Advertisement
ಅಂಗಡಿ ಮುಂಗಟ್ಟುಗಳ ಬಾಗಿಲು ಬಂದ್: ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ರಾಮನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಾಗಿಲು ಹಾಕಿದ್ದವು. ಅಲ್ಲಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಬಂದ್ ಆಯೋಜಕರು ಬಾಗಿಲು ಹಾಕಿಸುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲ ಅಂಗಡಿಗಳ ಬಾಗಿಲು ಹಾಕಿಸುವ ವೇಳೆ ಸಂಘಟನೆಯ ಕಾರ್ಯಕರ್ತರು ಮತ್ತು ಅಂಗಡಿ ಮಾಲೀಕರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದ್ದನ್ನು ಹೊರತು ಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು. ನಗರದ ಹೋಟೆಲ್‌ಗಳು, ಸೂಪರ್‌ಮಾರ್ಕೆಟ್ ಗಳು, ಚಿನ್ನಾಭರಣ ಅಂಗಡಿಗಳು, ಸ್ಟೇಷನರಿ ಶಾಪ್ ಗಳು, ವೈನ್‌ಶಾಪ್, ಬಾರ್‌ಅಂಡ್ ರೆಸ್ಟೋರೆಂಟ್ ಸೇರಿ ದಂತೆ ಮಳಿಗೆಗಳನ್ನು ಮುಚ್ಚಲಾಗಿತ್ತು. ಮಧ್ಯಾಹ್ನದವರೆಗೆ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಮಧ್ಯಾಹ್ನದ ಬಳಿಕ ಅಲ್ಲಲ್ಲಿ ಮಳಿಗೆಗಳನ್ನು ತೆರೆಯಲಾಗಿತ್ತು.
Related Articles
Advertisement
ಪ್ರಮುಖರ ಸಾಥ್: ಬಂದ್‌ಗೆ ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಅಧ್ಯಕ್ಷ ಕೃಷ್ಣೇಗೌಡ, ಜೆಡಿಎಸ್ ರಾಜ್ಯ ವಕ್ತಾರ ನರಸಿಂಹ ಮೂರ್ತಿ ಸೇರಿದಂತೆ ಇತರರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿ ದ್ದರು. ಬಂದ್ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ನಗರದಾದ್ಯಂತ ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುವ ಮೂಲಕ ಎಚ್ಚರ ವಹಿಸಿದರು.
ಬೈಕ್ ರ್ಯಾಲಿ: ಡಿಕೆಶಿ, ಡಿಕೆಸು ವಿರುದ್ಧ ಧಿಕ್ಕಾರ : ನಗರದ ಕೆಂಪೇಗೌಡ ಸರ್ಕಲ್ ನಿಂದ ಹೋರಾಟ ಸಮಿತಿ ಸದಸ್ಯರು ಬಂದ್ ವೇಳೆ ಬೈಕ್ ರ್ಯಾಲಿ ನಡೆಸಿದರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಾಗಿಲು ತೆರೆದಿದ್ದ ಅಂಗಡಿ ಮಳಿಗೆಗಳನ್ನು ಬಂದ್ ಮಾಡಿಸಿದರು. ಬಳಿಕ ಐಜೂರು ವೃತ್ತದಲ್ಲಿ ಜಮಾ ವಣೆ ಗೊಂಡ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿದರು. ಹಳೇ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಕೆಲಕಾಲ ತಡೆದರು. ಐಜೂರು ವೃತ್ತದಲ್ಲಿ ಟೈಯರ್‌ಗೆ ಬೆಂಕಿ ಹಾಕಿ ಪ್ರತಿಭಟಿಸಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಮೆಡಿಕಲ್ ಕಾಲೇಜು ಸ್ಥಳಾಂತರಕ್ಕೆ ಕಾರಣ ಎಂದು ದಿಕ್ಕಾರ ಕೂಗಿದರು.
