Advertisement

ಅಂಚೆ ಚೀಟಿಯಲ್ಲಿ ರಾಮಕಥಾ!

07:30 AM Mar 25, 2018 | |

ರಾಮಾಯಣ-ಜಾಗತಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿರುವ ಎರಡು ಭಾರತೀಯ ಮಹಾಕಾವ್ಯಗಳಲ್ಲಿ ಮೊದಲನೆಯದು. ರಾಮನ ಬದುಕಿನ ಕಥೆ- ರಾಮಾಯಣವನ್ನು ವಾಲ್ಮೀಕಿ ರಚಿಸಿದ್ದು ಕ್ರಿ. ಪೂ. 500ರ ಆಸುಪಾಸಿನಲ್ಲಿ. ಅಲ್ಲಿಂದಾಚೆಗೆ ರಾಮಾಯಣ ನಿರಂತರವಾಗಿ ಬೇರೆ ಬೇರೆ ರೂಪುಗಳಲ್ಲಿ ಭಾರತೀಯರ‌ ಬದುಕಿನಲ್ಲಿ ಬರುತ್ತಲೇ ಇದೆ. ರಾಮನ ವೃತ್ತಾಂತ ಭಾರತದುದ್ದಕ್ಕೂ ಹರಡಿರುವ ವಿವಿಧ ಸಂಸ್ಕೃತಿಗಳಲ್ಲಿ ಹಾಸುಹೊಕ್ಕು ಕಥೆ-ಕಾವ್ಯ-ಕಾದಂಬರಿ-ನೃತ್ಯ-ನಾಟಕ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು ಆಧುನಿಕ ಪ್ರದರ್ಶನ ಕಲೆಗಳಲ್ಲಿ, ವಿದ್ಯುನ್ಮಾನ ಜಗತ್ತಿನಲ್ಲಿ ನೆಲೆ ನಿಂತಿದೆ.

Advertisement

ಭಾರತೀಯ ಮನೆಮನೆಗಳಲ್ಲಿ ಮನೆಮಾಡಿರುವ “ರಾಮ’ ಹೊರದೇಶಗಳಲ್ಲೂ ಜನಪ್ರಿಯ. ಮೌಖೀಕವಾಗಿ, ಹಾಡು, ಕಥೆ, ಪದ್ಯ, ನಾಟಕ ಮೂಲಕವಾಗಿ ಶಾಶ್ವತವಾದ ಸ್ಥಾನ ಗಳಿಸಿರುವ “ರಾಮಾಯಣ’ ಜನಪದರ ಬದುಕಿನಲ್ಲಿಯೂ ಗಟ್ಟಿಯಾಗಿ ತಳವೂರಿದೆ. ಬಹು ಹಿಂದೆಯೆ ವಲಸೆ ಹೋಗಿರುವ ಭಾರತೀಯರು ಸುರಿವಾಂ, ಫಿಜಿ, ಗಯಾನ, ಮಾರಿಷಸ್‌ನಲ್ಲೂ ರಾಮಾಯಣವನ್ನು ಜೀವಂತವಾಗಿಟ್ಟಿದ್ದಾರೆ. ಭಾರತೀಯ ಉಪಖಂಡದಲ್ಲೇ ಇದ್ದು ಈಗ ಏಷ್ಯನ್‌ ದೇಶಗಳೆನ್ನಿಸಿಕೊಂಡ ಕಾಂಬೋಡಿಯಾ, ಥೈಲ್ಯಾಂಡ್‌, ಲಾವೋಸ್‌, ವಿಯಟ್ನಾಂ, ಮಲೇಶ್ಯಾ, ಬರ್ಮಾ (ಮಾನ್ಮಾರ್‌) ಫಿಲಿಪ್ಪೀನ್ಸ್‌, ಇಂಡೋನೇಷ್ಯಾ, ಮಾಂಗೋಲಿಯಾ ಮತ್ತಿತರ ಕಡೆಗಳಲ್ಲಿ ರಾಮಾಯಣ ಪ್ರಸಂಗಗಳು ಜನಮಾನಸದಲ್ಲಿವೆ.

