ರಾಮನಗರ: ನರೆಹೊರೆ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕು ಕೇಕೆಹಾಕುತ್ತಿದ್ದರೂ ಗ್ರೀನ್ ಜೋನ್‌ನಲ್ಲಿದ್ದ ರಾಮನಗರ ಜಿಲ್ಲೆಯಲ್ಲಿ ಇದೀಗ 19 ಸೋಂಕಿತರು ಪತ್ತೆಯಾಗಿರುವ ಆತಂಕದ ನಡುವೆ ಬಿಡದಿಯ ತರಕಾರಿ ವ್ಯಾಪಾರಿಯೊಬ್ಬರು ಕೋವಿಡ್-19 ಸೋಂಕಿಗೆ ಬಲಿಯಾಗಿರುವ ಪ್ರಕರಣ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಈ ನಡುವೆ ಸಂತಸದ ಸಂಗತಿಯೆಂದರೆ ಮಾಗಡಿಯ ಮಗುವು ಕೋವಿಡ್ 19 ಸೋಂಕಿ ನಿಂದ ಚೇತರಿಸಿಕೊಂಡಿದ್ದು, ಸಕ್ರಿಯ 22 ಪ್ರಕರಣಗಳಿವೆ. ತಾಲೂಕಿನ ಬಿಡದಿಯಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದ 45 ವರ್ಷ ವಯಸ್ಸಿನ ವ್ಯಕ್ತಿ ಎದೆ ನೋವಿನ ಕಾರಣ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ನಂತರ ಆ ವ್ಯಕ್ತಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಿಡದಿಯ ಪ್ರಮುಖ ರಸ್ತೆಯೊಂದರ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಶನಿವಾರ ಎದೆನೋವು ಕಾಣಿಸಿ ಕೊಂಡಿತ್ತು. ಸ್ಥಳೀಯ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ಹೋದಾಗ ಅನುಮಾನ ಬಂದ ವೈದ್ಯರು ಬೌರಿಂಗ್ ಆಸ್ಪತ್ರೆಗೆ ಕಳುಹಿಸಿ ದ್ದರು. ಅಲ್ಲಿನ ವೈದ್ಯರು ಇವರನ್ನು ದಾಖಲಿಸಿಕೊಂಡು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿ, ಎದೆ ನೋವಿಗೆ ಚಿಕಿತ್ಸೆ ಆರಂಭಿಸಿದ್ದರು.
ಆದರೆ ಇವರು ಚಿಕಿತ್ಸೆ ಫಲಕಾರಿ ಯಾಗದ ಭಾನುವಾರ ಮಧ್ಯಾಹ್ನ ಮೃತಪಟ್ಟಿ ದ್ದಾರೆ. ಸಂಜೆ ವೇಳೆಗೆ ಕೋವಿಡ್ 19 ಫಲಿತಾಂಶ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪ ತ್ರೆಯ ವೈದ್ಯರು ಮೃತದೇಹವನ್ನು ವಾರಸುದಾರರಿಗೆ ನೀಡಲು ನಿರಾಕರಿಸಿ ದ್ದಾರೆ. ಬೆಂಗಳೂರಿನ ಮೈಸೂರು ಸರ್ಕಲ್ ಬಳಿ ಇರುವ ಸ್ಮಶಾನದಲ್ಲಿ ವೈಜ್ಞಾನಿಕ ಕ್ರಮಗಳ ನ್ನು ಕೈಗೊಂಡು ಅಂತ್ಯ ಸಂಸ್ಕಾರ ನೆರೆವೇರಿಸಲು ಕುಟುಂಬಸ್ಥರು ಸಹ ಒಪ್ಪಿಕೊಂಡಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಿರಿಯ ಪುತ್ರನಿಗೆ ಜ್ವರ ಕಾಣಿಸಿಕೊಂಡಿದೆ ಎಂದು ಗೊತ್ತಾಗಿದೆ. ಪತ್ನಿ ಮತ್ತು ಹಿರಿಯ ಮಗ ಆರೋಗ್ಯವಾಗಿದ್ದಾರೆ. ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ ಮಾಡುವುದಾಗಿ ಮೂಲಗಳು ತಿಳಿಸಿವೆ.