Advertisement
ಮಂಥರೆ ರಾಮಾಯಣದಲ್ಲಿಯೇ ಒಂದು ವಿಶೇಷ ಪಾತ್ರ. ಈಕೆ ಇರದಿದ್ದರೆ ರಾಮಾಯಣಕ್ಕೆ ಮೆರುಗೇ ಬರುತ್ತಿರಲಿಲ್ಲ. ಅಂದರೆ, ಶ್ರೀರಾಮನ ವ್ಯಕ್ತಿತ್ವ ನಾಡಿನಾದ್ಯಂತ ಪ್ರಜ್ವಲಿಸುತ್ತಿರಲಿಲ್ಲ. ಮಂಥರೆ ಎಲ್ಲೋ ಹುಟ್ಟಿದವಳು, ನಿರ್ಗತಿಕಳು. ಕೈಕೇಯಿಯ ವಿವಾಹ ಕಾಲದಲ್ಲಿ ದಾಸಿಯಾಗಿ ಕೈಕೇಯಿಯ ಜೊತೆಯಲ್ಲಿಯೇ ಬಳುವಳಿಯಾಗಿ ಬಂದವಳು. ಕುಳ್ಳಾಗಿಯೂ, ಬೆನ್ನುಗೂನಾಗಿಯೂ, ಅಷ್ಟಾವಕ್ರಳಾಗಿಯೂ ಇದ್ದ ಇವಳಿಗೆ ಅರಮನೆಯ ಆಶ್ರಯ ದೊರೆತದ್ದು ಈ ವಿಕಾರ ರೂಪದ ನೆರವಿನಿಂದಲೇ.
Related Articles
Advertisement
ಮನೋಹರವಾಗಿ ಕಂಗೊಳಿಸುತ್ತಿದ್ದ ಅಯೋಧ್ಯಾ ಪಟ್ಟಣವನ್ನು ಕಂಡು-ವೈಭವಕ್ಕೆ ಕಾರಣವನ್ನು ಕೇಳಿ ತಿಳಿದುಕೊಂಡಳು ಮಂಥರೆ. ಕೂಡಲೆ ಎದೆಬಿರಿದವಳಂತೆ ನಡುಗುತ್ತಾ, ಉದ್ವೇಗದಿಂದ ಏದುಸಿರು ಬಿಡುತ್ತಾ ಅರಮನೆಗೆ ಓಡಿ ಬಂದಳು. ಕೈಕೇಯಿಯ ಹತ್ತಿರ ನಿಂತು, ಓ ಕೈಕೇಯಿ, ಮತಿಗೇಡಿ , ನಿರ್ಬಾಗೆ, ನಿನಗೆ ಬಂದ ಉಪದ್ರವವನ್ನರಿಯದೆಯೇ ಮೈಮರೆತಿದ್ದೀಯೆ! ನಿನಗೆ ಬಹು ಆಪತ್ತುಗಳು ಬಂದಿವೆ ಎಂದಳು. ‘ ಈ ಮಾತು ಕೇಳಿ ಕೈಕೇಯಿ ತಬ್ಬಿಬ್ಟಾದಳು. ಏನಾಯ್ತು ಹೇಳವ್ವ ಎಂದು ಮಂಥರೆಯನ್ನು ಕೇಳಿದಳು. ತಕ್ಷಣ ಮಂಥರೆ ಭರತನಿಗೆ ಈ ರಾಜ್ಯದ ಒಡೆತನ ಸಿಗುವಂತಿಲ. ದಶರಥ ಮಹಾರಾಜನ ಪ್ರೇಮವೆಲ್ಲ ಕೌಸಲ್ಯೆ ಯಲಿ. ಹಸಿ ಪ್ರೇಮ ನಿನ್ನಲ್ಲಿ. ಉಪಾಯದಿಂದ ಭರತನನ್ನು ನಿನ್ನ ತವರೂರಿಗೆ ಕಳುಹಿಸಿ, ನಾಳೆ ರಾಮನಿಗೆ ಪಟ್ಟವನ್ನು ಕಟ್ಟುತ್ತಿದ್ದಾರೆ ಅಂದಳು.
