ಪುರಾತನ ಹಾಗೂ ಶಿಲ್ಪಕಲೆಗಳ ಚೆಲುವಿನಿಂದ ಮೋಕ್ಷರಂಗನಾಥನ ಕ್ಷೇತ್ರ, ಭಕ್ತಾದಿಗಳ ಮನಸ್ಸೊಳಗೆ ಅಚ್ಚಾಗುತ್ತದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದಲ್ಲಿರುವ ಮಧ್ಯರಂಗನಾಥ ಹಾಗೂ ಶ್ರೀರಂಗಂನಲ್ಲಿರುವ ಅಂತ್ಯ ರಂಗನಾಥನ ದರ್ಶನ ಮಾಡಿ, ರಂಗಸ್ಥಳದ ಮೇಲಿರುವ ಈ ಮೋಕ್ಷರಂಗನನ್ನು ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ.
ಮೋಕ್ಷರಂಗನ ದರ್ಶನಕ್ಕೆ ಭಕ್ತಾದಿಗಳು ದೂರದಿಂದ ಆಗಮಿಸುತ್ತಾರೆ. ಚಿಕ್ಕಬಳ್ಳಾಪುರ ಸಮೀಪವಿರುವ ಈ ದೇಗುಲ, ಹೊಯ್ಸಳ ವಾಸ್ತುಶಿಲ್ಪದ ಆಕರ್ಷಣೆ. ಸುತ್ತಲೂ ಹಬ್ಬಿರುವ ನಂದಿ ಬೆಟ್ಟದ ತಪ್ಪಲಿನ ತಂಪು, ಮೋಕ್ಷರಂಗನ ಪರಿಸರವನ್ನು ಇನ್ನೂ ದಿವ್ಯವಾಗಿಸಿದೆ. ತ್ರೇತಾಯುಗದಲ್ಲಿ ರಾಮ, ರಾವಣನನ್ನು ಸಂಹರಿಸಿದ ಮೇಲೆ ಅಯೋಧ್ಯೆಗೆ ಬರುತ್ತಾನೆ. ಅಲ್ಲಿ ಪಟ್ಟಾಭಿಷೇಕವಾಗುತ್ತದೆ.
ಪಟ್ಟಾಭಿಷೇಕಕ್ಕೆ ಆಗಮಿಸಿದ್ದ ವಿಭೀಷಣ, ಹಿಂದಿರುಗುವಾಗ, ಶ್ರೀರಾಮನು ವಿಭೀಷಣನಿಗೆ ಸ್ನೇಹದ ಸಂಕೇತವಾಗಿ ತಮ್ಮ ಮನೆದೇವರಾದ ರಂಗನಾಥನ ವಿಗ್ರಹವನ್ನು, ಬಿದಿರಿನ ಬುಟ್ಟಿಯಲ್ಲಿಟ್ಟು ಕಾಣಿಕೆಯಾಗಿ ನೀಡುತ್ತಾನಂತೆ. ವಿಭೀಷಣ, ಆ ಮೂರ್ತಿಯನ್ನು ಶ್ರೀರಂಗದಲ್ಲಿ ಸ್ಥಾಪಿಸಬೇಕಿತ್ತು. ಆದರೆ, ಆತ ಸ್ಕಂದಗಿರಿ ಗುಹೆಯಲ್ಲಿದ್ದ ಸಪ್ತ ಋಷಿಗಳ ಆದೇಶದಂತೆ ಇಲ್ಲಿ ಪ್ರತಿಷ್ಠಾಪಿಸುತ್ತಾನೆ ಎನ್ನುವುದು ಪೌರಾಣಿಕ ಕತೆ.
