ಹೊಸದಿಲ್ಲಿ: ರಾಮಸೇತುವಿನ ಅಸ್ತಿತ್ವದ ಕುರಿತ ಪ್ರಶ್ನೆಗೊಂದು ಸಿಹಿ ಉತ್ತರ ಸಿಕ್ಕಿದೆ. ಸದ್ಯ ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ. ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿದ್ದಾರೆ. ಈ ಬಗ್ಗೆ ಅಮೆರಿಕದ ಡಿಸ್ಕವರಿ ಕಮ್ಯುನಿ ಕೇಷನ್‌ನ ಸೈನ್ಸ್ ಚಾನೆಲ್ ಸಾಕ್ಷ್ಯ ಚಿತ್ರವೊಂದನ್ನು ತಯಾರಿ ಸಿದ್ದು, ಇದರಲ್ಲಿ ರಾಮಸೇತುವಿನ ಅಸ್ತಿತ್ವದ ಕುರಿತಂತೆ ವೈಜ್ಞಾನಿಕ ಉತ್ತರ ಗಳನ್ನು ಪಡೆಯಲಾಗಿದೆ.
ಜಗತ್ತಿನ ವಿಶಿಷ್ಟ ಸಂಗತಿಗಳ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಿಸಿ ಪ್ರಸಾರ ಮಾಡುವಲ್ಲಿ ಹೆಸರುವಾಸಿಯಾಗಿರುವ ಡಿಸ್ಕವರಿ ಚಾನೆಲ್‌ನಲ್ಲಿ ಬುಧವಾರ ರಾತ್ರಿ 7.30ಕ್ಕೆ ರಾಮಸೇತುವಿನ ಸಂಗತಿ ಪ್ರಸಾರವಾಗಲಿದೆ. ರಾಮೇಶ್ವರದಿಂದ ಲಂಕಾದ ಮನ್ನಾರ್‌ವರೆಗಿನ 50 ಕಿ.ಮೀ. ದೂರದ ಸೇತುವೆ ಬಗ್ಗೆ ಮಹ ತ್ವದ ಸಂಶೋಧನೆ, ಇತರ ಮಾಹಿತಿ ಗಳು ಈ ಕಾರ್ಯಕ್ರಮದಲ್ಲಿವೆ.
ಇಂಡಿಯಾನಾ ಯೂನಿವರ್ಸಿಟಿ ನಾರ್ತ್ ವೆಸ್ಟ್, ಕೊಲರಾಡೋ ವಿಶ್ವವಿದ್ಯಾಲಯ ಮತ್ತು ಸೌತರ್ನ್ ಆರೆಗಾನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಭಿಪ್ರಾಯ, ಸಂಶೋಧನೆಯ ವರದಿಗಳನ್ನು ಈ ಸಾಕ್ಷ éಚಿತ್ರದಲ್ಲಿ ದಾಖಲಿಸಲಾಗಿದೆ. ಈಗಾಗಲೇ ಅಂತರ್ಜಾಲದಲ್ಲಿ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, 16 ಗಂಟೆಯಲ್ಲಿ 11 ಲಕ್ಷ ಜನರು ವೀಕ್ಷಿಸಿದ್ದಾರೆ. ಕೇಂದ್ರ ಸಚಿವೆ ಸ್ಮತಿ ಇರಾನಿ ಕೂಡ ಈ ಕಾರ್ಯಕ್ರಮದ ಪ್ರೋಮೋವನ್ನು ರಿಟ್ವೀಟ್ ಮಾಡಿದ್ದು, “ಜೈ ಶ್ರೀ ರಾಮ್’ ಎಂದು ಬರೆದುಕೊಂಡಿದ್ದಾರೆ.
