Advertisement

ರಾಮಕೃಷ್ಣ ಮಿಷನ್‌ ಆವರಣದಲ್ಲಿ ‘ಸಾಮರಸ್ಯದ ಹೊಳಪಿಗೆ- ದೀಪಾವಳಿ ಬೆಳಕು’

12:08 PM Oct 20, 2017 | |

ಮಂಗಳಾದೇವಿ: ಅತ್ಯಂತ ಪುರಾತನ ಹಾಗೂ ಬಹಳಷ್ಟು ಅರ್ಥಭರಿತವಾದ ಆಚರಣೆಗಳುಳ್ಳ ಸಂಪದ್ರಾಯ ಮತ್ತು ಪರಂಪರೆಯನ್ನು ಹೊಂದಿರುವ ಭಾರತೀಯ ಸಂಸ್ಕೃತಿಯು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಹಾಗೂ ಶ್ರೀಮಂತಿಕೆಯಿಂದ ಕೂಡಿದೆ. ಅಂತಹ ಸಂಸ್ಕೃತಿಯ ನಾಡಿನಲ್ಲಿ ಜನ್ಮವೆತ್ತಿರುವ ನಾವೆಲ್ಲರೂ ಪುಣ್ಯವಂತರು ಹಾಗೂ ಈ ಮಾತೃಭೂಮಿಯು ನಮ್ಮ ಪಾಲಿಗೆ ಎಂದೆಂದಿಗೂ ಪರಮ ಪವಿತ್ರವಾಗಿದೆ ಎಂದು ಮಂಗಳೂರಿನ ಬೆಥನಿ ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳ ವಿಭಾಗದ ಮುಖ್ಯಸ್ಥ ಸಿ| ಮಿಶೆಲ್‌ ಹೇಳಿದರು.

Advertisement

ಅವರು ಮಂಗಳೂರಿನ ರಾಮಕೃಷ್ಣ ಮಿಷನ್‌ ಆವರಣದಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ನಡೆದ ‘ಸಾಮರಸ್ಯದ ಹೊಳಪಿಗೆ – ದೀಪಾವಳಿಯ ಬೆಳಕು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡಿದರು.

ಭಾರತವು ಕೇವಲ ಯಾವುದೇ ಒಂದು ಮತ-ಪಂಥಕ್ಕೆ ಸೀಮಿತವಾಗಿರದೆ ವಿವಿಧ ಸಂಪ್ರದಾಯಗಳ ಆಚರಣೆಗಳುಳ್ಳ ಸಮುದಾಯಗಳ ಸಾಂಸ್ಕೃತಿಕ ಸಂಗಮವಾಗಿದೆ. ಇಲ್ಲಿ ಪ್ರತಿಯೊಂದನ್ನು ಆಚರಿಸುವಾಗ ಆಚಾರ ವಿಚಾರಗಳು ಭಿನ್ನವಾಗಿದ್ದರೂ, ಸಂಸ್ಕೃತಿಯಲ್ಲಿ ಏಕತೆ ಕಂಡು ಬರುತ್ತದೆ. ತನ್ಮೂಲಕ ಅನೇಕತೆಯಲ್ಲಿ ವಿವಿಧತೆ ಹಾಗೂ ಆ ವಿವಿಧತೆಯಲ್ಲಿ ಏಕತೆ ಎಂಬ ಮಂತ್ರ ಕಾರ್ಯರೂಪದಲ್ಲಿ ವ್ಯಕ್ತವಾಗುತ್ತಿದೆ. ಅದಕ್ಕಾಗಿಯೇ ಜಗತ್ತಿನಲ್ಲಿ ಇಂದು ಎಲ್ಲ ಮುಂದುವರಿದ ದೇಶಗಳು ಆಚಾರ- ವಿಚಾರ-ಸಂಪ್ರದಾಯಗಳ ವಿಚಾರ ಬಂದಾಗ ಭಾರತೀಯ ಪರಂಪರೆಯತ್ತ ನೋಡುವ ಪರಿಸ್ಥಿತಿ ಇದೆ ಎಂದರು.

ಸಮಾಜದಲ್ಲಿ ಮೂರು ವರ್ಗದ ಜನರು
ಸಮಾಜದಲ್ಲಿ ಮೂರು ವರ್ಗದ ಜನರಿದ್ದಾರೆ. ಅವರಲ್ಲಿ ಒಂದು ವರ್ಗ ನಿರ್ಲಕ್ಷ್ಯ ಮನೋಭಾವನೆಯವರು; ಎರಡನೆಯ ವರ್ಗ ಬೇಜವಾಬ್ದಾರಿ ಮನೋಭಾವದವರು ಹಾಗೂ ಮೂರನೆಯವರು ಕಷ್ಟ ಕಾರ್ಪಣ್ಯಗಳಿಗೆ ತತ್‌ ಕ್ಷಣ ಸ್ಪಂದಿಸುವವರು. ಭಾರತೀಯರ ಮನೋಭಾವ ಆ ಮೂರನೆಯ ವರ್ಗಕ್ಕೆ ಸೇರಿರುವಂತಹದ್ದು. ಅಂತಹ ಮನಸ್ಥಿತಿಯ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಈ ಕಾರ್ಯಕ್ರಮವು ಶ್ಲಾಘನೀಯ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಂತ ಸೂಕ್ತವಾದುದು ಎಂದು ಹೇಳಿದರು.

