ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪಕ್ಷದಲ್ಲಿಯೇ ಮುಂದುವರಿ ಯುವುದಾಗಿ ಹೇಳಿದ್ದಾರೆ.
ರಾಜೀನಾಮೆ ಹಿಂಪಡೆಯುವ ತಮ್ಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಮತ್ತು ಕಾರ್ಯಕರ್ತರಿಗೆ ಮನವಿ ರೂಪದಲ್ಲಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಬಹುತೇಕ ರಾಜಕೀಯ ವಿದ್ಯಮಾನಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾರ್ಯಕರ್ತರಿಗೆ ಬಹುತೇಕ ಅರಿವಿದೆ.
ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ವಿದ್ಯಮಾನಗಳಿಂದ ಬೇಸರವಾಗಿ ಜು. 6 ರಂದು ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ. ನಾನೆಂದು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟವನಲ್ಲ. ಸ್ಥಾನಮಾನ ಪಡೆಯಲು ನಾನು ಎಂದೂ ಆಸೆಪಟ್ಟವನಲ್ಲ, ಕಳೆದ 45 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ, 7 ಬಾರಿ ಶಾಸಕನಾಗಿ ಪಕ್ಷದ ಶ್ರೇಯೋಭಿವೃದ್ಧಿಗಾಗಿ ಮತ್ತು ನನ್ನ ಮತಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಸಚಿವನಾಗಿದ್ದಂಥ ಸಂದರ್ಭದಲ್ಲಿ ರಾಜ್ಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ.
ಕಾಂಗ್ರೆಸ್‌ನ ಹಲವಾರು ವಿದ್ಯಮಾನಗಳಿಂದ ಶಾಸಕ ಸ್ಥಾನಕ್ಕೆ ಮಾತ್ರ ನನ್ನ ರಾಜೀನಾಮೆ ಹೊರತು ಪಕ್ಷಕ್ಕಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ.
ಕಾಂಗ್ರೆಸ್‌ನ ಹಿರಿಯ ನಾಯಕರು ರಾಜೀನಾಮೆ ವಾಪಾಸ್ ಪಡೆದು ಪಕ್ಷದಲ್ಲಿರು ವಂತೆ ಕೋರಿರುತ್ತಾರೆ. ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ವಾಪಸ್ ಪಡೆಯಲು ಮನವಿ ಮಾಡಿಕೊಂಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.