Advertisement

3 ವರ್ಷದಲ್ಲಿ 1 ಕೋಟಿ ಸಸಿ ನೆಡುವ ಗುರಿ

04:38 PM Jul 11, 2019 | Naveen |

ರಾಮನಗರ: ಪ್ರತಿ ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ‘ಕೋಟಿ-ನಾಟಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಅನುಷ್ಠಾನ ಅಧಿಕಾರಿ ಕೆ.ಪಿ.ನಾಗೇಶ್‌ ತಿಳಿಸಿದರು.

Advertisement

ನಗರದ ಆರ್‌.ಇ.ವಿ.ಸಿಎಸ್‌ ಕನ್ವೆನ್ಷನ್‌ ಹಾಲ್ನಲ್ಲಿ ರೋಟರಿ ಸಿಲ್ಕ್ ಸಿಟಿಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ ಅವರು ಮಾತನಾಡಿ, ಭಾರತದಲ್ಲಿರುವ ಎಲ್ಲಾ ರೋಟರಿ ಸಂಸ್ಥೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಜಾರಿ ಮಾಡಲಿವೆ ಎಂದರು.

ಮಳೆ ಕೊರತೆಯಿಂದ ಬರ: ಇಂದು ಭಾರತದಲ್ಲಿ ಅರಣ್ಯ ಬರಿದಾಗುತ್ತಿದೆ. ಮಳೆ ಕೊರತೆಯಿಂದಾಗಿ ಬರ ಕಾಡುತ್ತಿದೆ. ಕಾಲಕಾಲಕ್ಕೆ ಆಗಬೇಕಾಗಿದ್ದ ಮಳೆ ಆಗುತ್ತಿಲ್ಲ. ಹೀಗಾಗಿ ಕೃಷಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ರೋಟರಿ ಸಂಸ್ಥೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಭಾರತ ಇಂದು ಪೋಲೀಯೋ ಮುಕ್ತವಾಗಿದೆ. ಇಲ್ಲಿನ ಸರ್ಕಾರಗಳ ಜೊತೆಗೆ ರೋಟರಿ ನಡೆಸಿದ ಪರಿಣಾಮಕಾರಿ ಅಭಿಯಾನದಿಂದಾಗಿ ಈ ಯಶಸ್ಸು ಸಾಧನೆಯಾಗಿದೆ. ಇದೇ ದಾಟಿಯಲ್ಲಿ ಕೋಟಿ-ನಾಟಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರೋಟರಿ ಸದಸ್ಯರು ಸಾರ್ವಜನಿಕರ ಸಹಕಾರದಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

20 ರಾಷ್ಟ್ರಗಳ ಬಜೆಟ್ಗಿಂತ ಹೆಚ್ಚು ದಾನ: ವಿಶ್ವಾದ್ಯಂತ 200 ದೇಶಗಳಲ್ಲಿ ರೋಟರಿ ಅಸ್ತಿತ್ವದಲ್ಲಿದೆ. ಸಾಮಾಜಿಕ ಕಳಕಳಿಗಾಗಿ ಶ್ರಮಿಸುತ್ತಿರುವ ತಮ್ಮ ಸಂಸ್ಥೆಯ ವಿಶ್ವಾದ್ಯಂತ ಇರುವ ಸದಸ್ಯರು, ಪ್ರತಿ ವರ್ಷ ಅಗಾಧ ಪ್ರಮಾಣದ ಧನ ಸಹಾಯ ಮಾಡುತ್ತಿದ್ದಾರೆ. ವಿಶ್ವದ ಸುಮಾರು 20 ರಾಷ್ಟ್ರಗಳ ಒಟ್ಟಾರೆ ಬಜೆಟ್ಗಿಂತಲೂ ಹೆಚ್ಚು ಪ್ರಮಾಣದ ಧನ ಸಹಾಯವನ್ನು ರೋಟರಿ ಸದಸ್ಯರು ಮಾಡುತ್ತಿದ್ದಾರೆ ಎಂದರು.