ರಾಮಕೃಷ್ಣ ಮಿಷನ್‌ ಮಂಗಳೂರಿನಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಸ್ವಚ್ಚತಾ ಅಭಿಯಾನವು ಎಲ್ಲರ ಕಣ್ತೆರೆಸಿದೆ ಎಂದರು.

Advertisement

ಅತಿಥಿಗಳಾಗಿದ್ದ ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಮತ್ತು ನಿಟ್ಟೆ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲೆ ಡಾ| ಫಾತಿಮಾ ಡಿ’ಸಿಲ್ವಾ ಮಾತನಾಡಿದರು. ಬೆಸೆಂಟ್‌ ಮಹಿಳಾ ಕಾಲೇಜಿನ ನಿವೃತ್ತ ಉಪನ್ಯಾಸಕಿ ನ್ಯಾನ್ಸಿ ಡಿ’ಸೋಜಾ ಅವರು ಸ್ವಾಮೀಜಿಗೆ ಸಿಹಿತಿಂಡಿಯನ್ನು ಹಸ್ತಾಂತರಿಸಿದರು. ನೆನಪಿನ ಕಾಣಿಕೆಯಾಗಿ ಸ್ವಾಮೀಜಿ ಅವರು ಬೆಥನಿ ಸಂಸ್ಥೆಯ ಮಹಾಮಾತೆ ಸಿ| ಲೀನಾ ಅವರಿಗೆ ಶ್ರೀಗಂಧದ ಸಸಿಯನ್ನು ನೀಡಿದರು. ದೀಪಪ್ರಜ್ವಲನ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಫ್ರಾಂಕ್ಲಿನ್‌ ಮೊಂತೇರೊ ಸ್ವಾಗತಿಸಿ ವಂದಿಸಿದರು. ಮಾಧ್ಯಮ ಪ್ರಮುಖ್‌ ರೋಶನ್‌ ಡಿ’ಸೋಜಾ, ವಿನ್ಸೆಂಟ್‌ ಡಿ’ಕುನ್ಹಾ, ಜೂಲಿಯಟ್‌ ಡಿ’ಕುನ್ಹಾ, ನಿರ್ಮಲಾ, ಬೆಥನಿ ಸಂಸ್ಥೆಯ ಭಗಿನಿಯರು ಮತ್ತು ಇತರರು ಭಾಗವಹಿಸಿದ್ದರು.

ಹಿಂದೂ ಧರ್ಮವಲ್ಲ, ಸಂಸ್ಕೃತಿ
ರಾಮಕೃಷ್ಣ ಆಶ್ರಮದ ಶ್ರೀ ಏಕ ಗಮ್ಯಾನಂದ ಸ್ವಾಮೀಜಿ ಅವರು ಮಾತನಾಡಿ, ಉತ್ತರದ ಸಿಂಧೂ ನದಿ ತೀರದಿಂದ ದಕ್ಷಿಣದ ಕನ್ಯಾ ಕುಮಾರಿ ವರೆಗೆ ನೆಲೆಸಿರುವ ಎಲ್ಲರೂ ಹಿಂದೂಗಳೇ ಆಗಿದ್ದಾರೆ. ಏಕೆಂದರೆ ಹಿಂದೂ ಎನ್ನುವುದು ಒಂದು ಧರ್ಮವೂ ಅಲ್ಲ, ಒಂದು ಜಾತಿಯೂ ಅಲ್ಲ ಅಥವಾ ಒಂದು ಪಂಥವೂ ಅಲ್ಲ. ಅದೊಂದು ಸಂಸ್ಕೃತಿ. ಬಳೆ ತೊಡುವುದು, ಕರಿಮಣಿ ಧರಿಸುವುದು, ಹೂವು ಮುಡಿಯುವುದು, ಹಣೆಗೆ ತಿಲಕ ಹಚ್ಚುವುದು, ಸೀರೆ ಉಡುವುದು ಇವೆಲ್ಲ ಹಿಂದೂ ಸಂಸ್ಕೃತಿಯ ಪ್ರತೀಕಗಳಾಗಿವೆ. ಆದ್ದರಿಂದ ಇದನ್ನು ಅರ್ಥಮಾಡಿಕೊಂಡರೆ ಹಿಂದೂ ಎಂಬ ಪದದ ಬಗ್ಗೆ ಇರುವ ಸಂಶಯ ಅಥವಾ ಸಂದೇಹ ಪರಿಹಾರವಾಗುತ್ತದೆ. ಜತೆಗೆ ಅದಕ್ಕಿರುವ ಅರ್ಥ ವಿಸ್ತಾರವೂ ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಏರ್ಪಡಿಸಲಾಗಿರುವ ದೀಪಾವಳಿ ಆಚರಣೆ ಕಾರ್ಯಕ್ರಮ ಮುನ್ನುಡಿಯಾಗಲಿ ಎಂದು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next