Advertisement

ಬಂಟ್ವಾಳದ ಅಶಾಂತಿಗೆ ಬಹುಸಂಖ್ಯಾಕ ಅಲ್ಪಸಂಖ್ಯಾಕ ಸಂಘಟನೆಗಳ ಮೇಲಾಟ ಕಾರಣ

05:30 AM Aug 19, 2017 | Team Udayavani |

ಬಂಟ್ವಾಳ: ತಾಲೂಕಿನಲ್ಲಿ ನಡೆದ ಮೂರು ಪ್ರಮುಖ ಹತ್ಯೆಗಳ ಪ್ರಕರಣವನ್ನು ಭೇಧಿಸುವಲ್ಲಿ ಪೊಲೀಸ್‌ ಇಲಾಖೆ ಯಶಸ್ವಿಯಾಗಿವೆ. ಇದು ಮತೀಯವಾದಿ ಸಂಘಟನೆಗಳ ಕೃತ್ಯ  ಇದು ಎಂದು ಮೇಲ್ನೊಟಕ್ಕೆ ಸಾಬೀತಾಗಿದೆ. ಬಹುಸಂಖ್ಯಾಕ ಮತ್ತು ಅಲ್ಪಸಂಖ್ಯಾಕ ಸಂಘಟನೆಗಳ ಮೇಲಾಟ ಸಂಘರ್ಷಕ್ಕೆ ಕಾರಣ. ಕಳೆದ ಕೆಲವು ಸಮಯದ ಹಿಂದೆ ಕಲ್ಲಡ್ಕ ಅಥವಾ ಇತರ ಕಡೆಗಳಲ್ಲಿ ನಡೆದ ಘರ್ಷಣೆ ಕೋಮು ಗಲಭೆಯಲ್ಲ. ಮತೀಯವಾದಿಗಳಿಂದ ನಡೆದ ಪೂರ್ವನಿಯೋಜಿತ ಕೃತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ಆ. 18ರಂದು ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆ ಭಯಮುಕ್ತ ಆಗಬೇಕು. ಮುಂದಕ್ಕೆ ಇಂತಹ ಕೃತ್ಯಗಳು ನಡೆಯಬಾರದು. ನಿರಂತರವಾಗಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು ಎಂದವರು ಆಶಿಸಿದರು.

Advertisement

ಕಲ್ಲಡ್ಕ ಮತ್ತು ಪುಣಚ ಶಾಲೆಗೆ ಬಿಸಿಯೂಟದ ವ್ಯವಸ್ಥೆ ಬೇಡ ಎಂದು ಡಾ| ಪ್ರಭಾಕರ ಭಟ್ಟರು ಲಿಖೀತವಾಗಿ ನೀಡಿದ್ದಾರೆ. ಮಕ್ಕಳಿಗೆ ಅನ್ನ ಬೇಕಾದರೆ ಬರೆದುಕೊಟ್ಟರೆ ಸರಕಾರದ ವತಿಯಿಂದ ಅನುದಾನಿತ ಶಾಲೆಗಳಿಗೂ ಬಿಸಿಯೂಟ ನೀಡುವ ವ್ಯವಸ್ಥೆ ಇದೆ. ಕೊಲ್ಲೂರಿನಿಂದ ಇಲ್ಲಿಗೆ ಹಣದ ರೂಪದಲ್ಲಿ ದುಡ್ಡು ಬರುತ್ತಿತ್ತು ಕಾನೂನಿನ ಪ್ರಕಾರ ದೇವಸ್ಥಾನದಿಂದ ಅದನ್ನು ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಗೆ ಗುಂಡೂರಾವ್‌ ಸರಕಾರ ಇದ್ದಾಗ ಜಮೀನು ನೀಡಲಾಗಿತ್ತು. ಶಾಲೆಗೆ ಕಾಂಗ್ರೆಸ್‌ ಸರಕಾರ ಜಮೀನು ನೀಡಿದೆ ಎಂದರು. ಕಲ್ಲಡ್ಕ ಪುಣಚ ಶಾಲೆಗೆ ಬರುವ ಅನುದಾನ ನಾನು ತಡೆದಿಲ್ಲ. ಕಾನೂನು ಪ್ರಕಾರ ಇದಾಗಿದೆ. ನಾನು ಯಾವುದೇ ಶಾಲೆಯ ಮಕ್ಕಳನ್ನು ಹೊರಗೆ ಹಾಕುವ ಕೆಲಸ ಮಾಡಿಲ್ಲ ಎಂದರು.

