಗದ್ಗುರುಗಳು, ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸುವವರಿಗೆ ಸರ್ಕಾರ ರಕ್ಷಣೆಯನ್ನು ಕೊಡಬೇಕು. ಅಲ್ಲದೇ ಇಂತಹ ಘಟನೆಗಳು ಮುಂದೆ ನಡೆಯಲಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ ಗ್ರಾಮ ಪಂಚಾಯತಿ, ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಲ್ಲಿ ಸಂಘರ್ಷ ಉಂಟಾಗಿ 12 ಜನರು ಸಾವಿಗೀಡಾಗಿದ್ದು ನೋವಿನ ಸಂಗತಿ. ರಾಜಕೀಯ ಅಧಿಕಾರ ಪಡೆಯಲು ವ್ಯಾಪಕವಾದ ಸಂಘರ್ಷಗಳು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿರುವುದು ಒಳ್ಳೆಯದಲ್ಲ. ರಾಜಕೀಯ ಧುರೀಣರು ಉದ್ರೇಕ ಭಾವನೆಗಳಿಂದ ಆಗುವ ಅನಾಹುತಕ್ಕೆ ಅವಕಾಶ ಕೊಡದೇ ಜನ ಸಮುದಾಯ ಪರಸ್ಪರ ಶಾಂತಿ ಸಾಮರಸ್ಯದಿಂದ ಬಾಳಲು ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಲಘಟಗಿಯ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ ಅಕಾಲಿಕ ನಿಧನಕ್ಕೆ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿ ಸಿದ್ದಾರೆ.