ಇದೇ ವೇಳೆ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟಿಸಿ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು 40 ನಿಮಿಷಗಳಿಗೂ ಹೆಚ್ಚುಕಾಲ ಕಾಯ್ದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದರಿಂದ ಅವರು ಹೊರಗೆ ಬರಲಿಲ್ಲ. ಪ್ರತಿಭಟನಾಕಾರರು ಡೀಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಸುತ್ತುವರೆದರು.
ಬಳಿಕ ಎಂಎಲ್‌ಸಿ ಯೋಗೇಶ್ವರ್ ಮತ್ತು ಎ.ಮಂಜುನಾಥ್ ಅವರನ್ನು ಜಿಲ್ಲಾಧಿಕಾರಿ ಕಚೇರಿ ಒಳಕ್ಕೆ ಬಿಟ್ಟು ಉಳಿದವರು ಪ್ರವೇಶಿಸಿದಂತೆ ಗೇಟ್ ಬಂದ್ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
15 ದಿನಗಳ ಗಡುವು: ಬಂದ್ ಹಿನ್ನೆಲೆಯಲ್ಲಿ ನಗರದ ಐಜೂರು ವೃತ್ತದಿಂದ ಕೆಂಗಲ್ ಹನುಮಂತಯ್ಯ ವೃತ್ತ, ಎಂ.ಜಿ.ರಸ್ತೆ, ಎಸ್ಪಿ ಕಚೇರಿ ವೃತ್ತದ ಮೂಲಕ ಹಾಯ್ದು ಹಳೇ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಯುದ್ದಕ್ಕೂ ಕಾಂಗ್ರೆಸ್ ಸರ್ಕಾರ ಹಾಗೂ ಡಿಕೆಎಸ್ ಸಹೋದರರ ವಿರುದ್ಧ ಧಿಕ್ಕಾರ ಕೇಳಿಬಂದವು.ಕನಕಪುರಕ್ಕೆ ಸ್ಥಳಾಂತರ ಗೊಳಿಸಿರುವ ಮೆಡಿಕಲ್ ಕಾಲೇಜನ್ನು ರಾಮನಗರದ ಆರೋಗ್ಯ ವಿವಿ ಕ್ಯಾಂಪಸ್‌ನಲ್ಲಿ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು. ಇನ್ನು 15 ದಿನಗಳ ಒಳಗೆ ಸ್ಥಳಾಂತರವನ್ನು ರದ್ದುಪಡಿಸದೇ ಹೋದಲ್ಲಿ ಮಾಗಡಿ ಮತ್ತು ಚನ್ನಪಟ್ಟಣದಲ್ಲೂ ಬಂದ್ ಮಾಡಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ವಿವಾದಕೆ ಕಾರಣವಾದ್ಕಬ್ರಿಟೀಷ್ ಲಿಕರ್ ಶಾಪ್: ರಾಮನಗರ ಬಂದ್‌ನಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವಾದರೂ, ನಗರ ದ ಕೆಲ ಬಾರ್‌ಗಳು ಅರ್ಧಬಾಗಿಲು ತೆರೆದು 12 ಗಂಟೆಯ ಸುಮಾರಿಗೆ ವ್ಯಾಪಾರ ಆರಂಭಿಸಿದವು. ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬ್ರಿಟೀಷ್ ಲಿಕ್ಕರ್ ಮದ್ಯದಂಗಡಿ ತೆರೆದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಬಂದ್‌ನ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎ.ಮಂಜುನಾಥ್ ಅವರು ಈ ಮದ್ಯದಂಗಡಿಯ ಮಾಲೀಕರು ಎಂಬುದು ಚರ್ಚೆಯ ವಿಷಯವಾಗಿತ್ತು. ಇನ್ನು ಕೆಲ ಮಂದಿ ಬಾರ್‌ಗಳನ್ನು ಬಂದ್ ಮಾಡಲು ಅಬಕಾರಿ ಅನುಮತಿ ಅಗತ್ಯ. ಈ ಕಾರಣದಿಂದ ಬಾರ್‌ಗಳನ್ನು ತೆರೆಯಲಾಗಿದೆ ಎಂದು ಬಾರ್ ತೆರೆದಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದು ಕಂಡು ಬಂದಿತು.