Advertisement

ರಾಮನಗರ: ಇನ್ನೂ ರೈತರ ಕೈ ಸೇರದ ಕ್ಷೀರಧಾರೆ ಹಣ!

11:48 AM Jun 08, 2023 | Team Udayavani |

ರಾಮನಗರ: ಸಾಲು ಸಾಲು ಸವಾಲುಗಳ ಮಧ್ಯೆ ಹೈನೋದ್ಯಮ ನಡೆಸಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆಸರೆ ಆಗಬೇಕಾದ
ಸರ್ಕಾರದ ಪ್ರೋತ್ಸಾಹಧನ ಏಳು ತಿಂಗಳಿಂದ ಕೈಸೇರಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

Advertisement

ನಿತ್ಯ 83 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ. ಅದರಂತೆ ಮಾಸಿಕ 8.70-8.90 ಲಕ್ಷ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ
ನೀಡ ಬೇಕು. ಹಾಲು ಒಕ್ಕೂಟದ ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ನವೆಂಬರ್‌ನಿಂದ ಇದುವರೆಗೆ ಸುಮಾರು 871 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆ ಆಗಬೇಕಿದೆ. 2022ರ ನವೆಂಬರ್‌ನಲ್ಲಿ ಅಕ್ಟೋಬರ್‌ ಸೇರಿದಂತೆ ಹಿಂದಿನ 3 ತಿಂಗಳ ಪ್ರೋತ್ಸಾಹ
ಧನದ ಬಾಬ್ತು 330 ಕೋಟಿ ಹಣ ಬಿಡುಗಡೆ ಮಾಡಿದ್ದ ಸರ್ಕಾರ, ರೈತರ ಖಾತೆಗೆ ನೇರವಾಗಿ ಜಮೆ ಮಾಡಿತ್ತು. ಅದಾದ ಬಳಿಕ ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ.

ರಾಜ್ಯದ 14 ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ, 15 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 24 ಲಕ್ಷ ಮಂದಿ
ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ಸರಾಸರಿ 9 ಲಕ್ಷ ಮಂದಿ ನಿತ್ಯ ಹಾಲು ಪೂರೈಕೆ ಮಾಡುತ್ತಿದ್ದಾರೆ.
ಹೈನುಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಕ್ಷೀರಧಾರೆ ಹೆಸರಿನಲ್ಲಿ ಪ್ರತಿ ಲೀಟರ್‌ ಗೆ ಸರ್ಕಾರ 5 ರೂ. ಪ್ರೋತ್ಸಾಹಧನ
ನೀಡುತ್ತಿದೆ. ಈ ಪ್ರೋತ್ಸಾಹ ಧನ ಮೇವಿನ ಕೊರತೆ, ರೋಗಬಾಧೆ, ಪಶು ಆಹಾರಗಳ ಬೆಲೆ ಹೆಚ್ಚಳ ಹೀಗೆ ಸವಾಲುಗಳ ನಡುವೆ
ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ಆಶಾಕಿರಣವಾಗಿದೆ.

443 ಕೋಟಿ ರೂ. ಹಿಂದಿನ ಸಾಲಿನ ಹಣ ಬಾಕಿ: 2023ರ ಮಾರ್ಚ್‌ ಅಂತ್ಯಕ್ಕೆ ಸರ್ಕಾರ 443 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಿದ್ದ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ
ಉಪಯೋಜನೆ (ಎಸ್‌ಇಪಿ ಟಿಎಸ್‌ಪಿ) ನಿಧಿಯಲ್ಲಿ 82 ಸಾವಿರ ಪ.ಜಾತಿ ಮತ್ತು ಸಮು ದಾಯದ ಹಾಲು ಉತ್ಪಾದಕರಿಗೆ
ಫೆಬ್ರವರಿವರೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ 443 ಕೋಟಿ ರೂ. ಸರ್ಕಾರದಿಂದ ಬಿಡುಗಡೆ
ಆಗಬೇಕಿರುವ ಕಾರಣ ಪಶುಸಂಗೋ ಪನೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಕಳುಹಿಸಿ ಅನುದಾನಕ್ಕೆ ಕಾದುಕುಳಿತಿದ್ದಾರೆ.

