ಮುಂಬಯಿ: ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಶ್ರಾವಣ ಸಂಭ್ರಮ ಆಚರಣೆಯು ಆ. 20ರಂದು ಅಂಧೇರಿ ಪೂರ್ವದ ಮರೋಲ್ ಕೊಂಡಿವಿಟಾದ ಕಮ್ಯುನಿಟಿ ಹಾಲ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಘದ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಗಳ ಸಂಸ್ಕೃತಿಯನ್ನು ಆಚರಿಸಿದಾಗ ಸ್ವಂತಿಕೆಯ ಸಂಸ್ಕಾರಗಳ ಜ್ಞಾನೋದಯವಾಗುವುದು. ಸಂಸ್ಥೆ ಅಥವಾ ಸಾರ್ವತ್ರಿಕವಾಗಿ ಇಂತಹ ಆಚರಣೆಗಳನ್ನು ನಡೆಸಿದಾಗ ಜೀವನ ಪದ್ಧತಿಯ ನೈಜತೆಯ ಅರಿವು ಮೂಡುತ್ತದೆ. ಮಹಿಳಾ ಸಂಘಟನೆಯಿಂದ ಸಮಾಜದ ಏಳಿಗೆ ಸಾಧ್ಯ ಎನ್ನುವುದು ನಮ್ಮ ಸಂಸ್ಥೆಯ ಸ್ತ್ರೀಶಕ್ತಿಯ ಸಾಂಘಿಕತೆಯಿಂದ ತಿಳಿಯಬಹುದು. ಈ ಮೊದಲು ಪುರುಷರೇ ಎಲ್ಲಾ ಜವಾಬ್ದಾರಿಗಳನ್ನು
ನಿರ್ವಹಿಸಿ ಸಂಸ್ಥೆಯನ್ನು ಮುನ್ನಡೆಸಬೇಕಾಗಿತ್ತು. ಆದರೆ ಈಗ ಹಾಗಿಲ್ಲ. ಸ್ತ್ರೀಯರ ಸಕ್ರಿಯತೆಯಿಂದ ಸಂಸ್ಥೆಯು ಸುಗಮವಾಗಿ ಸಾಗುತ್ತಿದೆ. ಶೀಘ್ರವೇ ನಮ್ಮ ಸಮಾಜದ ಯುವಕ ವೃಂದವನ್ನು ಸ್ಥಾಪಿಸುವ ಸಂಕಲ್ಪ ಹೊಂದಿದ್ದೇವೆ. ಆದ್ದರಿಂದ ನಮ್ಮಲ್ಲಿನ ಯುವ ಜನತೆ ಮುಂದೆ ಬಂದು ಸಂಘದ ಏಳಿಗೆಗೆ ಶ್ರಮಿಸಬೇಕು. ನಮ್ಮವರು ಅನೇಕರು ಮುಂಬಯಿಯಲ್ಲಿ ನೆಲೆಯಾಗಿದ್ದು ಇನ್ನೂ ಸಂಸ್ಥೆಯೊಡನೆ ಬೆರೆತುಕೊಂಡಿಲ್ಲ. ಅವರನ್ನೆಲ್ಲರನ್ನೂ ಒಗ್ಗೂಡಿಸುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಮಹಿಳಾ ವಿಭಾಗಧ್ಯಕ್ಷೆ ರೀನಾ ಕೇದರ್‌ನಾಥ ಬೋಳಾರ್ ಅವರು ಮಾತನಾಡಿ, ಧರ್ಮಾಚರಣೆಯಿಂದ ಸಂಸ್ಕಾರಯುತ ಬಾಳು ಸಾಧ್ಯ. ಇಂತಹ ಆಚರಣೆಗಳಿಂದ ಸಮುದಾಯದೊಳಗಿನ ಸಂಸ್ಕೃತಿಯ ಅನಾವರಣ ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಸಂಸ್ಕೃತಿ ಪ್ರಧಾನ ಸ್ತ್ರೀಯರಲ್ಲಿ ಆತ್ಮಶಕ್ತಿ ಉದ್ದೀಪನ ಆಗುತ್ತದೆ. ಆದ್ದರಿಂದ ಸ್ವಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಯುವಶಕ್ತಿ ಮತ್ತು ಮಹಿಳೆಯರು ಉತ್ಸುಕರಾಗಬೇಕು. ಸಂಸ್ಥೆಯ ಏಳಿಗೆಯಿಂದ ಸಮಾಜೋದ್ಧಾರ ಸಾಧ್ಯ. ಆದ್ದರಿಂದ ಸ್ತ್ರೀಪುರುಷರೆಂಬ ಭೇದ ಮರೆತು ಒಗ್ಗಟ್ಟಿನಿಂದ ಶ್ರಮಿಸಬೇಕು. ಅದಕ್ಕಾಗಿ ಹಲವು ಕಾರ್ಯಕ್ರಮ
ಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ರಾಮರಾಜ ಕ್ಷತ್ರಿಯ ಸಂಘ ಮುಂಬಯಿ ಅಧ್ಯಕ್ಷ ಬಿ. ಗಣಪತಿ ಶೇರೆಗಾರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರೀಯ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಶುಭಾ ವಿ. ರಾವ್, ಕ್ಷತ್ರೀಯ ಸೇವಾ ಸಂಘದ ಉಪಾಧ್ಯಕ್ಷ ಕೆ. ಶಿವರಾಮ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಎನ್. ರವೀಂದ್ರನಾಥ್ ರಾವ್, ಗೌರವ ಕೋಶಾಧಿಕಾರಿ ನವೀನ್ ಎಸ್. ರಾವ್, ಜೊತೆ ಕಾರ್ಯದರ್ಶಿಗಳಾದ ಕೇದರ್‌ನಾಥ ಆರ್. ಬೋಳಾರ್ ಮತ್ತು ರಿತೇಶ್ ಆರ್. ರಾವ್, ಜೊತೆ ಕೋಶಾಧಿಕಾರಿ ರೂಪೇಶ್ ಆರ್. ರಾವ್, ಮಹಿಳಾ ಉಪ ಕಾರ್ಯಾಧ್ಯಕ್ಷೆ ವೀಣಾ ಎಸ್. ರಾವ್, ಗೌರವ ಕೋಶಾಧಿಕಾರಿ ಪ್ರಜ್ಞಾ ಎಸ್. ರಾವ್, ಜೊತೆ ಕಾರ್ಯದರ್ಶಿ ಆರತಿ ಎನ್. ರಾವ್, ಜೊತೆ ಕೋಶಾಧಿಕಾರಿ ಕವಿತಾ ಆರ್. ರಾವ್ ಸೇರಿದಂತೆ ಸಮಾಜ ಬಾಂಧವರು, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಎನ್. ರವೀಂದ್ರ ರಾವ್ ವಾಶಿ ಮತ್ತು ವಿನೋದಾ ಆರ್. ರಾವ್ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾುತು. ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಚಿತ್ರಾ ಎಂ. ರಾವ್ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಅನಂತರ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ವಿಜೇತ ಸ್ಪರ್ಧಿಗಳನ್ನು ರಾಜ್‌ಕುಮಾರ್ ಕಾರ್ನಾಡ್ ಬಹುಮಾನವನ್ನಿತ್ತು ಶುಭ ಹಾರೈಸಿದರು. ಸಪ್ನಾ ಯು. ಬೇಕಲ್ ಕಾರ್ಯಕ್ರಮ ನಿರೂಪಿಸಿದರು. ಕೀರ್ತನಾ ರೂಪೇಶ್ ರಾವ್ ವಂದಿಸಿದರು. ಸಮಾಜದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ರೊನಿಡಾ ಮುಂಬಯಿ