Advertisement
ತೋಡುಗಳ ಸ್ವಚ್ಛತೆ
ಕುಂಟಿಕಾನ ಆಟೋ ನಿಲ್ದಾಣದ ಹತ್ತಿರ, ಲೋಹಿತ ನಗರಕ್ಕೆ ಸಾಗುವ ದಾರಿ ಹಾಗೂ ದೇರೆಬೈಲ್ ಹೋಗುವ ಮಾರ್ಗಗಳನ್ನು ಕಾರ್ಯಕರ್ತರು ಪ್ರೊ| ಶೇಷಪ್ಪ ಅಮೀನ ಜತೆಗೂಡಿ ಸ್ವಚ್ಛಗೊಳಿಸಿದರು. ಕಮಲಾಕ್ಷ ಪೈ, ಅನಿರುದ್ಧ ನಾಯಕ್ ತೋಡುಗಳಲ್ಲಿ ಸ್ವಚ್ಛ ಮಾಡಲು ಪ್ರಯತ್ನಿಸಿದರು. ಅದರಲ್ಲಿದ್ದ ತ್ಯಾಜ್ಯ ಕಸವನ್ನು ಸಾಧ್ಯವಾದಷ್ಟು ತೆಗೆದು ಹಾಕಿದರು. ಫ್ಲೈಓವರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದಿದ್ದ ಹುಲ್ಲನ್ನು ಕಳೆಕೊಚ್ಚುವ ಯಂತ್ರದ ಸಹಾಯದಿಂದ ತೆಗೆದು ಜಾಗವನ್ನು ಸ್ವತ್ಛಗೊಳಿಸಲಾಯಿತು. ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್ ಬ್ಯಾನರ್ ಹಾವಳಿವನ್ನು ತಡೆಯುವ ಸಲುವಾಗಿ ಬ್ಯಾನರ್ ಹಾಕಿದವರನ್ನು ಮತ್ತು ಹಾಕಿಸಿದವರನ್ನು ಸಂಪರ್ಕಿಸಿ ಅಳವಡಿಸದಂತೆ ವಿನಂತಿಸಲಾಯಿತು. ಜತೆಗೆ ಸುಮಾರು ಐನೂರಕ್ಕೂ ಅಧಿಕ ಬ್ಯಾನರ್‌ಗಳನ್ನು ತೆಗೆಯಲಾಯಿತು. ಪಿ.ಎನ್. ಭಟ್, ರಘುನಾಥ್ ಆಚಾರ್ಯ, ಸ್ಮಿತಾ ಶೆಣೈ, ಶ್ರುತಿ ತುಂಬ್ರಿ, ಚಿಂತನ್ ಡಿ.ವಿ., ವಿಧಾತ್ರಿ ಕೆ., ನಿಶಾ ನಾಯಕ್ ಮೊದಲಾದವರು ಶ್ರಮದಾನಗೈದರು.
ಸ್ವಚ್ಛತ ಶ್ರಮದಾನ
ಕುಂಟಿಕಾನ ರಾ. ಹೆ. ಮೇಲ್ಸೇತುವೆಯ ತಳಭಾಗದಲ್ಲಿ ಶ್ರಮದಾನವನ್ನು ಕೈಗೊಳ್ಳಲಾಯಿತು. ಸ್ವಾಮೀಜಿಗಳು ಹಾಗೂ ಗಣ್ಯರು ಶ್ರಮದಾನದಲ್ಲಿ ಪಾಲ್ಗೊಂಡು ಪೊರಕೆ ಹಿಡಿದು ಫ್ಲೈಓವರ್ ಕೆಳಭಾಗದಲ್ಲಿ ಸ್ವತ್ಛತೆ ನಡೆಸಿದರು. ಜತೆಗೆ ಕಾರ್ಯಕರ್ತರು ಮೂರು ಗುಂಪುಗಳಾಗಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಒಂದು ಗುಂಪು ರಸ್ತೆಯ ಪಕ್ಕದಲ್ಲಿ ಹಾಗೂ ಪಾರ್ಕಿಂಗ್ ಜಾಗಗಳನ್ನು ಗುಡಿಸಿ ಸ್ವತ್ಛಗೊಳಿಸಿತು. ಮತ್ತೂಂದು ಗುಂಪು ಫ್ಲೈಓವರ್ ಕಂಬಗಳಿಗೆ ಅಂಟಿಸಿದ್ದ ಪೋಸ್ಟರ್‌ಗಳನ್ನು ಕಿತ್ತು ನೀರು ಹಾಕಿ ಶುಚಿಗೊಳಿಸಿದರು. ಬಸ್ ತಂಗುದಾಣದ ಬಳಿ ಸುರಿದಿದ್ದ ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿತ್ತು. ಇದನ್ನು ಸುಧೀರ್ ವಾಮಂಜೂರು, ಚೇತನಾ ನೇತೃತ್ವದ ಗುಂಪು ತೆಗೆದು ಸ್ವಚ್ಛಗೊಳಿಸಿತು. ಸೌರಜ್ ಮಂಗಳೂರು ಹಾಗೂ ಉದಯ ಕೆ.ಪಿ. ಜತೆಗೂಡಿದ ಪ್ರಮುಖ ಕಾರ್ಯಕರ್ತರು ಅಲ್ಲಲ್ಲಿ ಬಿದ್ದಿದ್ದ ಅಪಾಯಕಾರಿ ತ್ಯಾಜ್ಯವನ್ನು ತೆಗೆದು ಹಾಕಿದರು.