ಈ ವಿಚಾರ ಕೇಳಿ ಕೈಕೇಯಿಯ ಮುಖ ಅರಳಿತು. ಕೊರಳ ಸರವನ್ನು ತೆಗೆದು ಮಂಥರೆಗೆ ಕೊಡುತ್ತಾ “ಇದೋ ನಿನಗೆ ಬಹುಮಾನ. ಶುಭ ಸಮಾಚಾರವನ್ನು ತಿಳಿಸಿದ್ದಕ್ಕೆ. ರಾಮ-ಭರತ ಇಬ್ಬರೂ ನನಗೆ ಒಂದೇ’ ಎಂದಳು. ಮಂಥರೆ ಆ ಹಾರವನ್ನು ಬಿಸಾಡಿ, ” ಕೈಕೇಯಿ, ಸಾಕು ಮಾಡು ನಿನ್ನ ಮೂರ್ಖತನ. ಬಹುಕಾಲ ಅರಮನೆಯ ಸುಖವನ್ನು ಅನುಭವಿಸಿ ನಿನ್ನ ಬುದ್ದಿ ಕೆಟ್ಟು ಹೋಗಿದೆ. ನಿನ್ನ ಕಂದನಿಗೆ ನೀನೇ ಮೃತ್ಯುವಾದೆ. ರಾಮನಿಗೆ ಪಟ್ಟಕಟ್ಟುವುದು ನಿನಗೆ ಪ್ರಿಯವೆ? ಸವತಿ ಮಗನಂಥ ವೈರಿ ಈ ಪ್ರಪಂಚದಲ್ಲಿ ಬೇರೆ ಉಂಟೆ? ಹೀಗೆ ಹಲವಾರು ವಿಷಯಗಳನ್ನು ಹೇಳಿ ಉರಿಯುವ ಬೆಂಕಿಗೆ ತುಪ್ಪವನ್ನು ಹೊಯ್ದಳು. ಇಲ್ಲಿಯವರೆಗೆ ಮೌನವಾಗಿದ್ದ ಕೈಕೇಯಿ, ತವರಿನಲ್ಲಿದ್ದ ಮಗನನ್ನು ನೆನಪಿಸಿಕೊಂಡು ನಡುಗಿದಳು. ದುಃಖ ಒತ್ತರಿಸಿ ಬಂದು ಕಣ್ಣೀರಿಟ್ಟಳು. ಈಗ ಮಂಥರೆ ಸುಮ್ಮನೆ ಏಕೆ ಅಳುತ್ತೀಯೆ ಮಹಾರಾಣಿ? ಏಳು, ಕಾರ್ಯ ಸಾಧನೆ ದಾರಿ ಹುಡುಕುವಾ. ದಶರಥ ಮಹಾರಾಜ ನಿನ್ನನ್ನು ಮದುವೆಯಾದಂದು ನಿನ್ನ ಸೌಂದರ್ಯಕ್ಕೆ ದಾಸನಾಗಿ ನಿನಗೆ ಇತ್ತ ಭಾಷೆಯನ್ನು ಸ್ಮರಿಸಿಕೊ, ಎಂದಳು. ಆ ಮಾತಿನಿಂದ ಕೈಕೇಯಿ ಹಿಗ್ಗಿ ಮಂಥರೆಯನ್ನು ತಬ್ಬಿಕೊಂಡು, ಕಣ್ಣು ಕಾಣಿಸದ ನನಗೆ ದಾರಿ ತೋರಿಸಿರುವೆ ಎಂದು ಹಾಡಿ ಹೊಗಳಿದಳು.ನಂತರ, ಮಂಥರೆ, ಏಳು. ಈಗಲೇ ಕೋಪ ತಾಪವನ್ನು ಮೈದುಂಬಿಗೊಂಡು ಅಂತಃಪುರವನ್ನು ಹೊಕ್ಕು ಹಾಸಿ ಹೊದ್ದು ಮಲಗಿಬಿಡು. ನಿನ್ನಿಷ್ಟ ನೆರವೇರುವತನಕ ಹೊರಬರಬೇಡ ಎಂದು ಹೇಳಿ ಕೊಟ್ಟು ಹೊರಟು ಹೋದಳು. ಕೈಕೇಯಿ, ಹಠಯೋಗಿಯಂತೆ ಒಡವೆಗಳನ್ನು