Advertisement
ಹಳೆನೇರೆಂಕಿ ಗ್ರಾಮದ ಇಜ್ಜಾವು ಶಿವಪ್ರಸಾದ್ ಆಚಾರ್ಯರು ಮನೆಯ ಹಿಂದಿನ ಗುಡ್ಡದ ಮೇಲೆ ಸುಮಾರು 13 ಎಕರೆ ಜಾಗದಲ್ಲಿ ಗುಂಡಿ ಗಳನ್ನು ತೋಡಿ ಅಡಿಕೆ ಸಸಿ ನಾಟಿ ಮಾಡಿ ದ್ದಾರೆ. ಗುಡ್ಡ ವನ್ನು ಇಳಿಜಾರು ರೀತಿಯಲ್ಲಿ ತಟ್ಟು ಮಾಡಿದ್ದು, ನಡುನಡುವೆ ರಸ್ತೆ, ಎತ್ತರದಲ್ಲಿ ಭಾರೀ ಗಾತ್ರದ ಟ್ಯಾಂಕ್ ನಿರ್ಮಿಸಿ ಹನಿ ನೀರಾವರಿ ಅಳವಡಿಸಿದ್ದಾರೆ.
ಹಿಟಾಚಿ ಜೆಸಿಬಿ ಇದ್ದು, ಕೊರೊನಾ ಕಾಲದಲ್ಲಿ ಹಿಟಾಚಿಗೆ ಕೆಲಸ ಇರಲಿಲ್ಲ. ಆಗ ಸ್ವಂತ ಕೃಷಿಗೆ ಹಿಟಾಚಿ ಬಳಸಲು ನಿರ್ಧರಿಸಿ ಗುಡ್ಡವನ್ನು ತಟ್ಟು ಮಾಡುವ ಕೆಲಸ ಆರಂಭಿಸಿದ್ದರು. ಈ ಕಾರ್ಯಕ್ಕೆ ಸುಮಾರು ಆರು ತಿಂಗಳು ಹಿಡಿಯಿತು. ಸುಮಾರು 2.5 ಅಡಿ ಅಗಲ, 2 ಅಡಿ ಆಳದ ಗುಂಡಿಗಳನ್ನು ತೋಡಿ ಅಡಿಕೆ ಗಿಡ ನೆಡಲಾಗಿದ್ದು, 6 ಗಿಡಗಳ ನಡುವೆ ಮಾರ್ಗ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ಮದ್ದು ಸಿಂಪಡನೆ ಮಾಡಲು, ಅಡಿಕೆ ಫಸಲು ಕೊಯ್ಲು ಮತ್ತು ಸಾಗಾಟಕ್ಕೆ ಉಪಯೋಗಿಸುವ ದೂರದೃಷ್ಟಿಯಿಂದ ಈ ರಸ್ತೆ ನಿರ್ಮಿಸಲಾಗಿದೆ.
Related Articles
Advertisement
ಜಾಲತಾಣದಲ್ಲೂ ಸದ್ದುಶಿವಪ್ರಸಾದ್ ರೂಪಿಸಿರುವ ವಿಶೇಷ ತೋಟ ಸಾಮಾಜಿಕ ಜಾಲ ತಾಣದಲ್ಲಿಯೂ ಗಮನ ಸೆಳೆದಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ವ್ಯಾಟ್ಸ್‌ಆ್ಯಪ್‌ನಲ್ಲಿ ತೋಟದ ವಿಹಂಗಮ ನೋಟದ ವೀಡಿಯೋ ಜನಮೆಚ್ಚುಗೆ ಗಳಿಸಿದೆ. ಭವಿಷ್ಯದ ಮುಂದಾಲೋಚನೆ
ಒಂದು ಗಿಡಕ್ಕೆ ಎರಡು ಡ್ರಿಪ್ ಅಳವಡಿಸಲಾಗಿದ್ದು, ಒಂದು ತಾಸಿನಲ್ಲಿ 8 ಲೀಟರ್ ನೀರು ಗಿಡಕ್ಕೆ ಬೀಳುತ್ತದೆ. ಅಷ್ಟೂ ನಾಲ್ಕು ಸಾವಿರ ಗಿಡಗಳಿಗೆ ಕೇವಲ ಒಂದು ತಾಸಿನಲ್ಲಿ ನೀರು ಉಣಿಸಲಾಗುತ್ತದೆ. ವಿಶೇಷವೆಂದರೆ ಇದೇ ಹನಿ ನೀರು ವ್ಯವಸ್ಥೆಯಲ್ಲಿ 20 ಸಾವಿರ ಗಿಡಗಳಿಗೆ ಏಕಕಾಲದಲ್ಲಿ ನೀರುಣಿಸಬಹುದು. ಮಾತ್ರವಲ್ಲ, ಈ ಹನಿ ನೀರಾವರಿ ಯೋಜನೆಯಲ್ಲಿ ವೆಂಚರ್ ಅಳವಡಿಸಲಾಗಿದ್ದು, ಅದರ ಮೂಲಕ ಗಿಡಗಳಿಗೆ ರಸಗೊಬ್ಬರವನ್ನು ದ್ರವರೂಪದಲ್ಲಿ ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಈಗಿನ ನಿರ್ವಹಣೆ ದಿನದಲ್ಲಿ ಕೇವಲ ಒಂದು ತಾಸು ಅಷ್ಟೆ. ಈ ಅಡಿಕೆ ತೋಟದ ನಿರ್ಮಾಣಕ್ಕೆ ಸುಮಾರು 20 ಲಕ್ಷ ರೂ ಖರ್ಚು ಮಾಡಲಾಗಿದೆ. ಆದರೆ ಭವಿಷ್ಯದಲ್ಲಿ ಖರ್ಚುವೆಚ್ಚಗಳು ಕಡಿಮೆ ಎಂದು ಅಂದಾಜಿಸಲಾಗಿದೆ. ಈ ವ್ಯವಸ್ಥಿತ ತೋಟವನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಇವರಲ್ಲಿದೆ. ಕೊರೊನಾದಿಂದ ಲಾಕ್ ಡೌನ್ ಆದಾಗ ಗುಡ್ಡದಲ್ಲಿ ಅಡಿಕೆ ಕೃಷಿಗಿಳಿದೆ. ವಿಶೇಷ ಯೋಜನೆ, ದೂರದೃಷ್ಟಿಯಿಂದ ನಾಲ್ಕೇ ವರ್ಷಗಳಲ್ಲಿ ಉತ್ತಮ ಫಸಲು ಪಡೆಯುವ ಉದ್ದೇಶ ಹೊಂದಿದ್ದೇನೆ. ಈ ತೋಟದಲ್ಲಿ ಜಾರಿಗೊಳಿಸಿರುವ ಯೋಜನೆಗಳಿಂದ ಭವಿಷ್ಯದಲ್ಲಿ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ಕೃಷಿಯಲ್ಲಿ ಯುವಜನತೆ ಹೆಚ್ಚು ತೊಡಗಿಸಿಕೊಂಡಾಗ ಸ್ವಾವಲಂಬಿ ಬದುಕಿನೊಂದಿಗೆ ಸದೃಢ ಭಾರತ ನಿರ್ಮಾಣ ಸಾಧ್ಯ.
– ಶಿವಪ್ರಸಾದ್ ಆಚಾರ್ಯ ಇಜ್ಜಾವು