Advertisement

ಭಾರತ ದೇಶ ಕಲವು ವರ್ಷಗಳ ಹಿಂದಿನವರೆಗೂ ಸ್ವೀಕರಿಸುವ (ಧನ ಸಹಾಯ ಪಡೆಯುವ) ರಾಷ್ಟ್ರವಾಗಿತ್ತು. ಆದರೆ, ಇಂದು ಭಾರತ ಇತ್ತೀಚಿನ ವರ್ಷಗಳಲ್ಲಿ ದಾನಿ ರಾಷ್ಟ್ರವಾಗಿ ಪ್ರಗತಿ ಸಾಧಿಸಿದೆ. ಕೊಡುಗೆ ನೀಡು ರಾಷ್ಟ್ರಗಳ ಪೈಕಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಜಪಾನ್‌, ಕೊರಿಯಾ ರಾಷ್ಟ್ರಗಳಿಗಿಂತಲೂ ಭಾರತ ಕೊಡುಗೆ ನೀಡುವಲ್ಲಿ ಮುಂದಿದೆ ಎಂದು ಹೇಳಿದರು.

ಎ.ಜೆ.ಸುರೇಶ್‌ ನೂತನ ಅಧ್ಯಕ್ಷ: 2019-20ನೇ ಸಾಲಿಗೆ ರೋಟರಿ ಸಿಲ್ಕ್ ಸಿಟಿಯ ನೂತನ ಅಧ್ಯಕ್ಷರಾಗಿ ಎ.ಜೆ.ಸುರೇಶ್‌ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷರ್‌ ಪಿನ್‌ ನೀಡುವುದರ ಮೂಲಕ ಅನುಷ್ಠಾನ ಅಧಿಕಾರಿ ಕೆ.ಪಿ.ನಾಗೇಶ್‌ ನೂತನ ಅಧ್ಯಕ್ಷರಿಗೆ ಪದವಿ ಪ್ರಧಾನ ಮಾಡಿದರು. ನಂತರ ನೂತನ ಅಧ್ಯಕ್ಷರು ನೂತನ ಕಾರ್ಯದರ್ಶಿ ಆರ್‌.ಶಿವರಾಜ್‌ ಸೇರಿದಂತೆ ಉಳಿದ ಪದಾಧಿಕಾರಿಗಳಿಗೆ ಪದವಿ ಪ್ರಧಾನ ಮಾಡಿದರು.

ನಿರ್ಗಮಿತ ಅಧ್ಯಕ್ಷ ಆರ್‌.ರಾಘವೇಂದ್ರ, ನಿರ್ಗಮಿತ ಕಾರ್ಯದರ್ಶಿ ಟಿ.ಜೆ.ಅನುರಾಧ ತಮ್ಮ ಅವಧಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ವಿವರಿಸಿದರು. ರೋಟರಿ ವಲಯ ಪಾಲಕದ ಆರ್‌.ಕುಮಾರಸ್ವಾಮಿ, ರೋಟರಿ ಜಿಲ್ಲಾ ಸಹಪಾಲಕ ಎಲ್.ಸಿದ್ದಪ್ಪಾಜಿ ಉಪಸ್ಥಿತರಿದ್ದರು. ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರದೀಪ್‌, ನರಸಿಂಹರಾಜು, ದೀಪಕ್‌, ಸಿ.ಕೆ.ನಾಗರಾಜು, ಕಿಶೋರ್‌, ರಾಘವೇಂದ್ರ ರೋಟರಿ ಸಿಲ್ಕ್ ಸಿಟಿಯ ನೂತನ ಸದಸ್ಯರಾಗಿ ಸೇರ್ಪಡೆಯಾದರು. ರೋಟರಿ ಪ್ರಮುಖರಾದ ಕೆ.ವಿ.ಉಮೇಶ್‌, ಬಿ.ಗೋಪಾಲ್, ಎಲ್.ಪ್ರಭಾಕರ್‌, ಅಮಿತ್‌ರಾಜ್‌ ಶಿವ, ಎನ್‌.ರವಿಕುಮಾರ್‌, ಲತಾ ಗೋಪಾಲ್, ಉಮಾಶಂಕರ್‌, ನವೀನ್‌, ಕುಮಾರ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next