Advertisement
ರಾಮಾಯಣದ ಕಾಲಘಟ್ಟದಲ್ಲಿಯೇ ಸಾಗರೋತ್ತರ ನಾಡುಗಳೊಂದಿಗೆ ಸಂಪರ್ಕವಿದ್ದ ಸಂಗತಿಯನ್ನು ವಾಲ್ಮೀಕಿಗಳು ಹೇಳುತ್ತಾರೆ. ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕಲು ತನ್ನ ಸೈನ್ಯವನ್ನು ಕಳುಹಿಸುವ ಸಮಯದಲ್ಲಿ ಸುಗ್ರೀವನು ಸಾಗರದಾಚೆಯ ಅನೇಕ ನಾಡುಗಳ ವಿವರ ಕೊಡುತ್ತಾ, “ಸಪ್ತ ರಾಜ್ಯಗಳ ಸೊಬಗನ್ನು ಹೊಂದಿರುವ ಯವ (ಜಾವಾ) ದ್ವೀಪಗಳನ್ನೂ, ಹೇರಳವಾದ ಚಿನ್ನದ ಗಣಿಗಳಿಂದ ಕೂಡಿರುವ ಸುವರ್ಣ ದ್ವೀಪಗಳನ್ನೂ (ಸುಮಾತ್ರಾ) ಹೆಸರಿಸುತ್ತಾನೆ.
ಸಾಗರದಾಚೆ ಹಬ್ಬಿದ ಬಗೆ: ರಾಮಾಯಣದಲ್ಲಿ ರಾಮನ ಸೈನ್ಯ ಸಾಗರ ದಾಟುವುದು ಒಮ್ಮೆ ಮಾತ್ರ. ಆದರೆ, ಈ ನಮ್ಮ ರಾಮಾಯಣದ ಕಥಾನಕ ಹಲವಾರು ಸಮುದ್ರಗಳನ್ನು ದಾಟಿ ಸಾವಿರಾರು ಮೈಲು ದೂರ ಪಯಣಿಸಿ, ಆಯಾ ದೇಶ ಭಾಷೆಗಳಲ್ಲಿ, ಅಲ್ಲಿನ ಸಾಹಿತ್ಯ- ಸಂಗೀತ- ನೃತ್ಯ- ಶಿಲ್ಪಕಲಾ ಪ್ರಕಾರಗಳಲ್ಲಿ ಇಂದಿಗೂ ರಾರಾಜಿಸುತ್ತಿದೆ. ಆದರೆ, ಭಾರತದಿಂದ ಯಾವುದೇ ರಾಜರು ತಮ್ಮ ಸೈನ್ಯದೊಂದಿಗೆ ಹೋಗಿ ಬೇರೆ ದೇಶವನ್ನು ಆಕ್ರಮಣ ಮಾಡಿದ್ದು ಚರಿತ್ರೆಯ ಪುಟಗಳಲ್ಲಿ ಕಾಣುವುದಿಲ್ಲ. ಪೂರ್ವ ಪ್ರಸಕ್ತ ಶಕೆಯ (BCE) 1ನೇ ಶತಮಾನದಿಂದಲೇ ಸಾಗರದಾಚೆಯ ನಾಡುಗಳಿಗೆ ವ್ಯಾಪಾರ ವಹಿವಾಟುಗಳಿಗಾಗಿ ಹೋಗುತ್ತಿದ್ದ ಭಾರತೀಯರು ಅಲ್ಲಿನ ಜನರೊಂದಿಗೆ ಬೆರೆತು, ಅಲ್ಲಿ ನಮ್ಮ ಸಂಸ್ಕೃತಿಯನ್ನು ಹರಡಿ, ರಾಜ್ಯಭಾರವನ್ನೂ ನಡೆಸಿದ ಹಲವು ಉದಾಹರಣೆಗಳು ಸಿಗುತ್ತವೆ. ಅದರೊಂದಿಗೆ ಧರ್ಮ ಪ್ರಸಾರಕ್ಕಾಗಿ ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದ ಬೌದ್ಧ ಧರ್ಮದ ಗುರುಗಳ ಪ್ರಭಾವವೂ ಅಲ್ಲಿ ಕಾಣುತ್ತದೆ. ಹಾಗಾಗಿ ಇಂದು, ನಾವು ಆ ದೇಶಗಳಿಗೆ ಹೋದಾಗ ನಮ್ಮ ದೇಶವನ್ನೇ ಕನ್ನಡಿಯಲ್ಲಿ ಕಂಡಂತಾಗುತ್ತದೆ.
Related Articles
Advertisement
ರಾಮಾಯಣದ ನಾನಾ ರೂಪಗಳು: ರಾಮ- ಲಕ್ಷ್ಮಣ- ಸೀತೆ- ಮಾರುತಿ- ರಾವಣರು ಸಂಕೇತಿಸುವ ತತ್ತÌಗಳ ಆಳಕ್ಕಿಳಿದು ಹಲವಾರು ಹೊಸ ಆಯಾಮಗಳಲ್ಲಿ ರಾಮಾಯಣಗಳು ಸೃಷ್ಟಿಯಾಗಿವೆ ಎನ್ನಬಹುದು. ಅದರಲ್ಲೂ ಆಗ್ನೇಯ ರಾಷ್ಟ್ರಗಳಲ್ಲಿ ರಚಿತವಾಗಿರುವ ರಾಮಾಯಣಗಳ ಅಧ್ಯಯನ ಹಲವು ರೋಚಕ ವಿಚಾರಗಳನ್ನು ತಿಳಿಸುತ್ತದೆ. ಥಾಯ್ಲೆಂಡಿನ “ರಾಮ್ ಕೀನ್’ (ರಾಮಕೀರ್ತಿ), ಮಯನ್ಮಾರಿನ “ರಾಮತ್ಯಾಗಿನ್’ ಮತ್ತು “ಮಹಾರಾಮ’, ಕಾಂಬೋಡಿಯಾದ “ರಾಮ್ ಖೇರ್’, ಲಾವೋ ದೇಶದ ರಾಮಾಯಣ- ಫ ಲಕ್ ಫ ಲಾಮ್ (ಲಕ್ಷ್ಮಣ- ರಾಮ) “ಪಲಕ್ ಪಲಂಗ್’, “ರಾಮಜಾತಕ’, ಮಲಯಾದ “ಹಿಕಾಯತ್’ ಸೇರಿ ರಾಮ ಹಾಗೂ ಇಂಡೋನೇಷ್ಯಾದ “ಕಾಕವಿನ್ ರಾಮಾಯಣ’ಗಳು ಪ್ರಖ್ಯಾತವಾಗಿವೆ.
ಅಯುಥಾಯದ ರಾಮಮಂದಿರ: ಥಾಯ್ಲೆಂಡಿನ ಅಯುಥಾಯದಲ್ಲಿ, ಬೃಹತ್ ರಾಮಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಬ್ಯಾಂಕಾಕ್ ನಗರದ ಹೃದಯ ಭಾಗದಲ್ಲಿ ಹರಿಯುವ ಚಾವೊ ಫಯ ನದಿಯ ತಟದಲ್ಲಿ ಈ ರಾಮಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
* ಡಾ. ಜಯಂತಿ ಮನೋಹರ್