Advertisement

ಬಿಜೆಪಿಯ ತಪ್ಪುಗಳೇ ಕಾಂಗ್ರೆಸ್‌ಗೆ ವರದಾನ: ರಾಮಲಿಂಗಾರೆಡ್ಡಿ

11:18 PM Apr 03, 2023 | Team Udayavani |

ಬೆಂಗಳೂರು: ಬಿಜೆಪಿಯ ತಪ್ಪುಗಳೇ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರದಾನವಾಗಲಿವೆ. ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಜತೆಗೆ ಅಡುಗೆ ಅನಿಲ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಆಕ್ರೋಶವಿದೆ. ಇವೆಲ್ಲದರ ನಡುವೆ ಕಾಂಗ್ರೆಸ್‌ ನೀಡಿರುವ 4 ಗ್ಯಾರಂಟಿ ಯೋಜನೆಗಳು ಜನರಲ್ಲಿ ವಿಶ್ವಾಸ ಮೂಡಿಸಿರುವುದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಪಾದಿಸಿದ್ದಾರೆ.

Advertisement

“ಉದಯವಾಣಿ’ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಭಾಗದ ತಟಸ್ಥ ಮತದಾರರು ಈ ಚುನಾವಣೆಯಲ್ಲಿ ನಮ್ಮ ಪರ ಒಲವು ತೋರಲಿದ್ದಾರೆ. ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ಬಗ್ಗೆ ಬಡವರು, ಕೆಳವರ್ಗದ ಜನರಲ್ಲಿ ವಿಶ್ವಾಸ ಮೂಡಿದೆ. ನಾವು ಅಧಿಕಾರಕ್ಕೆ ಬಂದಾಗ ಕೊಟ್ಟ ಭರವಸೆ ಈಡೇರಿಸಿದ್ದೆವು. ಕಾಂಗ್ರೆಸ್‌ ಬಂದರೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಇವೆಲ್ಲ ಅಂಶಗಳು ನಾವು ಅಧಿಕಾರಕ್ಕೆ ಬರಲು ಸಹಕಾರಿಯಾಗಲಿವೆ ಎಂದು ಸಮರ್ಥಿಸಿಕೊಂಡರು.

ಜನರಲ್ಲಿ ಆಕ್ರೋಶವಿದೆ
2013ರಿಂದ 2018ರ ವರೆಗೆ ಕಾಂಗ್ರೆಸ್‌ ಅಧಿಕಾರ ನಡೆಸಿತ್ತು. ಅನಂತರ ನಡೆದ ಚುನಾವಣೆಯಲ್ಲಿ ತಟಸ್ಥ ಮತದಾರರು ಬಿಜೆಪಿಯತ್ತ ವಾಲಿದ್ದರು. ಆದರೆ, ಈ ಬಾರಿ ತಟಸ್ಥ ಮತದಾರರು ಕಾಂಗ್ರೆಸ್‌ ಪರ ಇದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, 40 ಪರ್ಸೆಂಟ್‌ ಕಮಿಷನ್‌, ಪಿಎಸ್‌ಐ, ಪ್ರಾಧ್ಯಾಪಕರ ನೇಮಕಾತಿ ಅಕ್ರಮ, ಕಾನೂನು ಮತ್ತು ಸುವ್ಯವಸ್ಥೆ ವೈಫ‌ಲ್ಯ ಇವೆಲ್ಲದರ ಬಗ್ಗೆ ಜನರಲ್ಲಿ ಆಕ್ರೋಶವಿದ್ದು ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದರು.