ಇಲ್ಲಿರುವ ರಂಗನಾಥ, ಏಕಶಿಲಾ ಸಾಲಿಗ್ರಾಮ ಮೂರ್ತಿ. ಅನಂತ ಶಯನನ ಮೇಲೆ ಮಲಗಿರುವ ಕೆತ್ತನೆ ಅತ್ಯಂತ ಮನೋಹರ. ಆತನ ಮುಖದಲ್ಲಿರುವ ನಗು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. “ಜಗನ್ಮೋಹನ’ ಅಂತಲೇ ಭಕ್ತಾದಿಗಳು, ಶ್ರೀರಂಗನ ರೂಪವನ್ನು ಬಣ್ಣಿಸುತ್ತಾರೆ. ರಂಗನಾಥನ ಕಾಲ ಬಳಿಯಲ್ಲಿ ನೀಲಾದೇವಿ ಹಾಗೂ ಭೂದೇವಿ ಕುಳಿತಿದ್ದಾರೆ. ರಂಗನ ಕಮಲಚರಣಗಳಲ್ಲಿ ವಿಶೇಷವಾದ ಚಿಹ್ನೆಗಳನ್ನು ಕೆತ್ತಲಾಗಿದೆ.
ದೇವರ ಗರ್ಭಗುಡಿ ಬಿದಿರಿನ ಬುಟ್ಟಿಯ ಹಾಗೆ ಇದ್ದು, ಹಳ್ಳಿಗಳಲ್ಲಿ ಬಳಸುವ ಸಿಬಿರು ತಟ್ಟೆಯನ್ನು ಹೋಲುತ್ತದೆ. ವಿಭೀಷಣನಿಗೆ ರಾಮ, ಬಿದಿರಿನ ಬುಟ್ಟಿಯಲ್ಲೇ ರಂಗನಾಥನ ವಿಗ್ರಹವನ್ನು ಇಟ್ಟು ಕೊಟ್ಟಿದ್ದರಿಂದ ಅದೇ ರೀತಿಯಲ್ಲಿ, ಗರ್ಭಗುಡಿಯನ್ನು ಕಟ್ಟಲಾಗಿದೆ. ಮಲಗಿರುವ ರಂಗನಾಥನ ವಿಗ್ರಹ ನಾಲ್ಕೂವರೆ ಅಡಿ ಉದ್ದವಿದೆ. ಇಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಕಿಟಕಿಯ ಮೂಲಕ ಮೋಕ್ಷರಂಗನ ಪಾದ ಸ್ಪರ್ಶಿಸುವುದನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ಬರುತ್ತಾರೆ.
ದರುಶನಕೆ ದಾರಿ…: ಗೌರಿಬಿದನೂರಿನಿಂದ 6 ಕಿ.ಮೀ. (ಚಿಕ್ಕಬಳ್ಳಾಪುರ ರಸ್ತೆ) ದೂರದಲ್ಲಿ “ರಂಗಸ್ಥಳ’ ಎಂಬ ತಾಣವಿದೆ. ಮೋಕ್ಷರಂಗನ ಸನ್ನಿಧಾನ ಇಲ್ಲಿದೆ.
ವೈಕುಂಠದ ಕಲ್ಪನೆ: ರಂಭೆ, ಊರ್ವಶಿಯ ಸುಂದರವಾದ ಮೂರ್ತಿಗಳು ಕೈಮುಗಿಯುತ್ತಾ ನಿಂತಿವೆ. ಅವರಿಬ್ಬರೂ ಶ್ರೀರಂಗನ ಸೇವೆಮಾಡಲು ಕಾದಿರುವರೇನೋ ಎಂಬಂತೆ ಕಾಣುತ್ತದೆ. ಅಲ್ಲದೆ, ಬ್ರಹ್ಮ, ಶಿವ, ಅಷ್ಟ ದಿಕಾ³ಲಕರು, ಶ್ರೀರಂಗನ ಆಯುಧಗಳನ್ನು ಕಂಡಾಗ ವೈಕುಂಠದ ಕಲ್ಪನೆ ಕಣ್ಮುಂದೆ ಬರುತ್ತದೆ.
* ಪ್ರಕಾಶ್ ಕೆ. ನಾಡಿಗ್