Advertisement

ರಮಾನಾಥ ರೈಯದ್ದು  ಮೊಸಳೆ ಕಣ್ಣೀರು: ಹರಿಕೃಷ್ಣ  ಬಂಟ್ವಾಳ

12:54 PM Jan 02, 2018 | Team Udayavani |

ಮಂಗಳೂರು: ಬಿ.ಸಿ.ರೋಡ್‌ನ‌ಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸಚಿವ ಬಿ. ರಮಾನಾಥ ರೈ ಅವರು ಸುರಿಸಿದ್ದು ಮೊಸಳೆ ಕಣ್ಣೀರು. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಕಣ್ಣೀರು ಬಂದಿದೆ. ಇದೇ ವೇಳೆ ರೈ ಅವರು ಪೂಜಾರಿಗೆ ಬೈದಿರುವ ವಿಚಾರದಲ್ಲಿ ಪೂಜಾರಿ ಅವರ ಮನೆಯವರನ್ನೂ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಂದಾಳು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನಾರ್ದನ ಪೂಜಾರಿ ಅವರಿಗೆ ಬೈದಿರುವ ವಿಚಾರದಲ್ಲಿ ನಾನು ರೈ ಅವರನ್ನು ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬರಲು ಆಹ್ವಾನಿಸಿದ್ದೆ. ಬೈದಿರುವುದಕ್ಕೆ ಸಾಕ್ಷಿಯಾಗಿರುವ ಅರುಣ್‌ ಕುವೆಲ್ಲೋ ಅವರು ಕೂಡ ಧರ್ಮಸ್ಥಳಕ್ಕೆ ಬರಲು ಒಪ್ಪಿದ್ದಾರೆ ಎಂದು ಸಚಿವ ರಮಾನಾಥ ರೈಗೆ ಸವಾಲು ಹಾಕಿದರು.

ಪಲಾಯನ ಯತ್ನ
ಬೈಯುವ ಸಂದರ್ಭದಲ್ಲಿ ಪೂಜಾರಿ ಅವರ ಮನೆಯವರು ಇರಲಿಲ್ಲ. ಹೀಗಿರುವಾಗ ತಾವು ಬೈದಿರುವ ವಿಚಾರವನ್ನು ಪೂಜಾರಿ ಅವರ ಮನೆಯವರು ಹೇಳಬೇಕು ಎನ್ನುವ ಮೂಲಕ ರಮಾನಾಥ ರೈ ಅವರು ಈ ವಿಚಾರದಿಂದ ಪಲಾಯನ ಮಾಡಲು ನೋಡುತ್ತಿದ್ದಾರೆ. ನಾನು ಈ ಹಿಂದೆ ಹೇಳಿರುವ ಮಾತಿಗೆ ಈಗಲೂ ಬದ್ಧನಿದ್ದು, ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದಕ್ಕೂ ಸಿದ್ಧನಿದ್ದೇನೆ. ಸಚಿವ ರೈ ಕೂಡ ಧರ್ಮಸ್ಥಳಕ್ಕೆ ಬರಲಿ ಎಂದು ಹರಿಕೃಷ್ಣ ಸವಾಲು ಹಾಕಿದ್ದಾರೆ. 

ಬೈದಿರುವ ವಿಚಾರವನ್ನು ನಾನೇ ಸೃಷ್ಟಿಸಿದ್ದೇನೆ ಎಂಬ ಆರೋಪ ನನ್ನ ಮೇಲಿದೆ. ಆದರೆ ನನಗೆ ಈ ವಿಚಾರವನ್ನು ತಿಳಿಸಿದ್ದು ಪೂಜಾರಿ ಅವರೇ. ಅರುಣ್‌ ಮೊದಲು ಪೂಜಾರಿ ಅವರ ಬಳಿಯೇ ಈ ವಿಚಾರವನ್ನು ತಿಳಿಸಿದ್ದರು. ಬಳಿಕ ನಾನು ಅರುಣ್‌ ಅವರಿಂದ ವಿವರವಾದ ಮಾಹಿತಿ ಪಡೆದಿದ್ದೇನೆ. ಜತೆಗೆ ಬೈದಿರುವ ವಿಚಾರಕ್ಕೆ ಕಂಕನಾಡಿ ಗರಡಿಯಲ್ಲಿ ಕಣ್ಣೀರಿಡುವ ಮೂಲಕ ಪೂಜಾರಿ ಅವರು ಈಗಾಗಲೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.

ಸಾಮಾನ್ಯ ವಿಚಾರಕ್ಕೆ ಕಣ್ಣೀರಿಡುವ ವ್ಯಕ್ತಿ ಪೂಜಾರಿ ಅವರಲ್ಲ. ಅವರು ಗಟ್ಟಿ ಸ್ವಭಾವದವರು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, 
ನರಸಿಂಹ ರಾವ್‌ ಹೀಗೆ ಮೂರು ಜನ ಪ್ರಧಾನಿಗಳ ಬಳಿ ಕೆಲಸ ಮಾಡಿದ್ದಾರೆ. ವಿಪಕ್ಷ ದಲ್ಲಿದ್ದರೂ ಸಂಸದ ನಳಿನ್‌ ಅವರು ಕೂಡ ಪೂಜಾರಿ ಅವರ ಕಾಲಿಗೆ ಬಿದ್ದು ಗೌರವ ಸೂಚಿಸುತ್ತಾರೆ ಎಂದರು.

Advertisement

ಪರಿಷತ್‌ಗೆ ಟಿಕೆಟ್‌ ತಪ್ಪಿಸಿದ್ದರು
“ನನಗೆ ವಿಧಾನ ಪರಿಷತ್‌ಗೆ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ನೀಡಲಿದೆ, ನೀವು ಅರ್ಜಿ ಹಾಕಬೇಕು ಎಂದು ಸ್ವತಃ ಕೋಡಿಜಾಲ್‌ ಇಬ್ರಾಹಿಂ ಕರೆ ಮಾಡಿ ತಿಳಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಸಚಿವ ರೈ ಅವರು ಜಿಲ್ಲೆಯ ಶಾಸಕರ ಬಳಿ ಪ್ರತಾಪ್‌ಚಂದ್ರ ಶೆಟ್ಟಿ ಅವರ ಹೆಸರು ಹೇಳಿಸಿದ್ದಾರೆ. ಇದು ಸುಳ್ಳು ಎಂದಾದರೆ ಈ ಹಿಂದೆ ಐವನ್‌ಗೆ ಪರಿಷತ್‌ಗೆ ಸೀಟು ಇಲ್ಲ ಎಂದಾಗ ರೈ ಅವರು ರಾಜೀನಾಮೆ ಕೊಡುವುದಾಗಿ ಬೆದರಿಸಿದ್ದರು. ನನಗೆ ಸೀಟು ಇಲ್ಲ ಎಂದಾಗ ಯಾಕೆ ರಾಜೀನಾಮೆ ಕೊಡುವುದಾಗಿ ಹೇಳಿಲ್ಲ? ಎಂದು ದೂರಿದ ಹರಿಕೃಷ್ಣ ಅವರು, 1985ರಲ್ಲಿ ಸರಪಾಡಿ ಜಿ.ಪಂ. ಕ್ಷೇತ್ರದಿಂದ ನನಗೆ ಟಿಕೆಟ್‌ ತಪ್ಪಿಸಿದವರು ಕೂಡ ರೈ ಅವರೇ. ಅಂದೇ ಅವರಿಗೆ ಗುಡ್‌ಬೈ ಹೇಳಿದ್ದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next