ಮೀಸಲಾತಿ ವಿಚಾರದಲ್ಲೂ ಬಿಜೆಪಿ ತಪ್ಪು ಮಾಡಿದೆ. ಚುನಾವಣೆ ಸಮಯ ದಲ್ಲಿ ಮಾಡಿರುವುದರಿಂದ ಇದು ಜಾರಿಯಾಗು ವುದಿಲ್ಲ ಎಂಬುದು ಗೊತ್ತಿದೆ. ಈಗಾಗಲೇ ಬಂಜಾರ ಸಮುದಾಯ, ನಂಜಾವಧೂತ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ. ದಲಿತ ಸಂಘಟನೆಗಳ ವಿರೋಧವೂ ಇದೆ. ಪಂಚಮಸಾಲಿ ಸಮುದಾಯಕ್ಕೂ ಸಮಾಧಾನವಿಲ್ಲ. ಬಿಜೆಪಿಗೆ ಇದು ಖಂಡಿತ ಅನುಕೂಲ ಆಗುವುದಿಲ್ಲ ಎಂದು ತಿಳಿಸಿದರು.

ಗೆಲ್ಲುವ ಅವಕಾಶ ಪರಿಗಣಿಸಿ ಟಿಕೆಟ್‌
ಟಿಕೆಟ್‌ ಸಿಗದವರಿಂದ ಪ್ರತಿಭಟನೆ, ಆಕ್ರೋಶ, ಧರಣಿ ಸಹಜ. ಆದರೆ ನಾವು ಪ್ರತಿ ಕ್ಷೇತ್ರದ ಬಗ್ಗೆಯೂ ನಮ್ಮದೇ ಆದ ರೀತಿ ಯಲ್ಲಿ ಆಂತರಿಕ ಸಮೀಕ್ಷೆ ಮಾಡಿಸಿದ್ದೇವೆ. ಯಾರಿಗೆ ಗೆಲ್ಲುವ ಅವಕಾಶ ಇದೆ, ಬಿಜೆಪಿ ಹಾಗೂ ಜೆಡಿಎಸ್‌ಗೆ ಫೈಟ್‌ ಕೊಡಬಲ್ಲವರು ಯಾರು ಎಂಬೆಲ್ಲ ಅಂಶ ಪರಿಗಣಿಸಿಯೇ ಟಿಕೆಟ್‌ ತೀರ್ಮಾನ ಮಾಡುತ್ತಿದ್ದೇವೆ ಎಂದರು.

Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಅವಕಾಶ ಇರುವುದರಿಂದ ಟಿಕೆಟ್‌ಗೆ ಹೆಚ್ಚು ಬೇಡಿಕೆ ಇದೆ. ಒಂದು ಕ್ಷೇತ್ರಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್‌ ನೀಡಲು ಸಾಧ್ಯ. ಉಳಿದವರಿಗೆ ಪರಿಷತ್‌ ಸದಸ್ಯತ್ವ ಸೇರಿ ಬೇರೆ ಬೇರೆ ಅವಕಾಶ ಕಲ್ಪಿಸುವ ಭರವಸೆ ನೀಡಿ ಸಮಾಧಾನ ಮಾಡುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ಸಮಸ್ಯೆ ಇಲ್ಲ. ಬಿಜೆಪಿ-ಜೆಡಿಎಸ್‌ನಲ್ಲೂ ಇದೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ ಎಂದರು.

ಕಾಂಗ್ರೆಸ್‌ನಲ್ಲಿ ಈ ಹಿಂದೆ ನಾಮಪತ್ರ ಸಲ್ಲಿಕೆಗೆ ಕೊನೆಯ ಎರಡು ಮೂರು ದಿನ ಬಾಕಿ ಇರುವಾಗ ಅಭ್ಯರ್ಥಿಗಳಿಗೆ ಬಿ ಫಾರಂ ಕೊಡಲಾಗುತ್ತಿತ್ತು. ಆದರೆ ಈ ಬಾರಿ ತಿಂಗಳ ಮುಂಚೆಯೇ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಅಭ್ಯರ್ಥಿಗಳು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹೆಚ್ಚು ಸಮಯ ಸಿಕ್ಕಂತಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ನನಗೆ ವಹಿಸಿದ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ಅನಂತರ ಸಂಘಟನೆಗೆ ಬಲ ತುಂಬಿದ್ದಾರೆ. ಮೇಕೆದಾಟು ಹೋರಾಟ, ಸ್ವಾತಂತ್ರ್ಯ ನಡಿಗೆ, ಭಾರತ್‌ ಜೋಡೋ ಯಾತ್ರೆ, ಪ್ರಜಾಧ್ವನಿ ಯಾತ್ರೆಯಿಂದ ಪಕ್ಷಕ್ಕೆ ಶಕ್ತಿ ತುಂಬಿದೆ. ನಮ್ಮ ಗ್ಯಾರಂಟಿ ಕಾರ್ಡ್‌ ಅನ್ನು ಬಡವರ್ಗ ತುಂಬು ಹೃದಯದಿಂದ ಸ್ವೀಕಾರ ಮಾಡುತ್ತಿದ್ದಾರೆ ಎಂದರು.

ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ನಮ್ಮಿಂದ ಹೋದವರ ಕ್ಷೇತ್ರಗಳಲ್ಲಿ ಕೆಲವೆಡೆ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆಯಾದರೂ ಪಕ್ಷಕ್ಕೆ ಜನರ ಒಲವು ಇದ್ದಾಗ ಅಭ್ಯರ್ಥಿಗೆ ಬಲ ಬರುತ್ತದೆ. ಹೀಗಾಗಿ ಬೆಂಗಳೂರು ಸೇರಿ ಹಳೇ ಮೈಸೂರು ಭಾಗದಲ್ಲಿ ನಾವು ನಮ್ಮ ಶಕ್ತಿ ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಬಿಎಸ್‌ವೈಗೆ ಬೆದರಿಕೆ
ಬಿಜೆಪಿಗೆ ಈ ಸಲ ಲಿಂಗಾಯತ ಸಮುದಾಯ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುವುದಿಲ್ಲ. ಏಕೆಂದರೆ ಯಡಿಯೂರಪ್ಪ ಅವರನ್ನು ಮೂಲೆಗೆ ತಳ್ಳಿದ್ದಾರೆ. ಅವರನ್ನು ನಡೆಸಿಕೊಂಡ ಬಗ್ಗೆ ಲಿಂಗಾಯತರಲ್ಲಿ ಅಸಮಾಧಾನವಿದೆ. ಈ ಸಮುದಾಯದ ಮತಗಳು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಗೆ ಹರಿದು ಹಂಚಿ ಹೋಗಲಿವೆ. ಈಗಲೂ ಮೇಲ್ನೋಟಕ್ಕೆ ಯಡಿಯೂರಪ್ಪ ಬಗ್ಗೆ ಪ್ರೀತಿ ತೋರುತ್ತಾರೆ. ಆದರೆ ಇ.ಡಿ-ಐಟಿ ಬೆದರಿಕೆಯೊಡ್ಡಿ ಸುಮ್ಮನಾಗಿಸಿರುವುದು ಎಲ್ಲರಿಗೂ ಗೊತ್ತು. ನಮ್ಮಿಂದ ಬಿಜೆಪಿಗೆ ಹೋದವರಿಗೆ ಮತ್ತೆ ವಾಪಸ್‌ ಬರಲು ಇಷ್ಟವಿದೆ. ಆದರೆ, ಅವರಿಗೂ ಇಡಿ-ಐಟಿ ಗುಮ್ಮ ತೋರಿಸಿ ಇರಿಸಿಕೊಂಡಿದ್ದಾರೆ.

ಹೊಂದಾಣಿಕೆ ಪ್ರಶ್ನೆ ಇಲ್ಲ
ಬೆಂಗಳೂರಿನಲ್ಲಿ ನಾವು 2018ರಲ್ಲಿ ಗೆದ್ದಿದ್ದಷ್ಟು ಕ್ಷೇತ್ರ ಉಳಿಸಿಕೊಂಡು ಇನ್ನೂ ಒಂದೆರಡು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ನಮ್ಮಿಂದ ಬೇರೆ ಪಕ್ಷಕ್ಕೆ ಹೋಗಿರುವವರ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ತಲಾಷೆ ನಡೆಸುತ್ತಿದ್ದೇವೆ. ಎಲ್ಲಿಯೂ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸದು.

 

Advertisement

Udayavani is now on Telegram. Click here to join our channel and stay updated with the latest news.

Next