ಬೆಂಗಳೂರು: ನಾಲ್ಕನೇ ಚುನಾವಣೆಗೆ ಅಣಿಯಾಗುತ್ತಿರುವ ಬಿಟಿಎಂ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ನಗರದ ರಾಜಕಾರಣದ ಮೇಲೆ ಹಿಡಿತ ಇಟ್ಟುಕೊಂಡಿರುವ ರಾಮಲಿಂಗಾರೆಡ್ಡಿ ಅವರಿಗೆ ಪ್ರಬಲ ಎದುರಾಳಿ ಯಾರೆಂದು ಇನ್ನೂ ಅಂತಿಮವಾಗಿಲ್ಲ. ಪೈಪೋಟಿಯಲ್ಲಿ ಬಿಜೆಪಿ ಮುಂಚೂಣಿಯಲ್ಲಿದ್ದರೆ, ಜೆಡಿಎಸ್ ಬಗ್ಗೆ ಸ್ಪಷ್ಟತೆಯಿಲ್ಲ.
ಏಷ್ಯಾದ ಅತಿದೊಡ್ಡ ವಿಧಾನಸಭಾ ಕ್ಷೇತ್ರ ಎನಿಸಿಕೊಂಡು ಈಗ ಅಸ್ತಿತ್ವ ಕಳೆದುಕೊಂಡಿರುವ ಉತ್ತರಹಳ್ಳಿ ಕ್ಷೇತ್ರದಿಂದ ಬೇರ್ಪಟ್ಟು 2008ರಲ್ಲಿ ಜನ್ಮತಾಳಿರುವ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ಇಲ್ಲಿ ತನಕ ಮೂರು ಚುನಾವಣೆಗಳನ್ನು ಕಂಡಿದ್ದು, ನಾಲ್ಕನೇ ಚುನಾವಣೆಗೆ ಅಣಿಯಾಗಿದೆ. ಬಿಟಿಎಂ ಲೇಔಟ್, ಜಕ್ಕಸಂದ್ರ, ಈಜಿಪುರ, ಕೋರಮಂಗಲ ಹಾಗೂ ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಲಕ್ಕಸಂದ್ರ, ಸುದ್ದಗುಂಟೆಪಾಳ್ಯ ಮತ್ತು ಮಡಿವಾಳ ಒಳಗೊಂಡ ಬಿಟಿಎಂ ಲೇಔಟ್ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆದರೆ, ಭೈರಸಂದ್ರವನ್ನು ಕ್ಷೇತ್ರದಿಂದ ಹೊರಗಿಡಲಾಗಿದೆ.
ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿಂದಲೂ ಕಳೆದ 3 ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್ ಗೆದ್ದಿದ್ದು, ಒಂದು ರೀತಿಯಲ್ಲಿ ಈ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಎನಿಸಿದೆ. ಆದರೆ, ಬಿಜೆಪಿ ಇಲ್ಲಿ ಸತತ ಪೈಪೋಟಿ ನೀಡುತ್ತಲೇ ಬಂದಿದೆ. ಈ ಬಾರಿಯೂ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್‌ನಿಂದ ರಾಮಲಿಂಗಾರೆಡ್ಡಿ ಅಖಾಡಕ್ಕಿಳಿಯಲಿದ್ದಾರೆ. ಅವರಿಗೆ ಬಿಜೆಪಿ ಎದುರಾಳಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ.
ಬಿಜೆಪಿಯಿಂದ ಯುವ ಮೋರ್ಚಾದ ಅನಿಲ್ ಶೆಟ್ಟಿ ಕ್ಷೇತ್ರದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇದರ ಜತೆಗೆ ಶ್ರೀಧರ್ ರೆಡ್ಡಿ, ಜಯದೇವ್ ಸಹ ಆಕಾಂಕ್ಷಿಗಳಾಗಿದ್ದಾರೆ. ಬೈರತಿ ಬಸವರಾಜಗೆ ಕೆ.ಆರ್.ಪುರ ಕ್ಷೇತ್ರ ತ್ಯಾಗ ಮಾಡಿರುವ ನಂದೀಶ್ ರೆಡ್ಡಿಯವರನ್ನು ಈ ಬಾರಿ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಕರೆತರುವ ಮಾತುಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಅಲ್ಲದೆ, ಜಯನಗರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿ ವಕ್ತಾರ ಹಾಗೂ ಹಿರಿಯ ವಕೀಲ ವಿವೇಕ್ ಸುಬ್ಟಾರೆಡ್ಡಿ ಸಹ ಬಿಟಿಎಂ ಕ್ಷೇತ್ರದ ಮೇಲೂ ಒಂದು ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ .
ರೆಡ್ಡಿ ಹಿಡಿತ; ಬಿಜೆಪಿ ಅಭ್ಯರ್ಥಿ ಬದಲು: ರಾಜಧಾನಿ ಬೆಂಗಳೂರಿನ ರಾಜಕಾರಣದ ಮೇಲೆ ಆರಂಭದಿಂದಲೂ ಹಿಡಿತ ಇಟ್ಟುಕೊಂಡಿರುವ ರಾಮಲಿಂಗಾರೆಡ್ಡಿ ಈ ಹಿಂದೆ ಜಯನಗರ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿದ್ದರು. ನಗರದ ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ರಾಮಲಿಂಗಾರೆಡ್ಡಿ ಕ್ಷೇತ್ರವನ್ನೂ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಕಳೆದ ಬಾರಿಯ ಉಪ ಚುನಾವಣೆಯಲ್ಲಿ ಜಯನಗರದಿಂದ ಮಗಳನ್ನು ಗೆಲ್ಲಿಸುವ ಮೂಲಕ ಮತ್ತೆ ಜಯನಗರ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ಎದುರು ಬಿಟಿಎಂ ಕ್ಷೇತ್ರದಲ್ಲಿ 3 ಬಾರಿಯೂ ಬಿಜೆಪಿ ಅಭ್ಯರ್ಥಿ ಬದಲಾಗಿದ್ದಾರೆ. ಆದರೆ, ಮೂರು ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿ ಪ್ರಬಲ ಪೈಪೋಟಿ ಕೊಟ್ಟಿದ್ದು, ಕಾಂಗ್ರೆಸ್‌ನ ಗೆಲುವಿನ ಅಂತರವನ್ನು ಇಳಿಸಿದ್ದಾರೆ. 2008ರಲ್ಲಿ ಬಿಜೆಪಿಯ ಜಿ.ಪ್ರಸಾದ್ ರೆಡ್ಡಿ ಕೇವಲ 2 ಸಾವಿರ ಮತಗಳ ಅಂತರದಿಂದ ಸೋತಿದ್ದರು. 2013ರಲ್ಲಿ ನೆಲೆ ಗಟ್ಟಿಪಡಿಸಿಕೊಂಡಿದ್ದ ರಾಮಲಿಂಗಾರೆಡ್ಡಿ 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, 2018ರಲ್ಲಿ ಗೆಲುವಿನ ಅಂತರ 20 ಸಾವಿರಕ್ಕೆ ಇಳಿಯಿತು. ಈ ಬಾರಿಯೂ ಪ್ರಬಲ ಪೈಪೋಟಿ ನೀಡಲು ಬಿಜೆಪಿ ವೇದಿಕೆ ಸಿದ್ಧಪಡಿಸುತ್ತಿದೆ.
2018ರಲ್ಲಿ ಏನಾಗಿತ್ತು?: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ 67 ಸಾವಿರ ಮತ ಪಡೆದಿದ್ದರೆ, ಬಿಜೆಪಿಯ ಲಲ್ಲೇಶ್ ರೆಡ್ಡಿ 46 ಸಾವಿರ ಮತಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಕೆ.ದೇವದಾಸ್ 17 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ರಾಮಲಿಂಗಾರೆಡ್ಡಿ ಬಿಜೆಪಿ ಅಭ್ಯರ್ಥಿ ವಿರುದ್ಧ 20 ಸಾವಿರ ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
ವಾರ್ಡ್‌ಗಳೆಷ್ಟು?: ಲಕ್ಕಸಂದ್ರ, ಸುದ್ದುಗುಂಟೆಪಾಳ್ಯ, ಮಡಿವಾಳ, ಬಿಟಿಎಂಲೇಔಟ್, ಆಡುಗೋಡಿ, ಈಜಿಪುರ, ಕೊರಮಂಗಲ, ಜಕ್ಕಸಂದ್ರ
– ರಫೀಕ್ ಅಹ್ಮದ್