ಪ್ರೋತ್ಸಾಹಧನವೇ ಆಧಾರ: ರೈತರಿಂದ ಖರೀದಿಸುವ ಹಾಲಿಗೆ ರಾಜ್ಯದ 14 ಒಕ್ಕೂಟಗಳಲ್ಲೂ ಪ್ರತ್ಯೇಕ ಬೆಲೆ ಇದ್ದು,
30-32.75 ರೂ.ವರೆಗೆ ನೀಡಲಾಗುತ್ತಿದೆ. ರೈತರ ಹಾಲು ಉತ್ಪಾದನೆಗೆ ಪ್ರತಿ ಲೀಟರ್‌ಗೆ ಸ್ವಂತ ಮೇವಿದ್ದಲ್ಲಿ 22-24 ರೂ.
ಖರ್ಚಾಗುತ್ತಿದ್ದು, ಮೇವು ಖರೀದಿಸಿದರೆ 30 ರೂ. ದಾಟುತ್ತದೆ. ಹೀಗಾಗಿ, ರೈತರು ಲಾಭ ಕಾಣಬೇಕು ಎಂದಾದಲ್ಲಿ ಸರ್ಕಾರದಿಂದ
ಸಿಗುವ ಪ್ರೋತ್ಸಾಹ ಧನವೇ ಆಧಾರ.

Advertisement

ಆರಂಭದಿಂದಲೂ ಇದೇ ಪಾಡು
ಹಾಲು ಉತ್ಪಾದಕ ರೈತರಿಗೆ ನೆರವು ನೀಡುವ ಉದ್ದೇಶದಿಂದ 2008ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಪ್ರತಿ ಲೀಟರ್‌ಗೆ 2 ರೂ. ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತಂದರು. ಬಳಿಕ 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಈ ಪ್ರೋತ್ಸಾಹಧನವನ್ನು 4 ರೂ.ಗೆ ಹೆಚ್ಚಿಸಿದರು. ಬಳಿಕ 2016ರಲ್ಲಿ ಮತ್ತೆ 1 ರೂ. ಪ್ರೋತ್ಸಾಹಧನ ಹೆಚ್ಚಳ ಮಾಡಿ ಪ್ರತಿ ಲೀಟರ್‌ಗೆ 5 ರೂ. ನೀಡಲಾಯಿತು. ಕ್ಷೀರಧಾರೆ ಹೆಸರಿನ ಈ ಯೋಜನೆ ಆರಂಭವಾದಾಗಿನಿಂದಲೂ ರೈತರಿಗೆ ಕನಿಷ್ಠ 90ರಿಂದ 120 ದಿನಗಳ ಅವಧಿಗೆ ಒಂದು ಬಾರಿ ಬಿಡುಗಡೆಯಾಗುತ್ತಾ ಬಂದಿದೆ. ಆದರೆ, ಇದೇ ಮೊದಲ ಬಾರಿ 7 ತಿಂಗಳ ಕಾಲ ಅನುದಾನ ತಡವಾಗಿದೆ.

ನೆರೆಯಿಂದ ಹೈನೋದ್ಯಮಕ್ಕೆ ಹೊಡೆತ ಬಿದ್ದಿದ್ದು, ಈ ಸಮಯದಲ್ಲಿ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಯೋಜನಕ್ಕೆ ಬಾರದ ಯೋಜನೆಗಳಿಗೆ ಸಾವಿರಾರು ಕೋಟಿ ನೀಡುವ ಸರ್ಕಾರ, ಲಕ್ಷಾಂತರ ರೈತ ಕುಟುಂಬಗಳಿಗೆ ನೆರವಾಗುವ ಪ್ರೋತ್ಸಾಹಧನ ಬಿಡುಗಡೆಗೆ ಮೀನಮೇಷ ಎಣಿಸುತ್ತಿರುವುದು ಸರಿ ಅಲ್ಲ.
ಕೆ. ಮಯ್ಯಲ್ಲಯ್ಯ ಆಣೀಗೆರೆ,
ಉಪಾಧ್ಯಕ್ಷ, ರೈತ ಸಂಘ

ಸು.ನಾ. ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next