ಕಿತ್ತು ಬಿಸಾಡಿ, ತಲೆಯನ್ನು ಕೆದರಿಕೊಂಡು ನೆಲದ ಮೇಲೆಯೇ ಉರುಳಿದಳು. ಅಷ್ಟರಲ್ಲಿ ದಶರಥ ಮಹಾರಾಜನು ಅಲ್ಲಿಗೆ ಬಂದನು. ಕೈಕೇಯಿಯ ದೈನ್ಯಾವಸ್ಥೆಯನ್ನು ಕಂಡು , “ಪ್ರಿಯೆ, ಜರ್ರನೆ ಜರಿದು ಹೋದನು. ನಿನ್ನನ್ನು ಅವಮಾನಕ್ಕೆ ಗುರಿಪಡಿಸಿದವರಾರು? ನನ್ನ ಪ್ರಾಣವನ್ನು ಪಣವೊಡ್ಡಿ ಪ್ರತಿಜ್ಞೆ ಮಾಡುತ್ತೇನೆ. ನಿನ್ನ ಯಾವುದೇ ಬೇಡಿಕೆ ಇದ್ದರೂ ನೆರವೇರಿಸುತ್ತೇನೆ. ಏಳು ಮಹಾರಾಣಿ ಎದ್ದೇಳು ಎಂದನು. ಈಗ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತೆಂದು ತಿಳಿದು ಕೈಕೇಯಿ ಉಲ್ಲಾಸಗೊಂಡು ದಶರಥನ ಕೈ ಹಿಡಿದು- “ಮಹಾರಾಜ, ನಿಜವಾಗಿಯೂ ನಾನಿಂದು ಧನ್ಯಳು. ನೀವು ಹಿಂದೆ ನೀಡಿದ್ದ ಪ್ರಣಯ ಭಾಷೆಗಳನ್ನು ಇಂದು ನಡೆಸಿಕೊಡಿ. ಈಗ ಆಗಿರುವ ಪಟ್ಟಾಭಿಷೇಕದ ಏರ್ಪಾಡಿನಲ್ಲಿ ಭರತನಿಗೆ ಪಟ್ಟ ಕಟ್ಟಿರಿ. ರಾಜ್ಯ ನಿಷ್ಕಂಟಕವಾಗಿರಲು ಕೌಸಲ್ಯೆ ಯ ಮಗನನ್ನು ಹದಿನಾಲ್ಕು ವರ್ಷಗಳು ಮಾತ್ರ ಅರಣ್ಯಕ್ಕೆ ಕಳುಹಿಸಿ. ಜಟಾಧಾರಿಯಾಗಿ ನಾರುಡುಗೆಯನ್ನುಟ್ಟು ಅವನು ದೂರದ ಅರಣ್ಯದಲ್ಲಿರಲಿ ಅಂದಳು. ಈ ಮಾತುಗಳು ಕಿವಿಗೆ ಬಿದ್ದೊಡನೆ ಸಿಡಿಲು ಬಡಿದಂತಾಗಿ, ಮತಿ ಭ್ರಮೆಗೊಂಡಿತು. ಕೈಕೇಯಿಯನ್ನು ನೋಡಿ ಕೋಪೋಗ್ರನಾಗಿ “ತೊಲಗಾಚೆ ರಘುಕುಲಕ್ಕೆ ‘. ವಿಷವುಣಿಸುವ ದುಬುìದ್ಧಿಯನ್ನು ನಿನಗೆ ಯಾರು ಹೇಳಿದರು? ನೀಚ ಹೆಣ್ಣೆ, ನೀನು ಬೇಡಿದುದು ವರವೇ? ನನ್ನ ರಕ್ತವನ್ನು ನೀನು ಕುಡಿಯಬಯಸಿದ್ದೀ. ನೀನು ಕಾಡಿಗೆ ಅಟ್ಟುತ್ತಿರುವುದು ರಾಮನನ್ನಲ್ಲ, ನಿನ್ನ ಮಾಂಗಲ್ಯವನ್ನು. ರಾಮ-ಭರತರಲ್ಲಿ ಭೆದವನ್ನೆಣಿಸಬೇಡ ಎಂದು ರೇಗಿದನು ದಶರಥ. ಪ್ರತಿಯಾಗಿ ಕೈಕೇಯಿ, ನನ್ನನ್ನೇಕೆ ವ್ಯರ್ಥವಾಗಿ ನಿಂದಿಸುತ್ತಿರುವೆ ? ನನ್ನ ಮಗನನ್ನು ನನ್ನ ತವರಿಗೆ ಕಳಿಸಿ , ಗುಟ್ಟಾಗಿ ರಾಮನಿಗೆ ಪಟ್ಟ ಕಟ್ಟುವುದು ಮೋಸವಲ್ಲವೇ ? ಎಂದೆಲ್ಲ ಕಟು ಮಾತುಗಳನ್ನು ಆಡಿದಳು. ಅದನ್ನೆಲ್ಲ ಕೇಳಿ ಮೂಛೆì ಹೋದನು. ದಶರಥನು ಇದನ್ನು ಕಂಡ ಮಂಥರೆ, ರಾಮನಿಗೆ ಸುಳಿವು ನೀಡಿದಳು. ಆಗ ಬಂದ ರಾಮ, ನೆಲದ ಮೇಲೆ ಬಿದ್ದ ತಂದೆಯನ್ನು ಮೆಲ್ಲನೆ ಎತ್ತಿ ಮಂಚದ ಮೇಲೆ ಮಲಗಿಸಿ ಉಪಚರಿಸಿದನು. ಅಳುತ್ತಿದ್ದ ಕಿರಿಯ ತಾಯಿಯನ್ನು ಸಮಾಧಾನಗೊಳಿಸಿದನು. ಇದಕ್ಕೆ ಕಾರಣವನ್ನು ಮಂಥರೆಯ ಬಾಯಿಂದ ಕೇಳಿದನು. ಶ್ರೀರಾಮನು ನಗುವನ್ನು ಸೂಸುತ್ತ ಭರತನ ಮಾತೆಯ ಕಿವಿಗೆ ಜೇನ್ಮಳೆಯನ್ನು ಸುರಿಸಿದನು. ತಾಯಿ, ಈ ಅಲ್ಪ ವಿಷಯಕ್ಕೆ ಇಷ್ಟು ದುಃಖವೆ ? ನಿನ್ನ ಬಯಕೆ ಖಂಡಿತ ಕೈಗೂಡುತ್ತದೆ. ತಂದೆಯ ವಚನ ಪಾಲನೆಗಾಗಿ ನಾವೆಲ್ಲರೂ ಹೊಣೆ. ನೀನು ಕೇಳಿದ ವರವೇ ನನ್ನ ಬಯಕೆ. ಭರತನೇ ರಾಜ್ಯವನ್ನು ಆಳಲಿ , ಬಾಳಲಿ ! ಲೋಕ ಮೆಚ್ಚುವಂತೆ ಅವನೇ ಕೋಸಲವನ್ನಾಳಲಿ! ಗಿರಿವನ ಪ್ರಿಯನಾದ ನನಗೆ ಅರಣ್ಯವಾಸವೇ ಆನಂದ! ಪಿತೃ ವಚನ ಪರಿಪಾಲನೆಯೆ ನನ್ನ ಧರ್ಮ, ಅದೇ ಮೊದಲು ಅದೆ ಕೊನೆ, ಮಾತುಕತೆ ಆದ ನಂತರ ದಶರಥನಿಗೆ ಎಚ್ಚರವಾಗಿತ್ತು. ಅವನ ಕಂಗಳಿಂದ ಅಶ್ರುಧಾರೆ ಪ್ರವಹಿಸಿತು. ಶ್ರೀರಾಮ ಎಲ್ಲರನ್ನೂ ಸಂತೈಸುತ್ತಾ, ತಂದೆಯ ಪಾದಗಳನ್ನು ಕಣ್ಣಿಗೆ ಒತ್ತಿಕೊಂಡು ಅರಣ್ಯಕ್ಕೆ ಹೊರಟನು. ತಕ್ಷಣ, ದಶರಥ ಮೂರ್ಛೆ ಹೊಂದಿದನು. ಸುರೇಶ ಗೋವಿಂದರಾವ್ ದೇಸಾಯಿ