ನಂಬರ್‌ ಒನ್‌ ಹೇಗೆ ?
ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಕೇಂದ್ರ ಸರಕಾರದ ವ್ಯಾಪ್ತಿಯ ಬಿ.ಸಿ.ರೋಡ್‌ನ‌ ಸರ್ವಿಸ್‌ ರಸ್ತೆಯ ದುಃಸ್ಥಿತಿಯನ್ನೇ  ನಿವಾರಿಸಲು ಸಾಧ್ಯವಾಗಿಲ್ಲ. ಇನ್ನು ನಂಬರ್‌ ಒನ್‌ ಸಂಸದ ಎಂಬುದು ಹೇಗಾಗುತ್ತಾರೆ? ಇವರೇ ನಂಬರ್‌ ಒನ್‌ ಆಗಿದ್ದರೆ ರಾಜ್ಯದ ಇನ್ನುಳಿದ ಬಿಜೆಪಿ ಸಂಸದರು ಹೇಗಿದ್ದಾರು ಎಂದು ಪ್ರಶ್ನಿಸಿದರು. ಬಿ.ಸಿ. ರೋಡ್‌ ಸಹಿತ ಜಿಲ್ಲೆಯ ಸರ್ವಿಸ್‌ ರಸ್ತೆಗೆ ಆಸ್ಕರ್‌ ಫೆರ್ನಾಂಡಿಸ್‌ ಹತ್ತು ವರ್ಷಗಳ ಹಿಂದೆಯೇ 28 ಕೋ. ರೂ. ಅನುದಾನ ಮಂಜೂರು ಮಾಡಿದ್ದರೂ ಅದನ್ನು ಉಪಯೋಗಿಸಲು ಇನ್ನೂ ಸಾಧ್ಯವಾಗಿಲ್ಲ ಎಂದರು.

ದಿ| ಇಂದಿರಾ ಗಾಂಧಿ ಭೂಮಸೂದೆ ಕಾನೂನು ತಂದು ಬಡವರಿಗೆ ಜಮೀನು ಸಿಕ್ಕುವಂತೆ ಮಾಡಿದರು. ಬಿಜೆಪಿಯವರು ಭೂಮಾಲಕರಾಗಿದ್ದು ಅದನ್ನು ವಿರೋಧಿಸಿದ್ದರು. ಕರ್ನಾಟಕದಲ್ಲಿ ರಾಜ್ಯದ ಮುಖ್ಯಮಂತ್ರಿ ದೇವರಾಜ ಅರಸು ಅದನ್ನು ಅನುಷ್ಠಾನಿಸಿದರು.  ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ, ಭೂ ಮಸೂದೆ ಮೂಲಕ ಉಳುವವನೆ ಹೊಲದೊಡೆಯ, ಸಮಾನತೆ ಕಾನೂನನ್ನು ತಂದಿರುವುದು ಕಾಂಗ್ರೆಸ್‌ ಎಂದರು. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗೆ ಹೇಳುವುದು ಸಂಘಪರಿವಾರದ ನಾಟಕ. ಇದು ಖಂಡನೀಯ ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್‌ ಶೆಟ್ಟಿ, ಬಿ. ಪದ್ಮಶೇಖರ ಜೈನ್‌,ಎಂ. ಎಸ್‌.ಮಹಮ್ಮದ್‌, ಮಂಜುಳಾ ಮಾವೆ, ತಾ.ಪಂ.ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯರಾದ ಕೆ.ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್‌ ನಂದರಬೆಟ್ಟು, ಸದಸ್ಯ ಗಂಗಾಧರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಗೇರು ನಿಗಮ ಅಧ್ಯಕ್ಷ ಬಿ.ಎಚ್‌. ಖಾದರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next