Advertisement

ಮಂಡೆಕಾಪು ವ್ಯಾಪಾರಿ ರಾಮಕೃಷ್ಣ ಕೊಲೆ ಪ್ರಕರಣ: ನಾಲ್ವರ ಬಂಧನ

04:29 PM May 12, 2017 | Team Udayavani |

ಕುಂಬಳೆ: ಕುಡಾಲು ಮೇರ್ಕಳ ಗ್ರಾಮದ ಮಂಡೆಕಾಪು ವಿನಲ್ಲಿ ಮೇ 4ರಂದು ಮಧ್ಯಾಹ್ನ ವ್ಯಾಪಾರಿ ಕಾವು ನಿವಾಸಿ ರಾಮಕೃಷ್ಣ (47) ಅವರನ್ನು ಬರ್ಬರವಾಗಿ ಕೊಲೆಗೈದ ಕೃತ್ಯದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಚೆಂಗಳ ಎಡನೀರು ಚೂರಿಮೂಲೆ ಮನೆಯ ಉಮ್ಮರ್‌ ಫಾರುಖ್‌ ಬಿ.ಎಂ. (37), ಪೊವ್ವಲ್‌ ಬಾಡಿಗೆ ಮನೆಯಲ್ಲಿ ವಾಸಿಸುವ ನೌಶಾದ್‌ ಶೇಕ್‌(33), ಬೋವಿಕ್ಕಾನದ ಎಂಟನೇ ಮೈಲಿನ ಅಬ್ದುಲ ಆರಿಫ್‌ ಯಾನೆ ಅಪ್ಪು (33), ಚೆಂಗಳ ರೆಹಮತ್‌ ನಗರದ ಆಶ್ರಫ್‌ ಕೆ. (23) ಆರೋಪಿಗಳಾಗಿದ್ದು ಇವರನ್ನು ಕುಂಬಳೆ ಸಿಐ ನೇತೃತ್ವದ ಪೊಲೀಸ್‌ ತಂಡವು ಚೆರ್ಕಳದಲ್ಲಿ ಬಂಧಿಸಿದೆ.

ಘಟನೆಯ ವಿವರ: ಕಳೆದ 2 ತಿಂಗಳ ಹಿಂದೆ ಬಂದ್ಯೋಡು ಪೆರ್ಮುದೆ ರಸ್ತೆಯ ಮಂಡೆಕಾಪು ವಿನಲ್ಲಿನ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿ ಕಳವುಗೈಯಲು ಮಧ್ಯರಾತ್ರಿ ಆಗಮಿಸಿದ ಕಳ್ಳರ ತಂಡದಲ್ಲಿದ್ದ ಇಬ್ಬರನ್ನು ಸ್ಥಳೀಯ ಯುವಕರು ಕಯ್ನಾರೆ ಹಿಡಿದು ತಕ್ಕಶಾಸ್ತಿ ಮಾಡಿದ್ದರು. ಇವರಲ್ಲಿ ತೀವ್ರ ಹಲ್ಲೆಗೊಳಗಾಗಿ ಬಿದ್ದಿದ್ದ ಗಾಯಾಳುಗಳಿಗೆ ಮುಂಜಾನೆ ತನ್ನ ಅಂಗಡಿಗೆ ಆಗಮಿಸಿದ ರಾಮಕೃಷ್ಣ ರವರು ಬ್ಲಾಟಿಯಲ್ಲಿ ನೀರು ತಂದು ಕುಡಿಸಿ ಆರೈಕೆ ಮಾಡಿದ್ದರು. ಆದರೆ ಆರೋಪಿಗಳು ಇದನ್ನು ತಪ್ಪು ತಿಳಿದು ರಾಮಕೃಷ್ಣ ಅವರು ತಮಗೆ ಹಲ್ಲೆಗೈದ ತಂಡದಲ್ಲಿದ್ದ ಓರ್ವರೆಂದು ತಪ್ಪು ತಿಳಿದಿದ್ದರು. ಅಲ್ಲದೆ ಇವರನ್ನು ಮುಗಿಸುವ ಸಂಚು ಹೂಡಿದ್ದರು. 

ಕಳೆದ ಮಾ. 8ರಂದು ಮುಗು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕಾಣಿಕೆ ಡಬ್ಬಿಯ 4,453 ರೂ. ಕಳವು ಪ್ರಕರಣದಲ್ಲಿ ಜೈಲಿನಲ್ಲಿ ಬಂಧನದಲ್ಲಿದ್ದ ಪ್ರಥಮ ಆರೋಪಿ ಮತ್ತು ಸೆರೆಮನೆಯೊಳಗಿದ್ದ ಇತರ ಮೂವರು ಆರೋಪಿಗಳೊಂದಿಗೆ ಸ್ಕೆಚ್‌ ತಯಾರಿಸಿ ರಾಮಕೃಷ್ಣ ಅವರನ್ನು ಮುಗಿಸುವ ತಂತ್ರ ಹೂಡಿದ್ದರು. ಇದರಂತೆ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ನಾಲ್ವರು ಒಟ್ಟು ಸೇರಿ ಮಿತ್ರ ಶರೀಫ್‌ ಅವರ ಆಲ್ಟೋ ಕಾರಿನಲ್ಲಿ ಆಗಮಿಸಿ ರಾಮಕೃಷ್ಣ ಅವರ ತಲೆಗೆ ಕುತ್ತಿಗೆಗೆ, ಎದೆಗೆ ಕತ್ತಿಯಿಂದ ತಿವಿದು ಕೊಲೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ತತ್‌ಕ್ಷಣ ಮಂಗಳೂರು ಆಸ್ಪತ್ರೆಗೆ ಒಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಸಾವಿಗೀಡಾಗಿದ್ದರು.

