ರಾಮನಗರ/ಮಾಗಡಿ: ಕೋವಿಡ್ 19 ಮಹಾಮಾರಿಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಗುರುವಾರ 17 ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 332ಕ್ಕೇರಿದೆ. ಮಾಗಡಿ 2, ಚನ್ನಪಟ್ಟಣ 1 ಮತ್ತು ರಾಮನಗರದಲ್ಲಿ 14 ಪ್ರಕರಣಗಳು ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ.
ಇದೇ ದಿನ 12 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 157 ಮಂದಿ ಗುಣಮುಖರಾಗಿದ್ದಾರೆ. ಗುರುವಾರ ಚಿಕಿತ್ಸೆಗೆ ಸ್ಪಂದಿಸದೆ ಮಾಗಡಿ ತಾಲೂಕಿನ 48 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಒಟ್ಟು 8 ಮಂದಿ ತುತ್ತಾಗಿದ್ದಾರೆ.
ಮೂವರಿಗೆ ಕೋವಿಡ್ 19 ಸೋಂಕು: ಪಟ್ಟಣದ ರಾಜ್‌ಕುಮಾರ್ ರಸ್ತೆ ನಿವಾಸಿ (77) ಬುಧವಾರ ರಾತ್ರಿ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ 19 ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಕಳೆದ ವಾರ ಬೆಂಗಳೂರಿನ ರಾಜರಾಜೇಶ್ವರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಜಿಲ್ಲಾಡಳಿತ ಬುಲೆಟಿನ್‌ನಲ್ಲಿ ಪ್ರಕಟಿಸಿಲ್ಲ.
ತಿರುಮಲೆ ನಿವಾಸಿಗಳಾದ ಮೂರು ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕೊಂಡೊಯ್ಯಲು ಕೋವಿಡ್ 19 ವಾರಿಯರ್ಗಳು ಭೇಟಿ ನೀಡಿ ಮನವೊಲಿಸಿದರು. ನಂತರ ಕೋವಿಡ್ ಆಸ್ಪತ್ರೆ ಕರೆದೊಯ್ಯಯ್ದರು. ನಂತರ ಪ್ರದೇಶವನ್ನು ಸೀಲ್‌ಡೌನ್‌ಗೊಳಿಸಲಾಯಿತು.
ಪಟ್ಟಣದಲ್ಲಿ ದಿನೆ ದಿನೇ ಕೋವಿಡ್ 19 ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದ ಪಕ್ಷದ ನಾಯಕರು ಕ್ವಾರಂಟೈನ್ ಆಗಿರುವುದರಿಂದ ಜನರಿಗೆ ಧೈರ್ಯ ತುಂಬವವರು ಇಲ್ಲದಂತಾಗಿದೆ. ನಾಯಕರಿಲ್ಲದ ಕಾರಣ ಕಾರ್ಯಕರ್ತರು ಮನೆ ಸೇರಿಸಿದ್ದಾರೆ. ಅಧಿಕಾರಿಗಳು ಮಾತ್ರ ಕರ್ತವ್ಯದಲ್ಲಿ ನಿರತರಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.