ರಾಮನಗರ: ಬಡ ಹಾಗೂ ಕೂಲಿಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಊಟ ಮತ್ತು ತಿಂಡಿಯನ್ನು ನೀಡುವ ಇಂದಿರಾಕ್ಯಾಂಟೀನ್ ಇದೀಗ ಬಿಡದಿ ಮತ್ತು ಹಾರೋಹಳ್ಳಿಯಲ್ಲಿ ಪ್ರಾರಂಭವಾಗಲಿದೆ.
ಹೌದು., ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕಡಿಮೆ ಬೆಲೆಯಲ್ಲಿ ಊಟ ಮತ್ತು ಉಪಾಹಾರ ನೀಡುವ ಉದ್ದೇಶದಿಂದ 2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್ ಜಿಲ್ಲೆಯ ನಾಲ್ಕು ಪಟ್ಟಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ಪಟ್ಟಣ ಪ್ರದೇಶ ಎಂದು ಘೋಷಣೆಯಾದ ಈ ಎರಡೂ ಪ್ರದೇಶಗಳಲ್ಲಿ ಇರಲಿಲ್ಲ. ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಆಡಳಿತ ರೂಢ ಸರ್ಕಾರ ನಿರ್ಲಕ್ಚ್ಯ ತಾಳಿದ ಪರಿಣಾಮ ಇಂದಿರಾ ಕ್ಯಾಂಟೀನ್‌ಗಳು ಅವಗಣನೆಗೆ ಒಳಗಾಗಿದ್ದವು. ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆ ಕಾರ್ಯ ಮುಂದುವರಿದಿದೆ.
ಹೊಸ ಕ್ಯಾಂಟೀನ್ ತೆರೆಯಲು ಪ್ರಸ್ತಾವನೆ: ಹೊಸದಾಗಿ ಪಟ್ಟಣ ಪ್ರದೇಶ ಎಂದು ಘೋಷಣೆ ಯಾಗಿರುವ ಹಾರೋಹಳ್ಳಿ ಮತ್ತು ಬಿಡದಿಯಲ್ಲಿ ಇನ್ನೂ ಇಂದಿರಾ ಕ್ಯಾಂಟೀನ್ ಇಲ್ಲವಾಗಿದ್ದು, ಈ ಭಾಗದ ನಾಗರಿಕರು ಹಾಗೂ ಚುನಾಯಿತ ಪ್ರತಿನಿಧಿ ಗಳು ಇಂದಿರಾ ಕ್ಯಾಂಟೀನ್ ಬೇಕು ಎಂದು ಹಲವಾರು ಬಾರಿ ಮನವಿ ಸಲ್ಲಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸ ಕ್ಯಾಂಟೀನ್ ಪ್ರಾರಂಭಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕಾರ್ಮಿಕರಿಗೆ ಅನುಕೂಲ: ಬಿಡದಿ ಮತ್ತು ಹಾರೋಹಳ್ಳಿ ಪಟ್ಟಣಗಳು ಪ್ರಮುಖ ಕೈಗಾರಿಕಾ ಪ್ರದೇಶವಾಗಿದ್ದು ಈ ಎರಡೂ ಪಟ್ಟಣಗಳಿಗೆ ಕಾರ್ಮಿಕರು, ಕೂಲಿಕೆಲಸಕಾರರು, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಸಾಕಷ್ಟು ಮಂದಿ ಪ್ರತಿನಿತ್ಯ ಬಂದು ಹೋಗುತ್ತಿದ್ದು, ದಿನಗೂಲಿ ಕಾರ್ಮಿಕರು, ಬಡವರಿಗೆ ಇಂದಿರಾ ಕ್ಯಾಂಟೀನ್ ಅನುಕೂಲ ವಾಗಲಿದೆ. ಜಿಲ್ಲಾಡಳಿತ ಸರ್ಕಾರಕ್ಕೆ ಕೇವಲ ಪ್ರಸ್ತಾ ವನೆ ಸಲ್ಲಿಸಿ ಸುಮ್ಮನಾಗದೆ ಈ ಎರಡೂ ಪಟ್ಟಣಗಳಲ್ಲಿ ಇಂದಿರಾಕ್ಯಾಂಟೀನ್ ಅನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾಲ್ಕು ಇಂದಿರಾ ಕ್ಯಾಂಟೀನ್ ಯಶಸ್ವಿ ಕಾರ್ಯಾಚರಣೆ: ಪ್ರಸ್ತುತ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿಯಲ್ಲಿ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್‌ಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಕ್ಯಾಂಟೀನ್‌ಗಳಲ್ಲಿ ಪ್ರತಿನಿತ್ಯ 600 ರಿಂದ 650 ಮಂದಿ ಊಟ ಮಾಡುತ್ತಿದ್ದಾರೆ. ಮಧ್ಯಾಹ್ನದ ವೇಳೆ ಹೆಚ್ಚು ಮಂದಿ ಊಟ ಮಾಡುತ್ತಿದ್ದು, ಬೆಳಗ್ಗೆ ಮತ್ತು ರಾತ್ರಿ ಸ್ವಲ್ಪ ಕಡಿಮೆ ಇರುತ್ತದೆ. ಇನ್ನು ಸ್ಥಳೀಯ ನಗರಸಭೆ ಮತ್ತು ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಅಧಿ ಕಾರಿಗಳು ಆಗಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕೆಲವೊಮ್ಮೆ ಸ್ವತ್ಛತೆಯ ಬಗ್ಗೆ ದೂರುಗಳು ಬಂದಾಗ ಪರಿಶೀಲಿಸಿ ಕ್ರಮ ಜರುಗಿಸುತ್ತಿದ್ದಾರೆ.
ಹೊಸದಾಗಿ ಪಟ್ಟಣ ಪ್ರದೇಶ ಎಂದು ಘೋಷಣೆಯಾಗಿರುವ ಹಾರೋಹಳ್ಳಿ ಮತ್ತು ಬಿಡದಿ ಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರಕ್ಕೆ ವರದಿ ನೀಡಲಾಗಿದೆ. ಸರ್ಕಾರದಿಂದ ಅನುಮತಿ ದೊರೆಯುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
-ರಮೇಶ್, ಯೋಜನಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ
– ಸು.ನಾ.ನಂದಕುಮಾರ್