ಕೊಲೆ ನಡೆಸಿದ ಬಳಿಕ ಆರೋಪಿ ಗಳು ಬಳಸಿದ ಕಾರನ್ನು ಮಂಗಳೂರು ದೇರಳಕಟ್ಟೆಯಲ್ಲಿ ಉಪೇಕ್ಷಿಸಿ ಬಳಿಕ ಕೆಎಲ್‌ 14 ಟಿ 9665 ಕಾರಿನಲ್ಲಿ ತೆರಳಿ ಚಿಕ್ಕಮಗಳೂರು, ಹುಬ್ಬಳ್ಳಿ, ಹೈದರಾ ಬಾದ್‌ಗಳಲ್ಲಿ ಅವಿತಿದ್ದರು. ಪ್ರಧಾನ ಆರೋಪಿ ಉಮ್ಮರ್‌ ಫಾರೂಖ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು ಕೇವಲ ಮೂರನೇ ತರಗತಿ ತನಕ ಮಾತ್ರ ವಿದ್ಯಾಭ್ಯಾಸ ಹೊಂದಿದ್ದಾನೆ. ಕೊಲೆಯಲ್ಲಿ ಭಾಗಿಗಳಾದ ಇತರರಿಗೆ ಸೈಟ್‌ ಆಮಿಷವೊಡ್ಡಿ ಕೃತ್ಯಕ್ಕೆ ಕರೆದಿದ್ದ.

Advertisement

ಆರೋಪಿಗಳ ಬಂಧನದ ಮಾಹಿತಿಯನ್ನು ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ಸೈಮನ್‌ ಅವರು ನಡೆದ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿ ದರು. ಬಂಧಿತ ಆರೋಪಿಗಳು ಕಳವು ಮತ್ತು ವೈದ್ಯರೋರ್ವ ರಿಗೆ ಹಲ್ಲೆ ನಡೆಸಿದ ಸಹಿತ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಕಾಸರ ಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ತನಿಖೆಗಾಗಿ ತಮ್ಮ ವಶ ನೀಡುವಂತೆ ಅರ್ಜಿ ಸಲ್ಲಿಸ ಲಾಗುವುದು. 

ಕೊಲೆ ಕೃತ್ಯಕ್ಕೆ ಬಳಸಿದ ಕತ್ತಿ ಮತ್ತು ಕಾರನ್ನು ಕೂಡಲೇ ವಶಪಡಿಸಿಕೊಳ್ಳುವುದಾಗಿ ತಿಳಿಸಿ ದ್ದಾರೆ. ಅಲ್ಲದೆ ಇವರಿಗೆ ಆಶ್ರಯ ನೀಡಿದವರನ್ನು ಮತ್ತು ಪ್ರಕರಣ ದಲ್ಲಿ ಇನ್ನೂ ಹೆಚ್ಚಿನವರು ಭಾಗಿ ಯಾಗಿರುವರೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಡಿವೈಎಸ್‌ಪಿ ಎಂ.ವಿ. ಸುಕುಮಾರನ್‌, ಕುಂಬಳೆ ಸಿಐ ಎ.ವಿ. ಮನೋಜ್‌ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಎರಡು ಬಾರಿ ವಿಫ‌ಲರಾಗಿದ್ದರು
ಆರೋಪಿಗಳು ಈ ಹಿಂದೆ ಎರಡು ಬಾರಿ ಕೊಲೆ ನಡೆಸಲು ಸಂಚು ಹೂಡಿದ್ದು ಇದರಲ್ಲಿ ವಿಫಲರಾಗಿ ಮೂರನೇ ಬಾರಿಗೆ ಮೇ 4ರಂದು ಮಧ್ಯಾಹ್ನ ರಾಮಕೃಷ್ಣ ಅವರ ಅಂಗಡಿಗೆ ಆಗಮಿಸಿ ಸಿಗರೇಟ್‌ಖರೀದಿಸಿದ್ದರು. ಈ ವೇಳೆ ಸಿಗರೇಟ್‌ ನೀಡಿಲ್ಲವೆಂಬುದಾಗಿ ಜಗಳ ಕಾಯ್ದು ಅಂಗಡಿಯಲ್ಲಿ ಬೇರೆ ಗಿರಾಕಿಗಳಿದ್ದ ಕಾರಣ ಮರಳಿದ್ದರು. ಬಳಿಕ ಆರ್ಧ ತಾಸು ಕಳೆದು ಮರಳಿ ಬಂದು ಮಾವಿನ ಹಣ್ಣು ಖರೀದಿಸುವ ನೆಪದಲ್ಲಿ ರಾಮಕೃಷ್ಣ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಅಲ್ಲದೆ ಇವರು ಆಗಮಿಸಿದ ಕಾರಿನ ನಂಬ್ರ ದಾಖಲಿಸಲು ಮುಂದಾದ ಸ್ಥಳೀಯರನ್ನು ಬೆದರಿಸಿ ಭೀಕರ ವಾತಾವರಣ ಸೃಷ್ಟಿಸಿದ್ದರು. ಘಟನೆ ನಡೆದು ಒಂದು ವಾರ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಲು ಅಸಾಧ್ಯವಾದ ಪೊಲೀಸರ ಮೇಲೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದರು. ಕ್ರಿಯಾ ಸಮಿತಿಯನ್ನು ರಚಿಸಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಆದರೆ ಇದೀಗ ಆರೋಪಿಗಳ ಬಂಧನದಿಂದ ನಿಟ್ಟಿಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next