ಮಾನವ ನಿರ್ಮಿತವೇ?: ಸೇತುವೆ ಮಾನವ ನಿರ್ಮಿತವೇ ಎಂಬ ಬಗ್ಗೆ ಹಿಂದಿನಿಂದಲೂ ವಾದ ವಿವಾದಗಳಿವೆ. ಇಲ್ಲಿನ ಮರಳಿನ ಪಟ್ಟಿ ನೈಸರ್ಗಿಕ. ಆದರೆ ಇದರ ಕೆಳಗಿರುವ ಸಾಮಗ್ರಿ ನೈಸರ್ಗಿಕವಲ್ಲ ಎಂದು ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ನಿರೂಪಕರು ಹೇಳುತ್ತಾರೆ. ಅಷ್ಟೇ ಅಲ್ಲ, ಇಲ್ಲಿನ ಮರಳಿನ ಪಟ್ಟಿಯ ಕೆಳಗಿರುವ ಕಲ್ಲುಗಳು 7 ಸಾವಿರ ವರ್ಷಗಳ ಹಿಂದಿನದು ಮತ್ತು ಇತರ ಪ್ರದೇಶದಲ್ಲಿನ ಮರಳಿನ ಪಟ್ಟಿ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ಸೌತರ್ನ್ ಆರೆಗಾನ್ ಯೂನಿವರ್ಸಿಟಿ ವಿಜ್ಞಾನಿ ಚೆಲ್ಸಿಯಾ ರೋಸ್ ಹೇಳಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ಏನು ಮಾಡ್ತಿದೆ?: ಅಮೆರಿಕದ ವಿಜ್ಞಾನಿಗಳು ಹಾಗೂ ಸಂಸ್ಥೆಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದರೆ, ಭಾರತೀಯ ಪುರಾತತ್ವ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಭಾರತೀಯರಲ್ಲಿ ಉಂಟಾಗಿದೆ. ಇದೇ ಪ್ರಶ್ನೆಯನ್ನು ಸಚಿವೆ ಸ್ಮತಿ ಇರಾನಿಗೂ ಜನರು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ, ಕಳೆದ ಮಾರ್ಚ್‌ನಲ್ಲೇ ಐತಿಹಾಸಿಕ ಸಂಶೋಧನೆಯ ಭಾರತೀಯ ಕೌನ್ಸಿಲ್ ಈ ಸಂಬಂಧ ಸಾಗರದಾಳದ ಅಧ್ಯಯನ ನಡೆಸಲು ನಿರ್ಧರಿಸಿತ್ತು. ಅಷ್ಟೇ ಅಲ್ಲ, ಇದರ ವರದಿ ನವೆಂಬರ್‌ನಲ್ಲೇ ಬರಬೇಕಿತ್ತು. ಆದರೆ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಅಲೋಕ್ ತ್ರಿಪಾಠಿ ಹೇಳುವಂತೆ ಈ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಇದಕ್ಕಾಗಿ ಕೆಲವು ಪೂರ್ವ ತಯಾರಿ ಪ್ರಗತಿಯಲ್ಲಿದೆ.
ಸರಸ್ವತಿಯನ್ನೂ ಹುಡುಕಿ: ರಾಮಸೇತು ಮಾನವ ನಿರ್ಮಿಸಿದ್ದು ಎಂದು ಇದುವರೆಗೆ ಹೇಳುತ್ತಲೇ ಬರಲಾಗಿತ್ತು. ಆದರೆ ಕೆಲವು ಸರಕಾರಗಳು ಒಪ್ಪಿರಲಿಲ್ಲ. ಈಗ ಡಿಸ್ಕವರಿ ಚಾನೆಲ್ ವೈಜ್ಞಾನಿಕವಾಗಿ ಉತ್ತರ ಕಂಡುಕೊಂಡಿದೆ. ಹೀಗಾಗಿ ನೆಲದೊಳಗೆ ಹುದುಗಿಹೋಗಿರುವ ಸರಸ್ವತಿ, ಮಹಾಭಾರತದ ಸ್ಥಳಗಳು, ದ್ವಾರಕಾ ಸಹಿತ 34 ನಗರಗಳನ್ನೂ ಹುಡುಕಬೇಕಿದೆ ಎಂದು ಕೆಲವು ಟ್ವಿಟಿಗರು ಆಗ್ರಹಿಸಿದ್ದಾರೆ. ಸದ್ಯದಲ್ಲೇ ರಾಮಸೇತು ಇರುವ ಸ್ಥಳಕ್ಕೆ ಹೋಗುವುದಾಗಿ ಬಿಜೆಪಿ ನಾಯಕ ಸುಬ್ರಹ್ಮಣ್ಯಸ್ವಾಮಿ ಹೇಳಿದ್ದಾರೆ.