Advertisement

ಸಂಸದರಿಂದ ಸುಳ್ಳು ಆರೋಪ: ರಮಾನಾಥ ರೈ

03:05 AM Jul 03, 2018 | Karthik A |

ಮಂಗಳೂರು: ಕಳೆದ ಐದು ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಜಿಲ್ಲೆ ಅಭಿವೃದ್ಧಿಯ ಸುವರ್ಣಯುಗವನ್ನು ಕಂಡಿದ್ದರೂ ಸಂಸದ ನಳಿನ್‌ ಕುಮಾರ್‌ ವಿನಾ ಕಾರಣ ಕಾಂಗ್ರೆಸ್‌ ನಾಯಕರ ವಿರುದ್ಧ ಆರೋಪಗಳನ್ನು ಮಾಡಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಮಂಗಳೂರು – ಸೋಲಾಪುರ ಹೆದ್ದಾರಿ ನಿರ್ಮಾಣದ ಕಾಮಗಾರಿ ತಡವಾಗಲು ನಾನು ಸೇರಿದಂತೆ ಮಾಜಿ ಶಾಸಕರಾದ ಕೆ. ಅಭಯಚಂದ್ರ ಜೈನ್‌ ಹಾಗೂ ಮೊದಿನ್‌ ಬಾವಾ ಕಾರಣ ಎಂಬುದಾಗಿ ಸಂಸದ ನಳಿನ್‌ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಹೆದ್ದಾರಿ ನಿರ್ಮಾಣದ ಭೂಸ್ವಾಧೀನದ ವೇಳೆ ಜಾಗ ಕಳೆದುಕೊಳ್ಳುವ ಸಾರ್ವಜನಿಕರ ವಿಶ್ವಾಸ ಗಳಿಸಲು ಮೂರು ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಆಮಂತ್ರಣವಿದ್ದರೂ ನಳಿನ್‌ ಸಭೆಗೆ ಭಾಗವಹಿಸದೆ ನಿರ್ಲಕ್ಷ್ಯ ತೋರಿದ್ದರು ಎಂದರು.

ಅತ್ಯಂತ ಸೋಮಾರಿ ಸಂಸದ 
ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ಉಲ್ಲೇಖೀಸಿದ ರಮಾನಾಥ ರೈ, ಲೇಡಿಗೋಷನ್‌ ಆಸ್ಪತ್ರೆಯ ಹೊಸ ಕಟ್ಟಡದ ನಿರ್ಮಾಣ, ಜಿಲ್ಲಾ ಅಂಬೇಡ್ಕರ್‌ ಭವನ, ವಿಮಾನ ನಿಲ್ದಾಣ ಸಂಪರ್ಕ ರಸ್ತೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಮಿನಿವಿಧಾನ ಸೌಧಗಳ ನಿರ್ಮಾಣ, ಜಿ.ಪಂ. ಹಾಗೂ ಗ್ರಾ.ಪಂ. ರಸ್ತೆಗಳ ಅಭಿವೃದ್ಧಿ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ನಡೆದಿವೆ. ಆದರೆ ಸಂಸದರು  ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಡಾಲರ್‌ ಬಗ್ಗೆಯೂ ತಿಳಿಯದ ನಳಿನ್‌ ಕೋಮು ಪ್ರಚೋದನಕಾರಿ ಭಾಷಣ ಮಾಡುವುದಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ. ಅವರು  ನಾನು ಕಂಡ ಅತ್ಯಂತ ಸೋಮಾರಿ ಸಂಸದ ಎಂದರು.

ಮೂಲರಪಟ್ಣ ಸೇತುವೆ ಕುಸಿಯಲು ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನಡೆದ ಮರಳುಗಾರಿಕೆ ಕಾರಣ ಎಂದು ಆರೋಪಿಸುತ್ತಿದ್ದಾರೆ. ಆದರೆ ಕಳೆದ 15 ವರ್ಷಗಳಿಂದಲೂ ಸೇತುವೆಯ ಸುತ್ತ ಮುತ್ತ ಮರಳುಗಾರಿಕೆ ನಡೆಯುತ್ತಿದೆ ಎಂದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆಯಲಿದೆ ಎಂಬ ಸುದ್ದಿ ಇದೆ, ನಿಜವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗದು ಗೊತ್ತಿಲ್ಲ. ನಾನು ಹೈಕಮಾಂಡ್‌ ಅಲ್ಲ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದರು. ಮೇಯರ್‌ ಭಾಸ್ಕರ್‌ ಕೆ., ಕಾಂಗ್ರೆಸ್‌ ಮುಖಂಡರಾದ ಶಶಿಧರ್‌ ಹೆಗ್ಡೆ, ನವೀನ್‌ ಡಿ’ಸೋಜಾ, ಪ್ರತಿಭಾ ಕುಳಾç, ಮಮತಾ ಗಟ್ಟಿ, ಸಾಹುಲ್‌ ಹಮೀದ್‌, ಅಶೋಕ್‌ ಡಿ.ಕೆ., ಶುಭೋದಯ ಆಳ್ವ ಉಪಸ್ಥಿತರಿದ್ದರು.

ಸೋಮಾರಿ ಯಾರೆಂಬ ಉತ್ತರ ಸಿಕ್ಕಿದೆ: ನಳಿನ್‌
ಮಂಗಳೂರು: ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹೇಳಿಕೆಗೆ ಸೋಮವಾರ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲು, ಯಾರು ಸೋಮಾರಿ ಎಂದು ಕಳೆದ ಚುನಾವಣೆಯಲ್ಲಿ ಜನರು ತೀರ್ಪು ನೀಡಿದ್ದಾರೆ ಎಂದು ಪ್ರತ್ಯುತ್ತರ ನೀಡಿದರು. ಕಳೆದ ಚುನಾವಣೆಯಲ್ಲಿ ಜನರು ಅವರನ್ನು ಕಾಡಿಗೆ ಕಳುಹಿಸಿದ್ದಾರೆ. ಹೀಗಾಗಿ ಅವರ ಆರೋಪಗಳಿಗೆ ನಾನು ಸ್ಪಂದಿಸುವ ಆವಶ್ಯಕತೆ ಇಲ್ಲ. ಕಳೆದ 30 ವರ್ಷಗಳಿಂದ ಸಚಿವನಾಗಿದ್ದೇನೆ ಎಂದು ಹೇಳಿಕೊಂಡಿರುವುದೇ ಅವರ ಸಾಧನೆ. ಅವರು ಸಚಿವರಾಗಿದ್ದಾಗ ಜಿಲ್ಲೆಗೆ ಏನು ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಜಿಲ್ಲೆಗೆ ಏನು ನೀಡಿದ್ದಾರೆ ಎಂಬುದನ್ನು ನಾನು ಹೇಳುತ್ತೇನೆ ಎಂದರು. ಡಾಲರ್‌ ನ  ಬಗ್ಗೆಯೂ ತಿಳಿಯದಿದ್ದ ನಳಿನ್‌ ಕೋಮು ಪ್ರಚೋದನಕಾರಿ ಭಾಷಣ ಮಾಡುವುದಕ್ಕೆ ಮಾತ್ರ ಸೀಮಿತ ಎಂಬ ರೈ ಹೇಳಿಕೆ ಬಗ್ಗೆ  ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಳಿನ್‌ ಅವರು, ರಮಾನಾಥ ರೈ ಅವರು ಸರ್ವಜ್ಞ . ಅವರಿಗೆ ಎಲ್ಲವೂ ತಿಳಿದಿದೆ ಎಂದಷ್ಟೇ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next