ಕುಷ್ಟಗಿ: ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಅಗಲಿ ಹೋಗುತ್ತಾರೆನ್ನುವುದು ಯಾರ ಕನಸು ಮನಸ್ಸಿನಲ್ಲಿ ಇರಲಿಲ್ಲ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದಂಗಳವರು ಹೇಳಿದರು.
ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಅರಳಲಿಕಟ್ಟಿ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗಳ,7ನೇ ಅಂಗಾಂಗ ಸಾಮರಸ್ಯದ ಪುಣ್ಯ ಸ್ಮರಣೋತ್ಸವ ಹಾಗೂ ಧರ್ಮಸಭೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜಕುಮಾರ ಅವರ ತಂದೆ ಡಾ.ರಾಜಕುಮಾರ ಅವರ ಕಾಲದಲ್ಲಿ ಪುನೀತ್ ಚಿಕ್ಕ ವಯಸ್ಸಿನಲ್ಲಿ ಸಿನಿಮಾರಂಗ ಪ್ರವೇಶ ಮಾಡಿ, ಅದ್ಬುತ ನಟನೆಯಿಂದ ತಮ್ಮದೇ ಚಾಪುಮೂಡಿಸಿದ್ದರು.
ಡಾ.ರಾಜಕುಮಾರ ಕುಟುಂಬದ ತೃತೀಯ ಸುಪುತ್ರ ಪುನೀತ ರಾಜಕುಮಾರ ಅವರು ಅನಿರೀಕ್ಷಿತವಾಗಿ, ಅಗಲಿದ್ದಾರೆ. ಕಲಾ ಪ್ರಪಂಚ, ಸಿನಿಮಾರಂಗ ಹಾಗೂ ಸಿನಿಮಾ ರಂಗಕ್ಕೆ ಅಪಾರ ನಷ್ಟವುಂಟಾಗಿದೆ. ಅವರು ಕೇವಲ 46ನೇ ವಯಸ್ಸಿನಲ್ಲಿ ಸಾಧಿಸಬೇಕಿದ್ದ ಎಲ್ಲಾ ಸಾಧನೆಗಳನ್ನು ಸಾಧಿಸಿ ಕಣ್ಮರೆಯಾಗಿದ್ದು ಇಡೀ ಚಿತ್ರರಂಗಕ್ಕೆ ಅಚ್ಚರಿ, ದುಃಖಕ್ಕೆ ಕಾರಣವಾಗಿದೆ ಎಂದರು.
ಸಾರ್ವಜನಿಕ ಕ್ಷೇತ್ರದಲ್ಲಿ ಪುನೀತ್ ರಾಜಕುಮಾರ ಅವರು ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದನ್ನು ಸ್ಮರಿಸಿದ ಜಗದ್ಗುರುಗಳು, ಡಾ.ರಾಜಕುಮಾರ ಅವರ ಆದರ್ಶ ಗುಣಗಳು, ಪುನೀತ ರಾಜಕುಮಾರ ಅವರಲ್ಲಿ ಮನೆ ಮಾಡಿದ್ದವು ಎನ್ನುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು. ಸಾರ್ವಜನಿಕ ಹಾಗೂ ಸೇವಾ ಕ್ಷೇತ್ರದಲ್ಲಿ ಅವರ ಕೊಡುಗೆ ಅಮೂಲ್ಯವಾಗಿದೆ. ಬಡವರ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ ಸಿನಿಮಾರಂಗದಲ್ಲಿ ಶ್ರಮಿಕ ಕಾರ್ಯಕರ್ತರ ಬಗ್ಗೆ, ಅವರ ಎಲ್ಲಿಲ್ಲದ ಅಭಿಮಾನ ಇತ್ತು ಎಂದರು.
ಪುನೀತ ರಾಜಕುಮಾರ ಅವರು, ಇನ್ನೂ ಬದುಕಿ ಬಾಳಿ ಕಲಾ ಪ್ರಪಂಚಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕಿತ್ತು. ಆದರೆ ಹಠಾತ್ ಹೃಧಯಘಾತ ದಿಂದ ನಿಧನರಾಗಿರುವುದು ನಾಡಿನ ಜನರಿಗೆ ದುಃಖಕ್ಕೆ ಕಾರಣವಾಗಿದೆ ಎಂದರು. ಅಗಲಿದ ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ಅನುಗ್ರಹಿಸಲಿ ಎಂದರು. ಪುನೀತ ಅಗಲಿಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಕರುಣಿಸಲಿ ಎಂದರು.