Advertisement

Hunru: ಮೂಲಭೂತ ಸೌಲಭ್ಯ ವಂಚಿತ ರಾಮಾಪುರ ಗ್ರಾಮ

10:46 AM Jan 15, 2024 | Team Udayavani |

ಹನೂರು: ಎತ್ತ ನೋಡಿದರು ಕಸದ ರಾಶಿ, ನಿರುಪಯುಕ್ತ ಕುಡಿಯುವ ನೀರಿನ ತೊಂಬೆ, ಚರಂಡಿ ಇಲ್ಲದೇ ರಸ್ತೆಯಲ್ಲಿ ಹರಿಯುವ ಚರಂಡಿ ನೀರು ಇದು ರಾಮಾಪುರ ಗ್ರಾಮದ ಸ್ಥಿತಿ. ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ಕೇಂದ್ರವಷ್ಟೇ ಅಲ್ಲದೇ ಹೋಬಳಿ ಕೇಂದ್ರ ಸಹ ಇದಾಗಿದ್ದು ಕೇಂದ್ರ ಸ್ಥಾನದಲ್ಲೇ ಈಗಿದ್ದು ಇನ್ನೂ ಪಂಚಾಯಿತಿ ವ್ಯಾಪ್ತಿಯ ಉಳಿದ ಹಳ್ಳಿಗಳ ಸ್ಥಿತಿ ಹೇಗಿದೆ ಎಂಬುದು ತಿಳಿಯದಾಗಿದೆ.

Advertisement

ರಸ್ತೆಯಲ್ಲಿ ಹರಿಯುವ ಚರಂಡಿ ನೀರು: ಸಮೀಪದ ದಿನ್ನಳ್ಳಿ ರಸ್ತೆಯಲ್ಲಿ ಚರಂಡಿ ಅರ್ಧಂಬರ್ಧ ಕಾಮಗಾರಿ ಮಾತ್ರ ಮಾಡಿದ್ದೂ ಉಳಿದಂತೆ ನೀರು ರಸ್ತೆಯ ಇಕ್ಕೆಲಗಳಲ್ಲಿ ಹರಿಯುತ್ತದೆ. ಇದರ ಜೊತೆಗೆ ಅಲ್ಲಿ ಸಾಕು ಹಂದಿಗಳು ಸಹ ಕೊಳಚೆ ಮಾಡುತ್ತವೆ, ಇದರ ಸನಿಹದಲ್ಲೇ ಕುಡಿಯಲು ನೀರನ್ನು ಜನರು ಸಂಗ್ರಹಣೆ ಮಾಡುತ್ತಾರೆ. ಈ ಹಿನ್ನೆಲೆ ಕೊಳಚೆ ಪ್ರದೇಶವನ್ನು ಶುಚಿಗೊಳಿಸಿ ಚರಂಡಿ ನಿರ್ಮಿಸುವಂತೆ ಗ್ರಾಮಸ್ಥರು ಸ್ಥಳೀಯರು ಆಗ್ರಹಿಸಿದ್ದಾರೆ.

ಕೆಟ್ಟುನಿಂತ ಶುದ್ಧ ನೀರಿನ ಘಟಕ: ಶುದ್ಧ ನೀರಿನ ಘಟಕ ಕೆಟ್ಟು ನಿಂತಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಪ್ರದೇಶದ ನಾಗರಿಕರಂತೆ ಗ್ರಾಮೀಣ ಭಾಗದ ಜನರೂ ಸಹ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಕುಡಿಯಲೆಂದು ಸರ್ಕಾರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. ಆದರೆ, ಅದು ಕೆಟ್ಟರೆ ಮತ್ತೆ ದುರಸ್ತಿಗೊಳಿ ಸದೆ ಆಡಳಿತ ಯಂತ್ರ ಕಡೆಗಣಿಸಿರುವು ದರಿಂದ ಗ್ರಾಮಗಳಲ್ಲಿ ಮತ್ತೆ ಹಳೆಯ ಪದ್ಧತಿ ಮರಳುವಂತಿದೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವು ತಿಂಗಳುಗಳೇ ಕಳೆದರೂ ಈವರೆಗೂ ಇದನ್ನು ಯಾರೂ ದುರಸ್ತಿಗೊಳಿಸಿಲ್ಲ. ಈ ಗ್ರಾಮಗಳಲ್ಲಿ ಪ್ಲೋರೈಡ್‌ ಅಂಶ ಅಧಿಕವಾಗಿದ್ದು, ಜನರು ಲವಣಾಂಶ ತುಂಬಿರುವ ನೀರು ಕುಡಿದು ಹಲವು ಕಾಯಿಲೆಗಳಿಗೆ ತುತ್ತಾಗಿದ್ದರು. ನಿತ್ಯ ಒಂದಲ್ಲ ಒಂದು ಅನಾರೋಗ್ಯಕ್ಕೆ ಸಿಲುಕಿ ಪರದಾಡುತ್ತಿದ್ದರು. ಈ ಹಿನ್ನೆಲೆ ಸರ್ಕಾರ ಶುದ್ಧ ನೀರಿನ ಘಟಕ ಅಳವಡಿಸಿತ್ತು. ಆದರೆ, ಯಂತ್ರಗಳು ಕೆಟ್ಟ ಬಳಿಕ ಕೇಳುವವರೇ ಇಲ್ಲದಂತಾಗಿದೆ.

ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ರಾಮಾಪುರ ಗ್ರಾಮದಲ್ಲಿರುವ ಸಮಸ್ಯೆ ಇದೀಗ ನನ್ನ ಗಮನಕ್ಕೆ ಬಂದಿದೆ ಸದ್ಯದಲ್ಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. –ಉಮೇಶ್‌, ತಾಪಂ, ಕಾರ್ಯ ನಿರ್ವಾಹಕ ಅಧಿಕಾರಿ, ಹನೂರು

ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಇದೀಗ ಬಂದಿದೆ. ಸದ್ಯದಲ್ಲೇ ಸ್ಥಳಕ್ಕೆ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. –ರವಿ, ಗ್ರಾಪಂ, ಅಧ್ಯಕ್ಷ, ರಾಮಾಪುರ

ಸುರೇಶ್‌ ಅಜ್ಜೀಪುರ

Advertisement

Udayavani is now on Telegram. Click here to join our channel and stay updated with the latest news.

Next