Advertisement

ರಾಮಕುಂಜ: ರಂಜಿಸಿದ ಬಾಲ ಯಕ್ಷೋತ್ಸವ

12:34 PM Jan 15, 2018 | Team Udayavani |

ಕಡಬ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ರವಿವಾರ ನಡೆದ ಯಕ್ಷ ಸಂಕ್ರಾಂತಿ ಬಾಲ ಯಕ್ಷೋತ್ಸವ ಕಾರ್ಯಕ್ರಮ ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಸ್ಮರಣೀಯವಾಗಿಸಿತು.

Advertisement

ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗೋಕುಲ ನಗರದ ಯಕ್ಷನಂದನ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಶ್ರೀ ರಾಮಕುಂಜ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆ ಮೆರೆದರು. ರಾಮಾಯಣ, ಮಹಾ ಭಾರತದ ಆಯ್ದ ಭಾಗಗಳನ್ನು ಪ್ರದರ್ಶಿಸಲಾಯಿತು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಪಂಚವಟಿ, ಗೋಕುಲನಗರ ಯಕ್ಷನಂದನಾ ಕಲಾ ಸಂಘದ ತಂಡದಿಂದ ಕುರುಕ್ಷೇತ್ರ, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಸುದರ್ಶನ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವೀರಮಣಿ ಹಾಗೂ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಶಿಕ್ಷಕರಿಂದ ದಕ್ಷಯಜ್ಞ ಪ್ರಸಂಗಗಳು ಪ್ರದರ್ಶನಗೊಂಡಿದವು.

ಮುಖ್ಯ ಅತಿಥಿ ನ್ಯಾಯವಾದಿ ಕೆ.ಆರ್‌. ಆಚಾರ್ಯ ಮಾತನಾಡಿ ಸಮಾಜದಲ್ಲಿ ಕಲಾವಿದ ಎನಿಸಿಕೊಂಡವನು ಶ್ರೇಷ್ಠನೆನೆಸಿಕೊಳ್ಳುತ್ತಾನೆ. ಕಲಾವಿದನಿಗೆ ಬೇಕಾಗಿರುವುದು ಪ್ರೋತ್ಸಾಹ. ಅದನ್ನು ಸಮಾಜದಿಂದ ಆತ ಸದಾ ನಿರೀಕ್ಷಿಸುತ್ತಾನೆ. ಅಂತೆಯೇ ಯಕ್ಷಗಾನ ಕಲಾವಿದರಿಗೆ ಹಾಗೂ ಕಲಾವಿದರಾಗಲು ಹೊರಟವರಿಗೆ ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಉತ್ತಮ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು. 

ಕಡಬ ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಕೆ.ಎಸ್‌.ಬಾಲಕೃಷ್ಣ ಕೊಯಿಲ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಯೊಂದಿಗೆ ಯಕ್ಷಗಾನದಂತಹ ಶ್ರೇಷ್ಠ ಕಲೆಯ ಪರಿಚಯವಾದರೆ ಮುಂದೆ ಸಮಾಜದಲ್ಲಿ ಒಬ್ಬ ಸಂಸ್ಕಾರಯುತ ಪ್ರಜೆಯಾಗಿ ಮೂಡಿಬರಬಹುದು. ಭಾಷಾ ಶುದ್ಧತೆ, ಪುರಾಣಗಳ ಜ್ಞಾನ, ವಾಕ್ಚಾತುರ್ಯ ಲಭಿಸುವ ಇಂತಹ ಅವಕಾಶಗಳು ವಿದ್ಯಾ ರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದರು.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯಕ್ಷಗಾನ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟ, ತುಮಕೂರಿನ ಯಕ್ಷಗಾನ ಸಂಶೋಧಕ ಸಿಬಂತಿ ಪದ್ಮನಾಭ ಅತಿಥಿಗಳಾಗಿದ್ದರು. ಯಕ್ಷಗಾನ ಕಲಾವಿದ, ಕಾಲೇಜಿನ ಕನ್ನಡ ಉಪನ್ಯಾಸಕ ಗಣರಾಜ್‌ ಕುಂಬ್ಳೆ ಸ್ವಾಗತಿಸಿ, ಉಪನ್ಯಾಸಕ ಕೃಷ್ಣಮೂರ್ತಿ ಕೆಮ್ಮಾರ ವಂದಿಸಿದರು.

Advertisement

ಅಭಿಮಾನದ ದ್ಯೋತಕ
ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಕಲಾವಿದ ಅಂಬಾಪ್ರಸಾದ್‌ ಪಾತಾಳ ಉದ್ಘಾ ಟಿಸಿ, ಮಾತನಾಡಿ, ನಮ್ಮಲ್ಲಿ ಕಲಾವಿದರಿಗೆ ಉತ್ತಮ ವೇದಿಕೆಯ ಕೊರತೆಯಿದೆ. ಆಧುನಿಕ ಕಾಲಘಟ್ಟದಲ್ಲಿ ಯಕ್ಷಗಾನದ ಬಗ್ಗೆ ಕೊಂಚ ಅಭಿರುಚಿ ಕಡಿಮೆ ಎನಿಸಿದರೂ ಕರಾವಳಿ ಜಿಲ್ಲೆಯಲ್ಲಿ ಜನರ ಅಭಿಮಾನದ ದ್ಯೋತಕವಾಗಿ ಯಕ್ಷಗಾನ ಇನ್ನೂ ಜೀವಂತವಾಗಿದೆ. ಇಂತಹ ಮೇರು ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ಅರ್ಪಿಸಿ ಯಕ್ಷಗಾನದ ಉಳಿವಿಗೆ ಕೊಡುಗೆ ನೀಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next