ನಮ್ಮ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಸಾಮಾನ್ಯವಾಗಿರುವ ರಾಮಾಯಣ ಅಲ್ಲಿಯ ಪಾತ್ರಗಳನ್ನು ನೆನಪಿಸಿಕೊಳ್ಳದ ಸಂದರ್ಭಗಳೇ ಕಡಿಮೆ. ಆಡುಮಾತಿನಲ್ಲಿ , ಗಾದೆಗಳಲ್ಲಿ ರಾಮಾಯಣದ ಪಾತ್ರಧಾರಿಗಳು ಇಣುಕುತ್ತಲೇ ಇರುತ್ತಾರೆ. ಗಾಯನ-ನರ್ತನ-ನಾಟಕಗಳಲ್ಲಿ ಮೂಡಿಬಂದ ರಾಮಾಯಣ ಹಾಗೂ ಅದರ ಪ್ರಸಂಗಗಳು ವೃತ್ತಿನಾಟಕ ಕಂಪೆನಿಗಳಲ್ಲೂ ಅಭಿನಯಿಸಲ್ಪಟ್ಟವು. ತೊಗಲು ಗೊಂಬೆ ಆಟಗಳಲ್ಲೂ ಕಂಡವು. ನಂತರ ರಾಮಾಯಣದ ವಿವಿಧ ಮುಖಗಳು ಅನಾವರಣಗೊಂಡಿದ್ದು ಚಲನಚಿತ್ರಗಳಲ್ಲಿ.

ಚಿತ್ರಮಂದಿರಗಳಲ್ಲಿದ್ದ ಮನರಂಜನಾ ತಾಣ ಟೆಲಿವಿಷನ್‌ ಮೂಲಕ ಮನೆ ಅಂಗಳಗಳಿಗೆ ಬಂದಾಗ “ರಾಮಾಯಣ’ ಧಾರಾವಾಹಿಗಳೂ ಅದರಲ್ಲಿದ್ದು ಜನಪ್ರಿಯತೆಯ ತುತ್ತತುದಿಗೆ ಏರಿದವು. ರಾಮಾಯಣದ ಬೇರೆ ಬೇರೆ ರೂಪಕಗಳು ಸಿನಿಮಾ-ಟೆಲಿವಿಷನ್‌ಗಳಲ್ಲಿ ಪುನರಾವರ್ತನೆಯಾಗುವುದು ಈಗಲೂ ನಿಂತಿಲ್ಲ.

ಅಂಚೆಚೀಟಿಯಲ್ಲಿ ಮಹಾಕಾವ್ಯ
ಪ್ರಪಂಚದಲ್ಲಿ ಸಂಪರ್ಕ ಕ್ರಾಂತಿ ಮೊದಲಾದಾಗ ಹುಟ್ಟಿಕೊಂಡ ಅಂಚೆ ವ್ಯವಸ್ಥೆಯಲ್ಲೂ “ರಾಮಾಯಣ’ ವಾಹಕವಾಗಿದ್ದು ಇನ್ನೊಂದು ವಿಶೇಷ. ಈ ಪ್ರಾಚೀನ ಮಹಾಕಾವ್ಯದ ಪ್ರಸಂಗ ಹಾಗೂ ವ್ಯಕ್ತಿಗಳನ್ನು ಹೊತ್ತು ಹತ್ತಾರು ಅಂಚೆಚೀಟಿಗಳು ಹಲವು ದೇಶಗಳಲ್ಲಿ ಪ್ರಕಟವಾಗಿವೆ. ಹಿಂದೂ ಪುರಾಣದ ಅನೇಕ ವ್ಯಕ್ತಿಗಳನ್ನು ಅಂಚೆಚೀಟಿಗಳಲ್ಲಿ ಆಗಾಗ ಅಳವಡಿಸಿಕೊಳ್ಳುತ್ತಲೇ ಇರುವ ನೆರೆಯ “ಥೈಲ್ಯಾಂಡ್‌’ ಶ್ರೀರಾಮನ ಚಿತ್ರವುಳ್ಳ ಸ್ಟಾಂಪ್‌ ಬಿಡುಗಡೆ ಮಾಡಿದ ಮೊದಲ ದೇಶ. ಗಣಪತಿ, ಬ್ರಹ್ಮ, ವಿಷ್ಣು ಹೀಗೆ ಭಾರತೀಯ ದೇವಾನುದೇವತೆಗಳನ್ನು ಆಗ್ಗಿಂದಾಗ್ಗೆ ಅಂಚೆಚೀಟಿಗಳಲ್ಲಿ ಮುದ್ರಿಸುವ ಥೈಲ್ಯಾಂಡ್‌ನ‌ ಜೊತೆಗೆ ಕಾಂಬೋಡಿಯಾ, ಇಂಡೋನೇಷ್ಯಾ. ಕಾಂಬೋಡಿಯಾ ಇನ್ನಿತರ ಏಷ್ಯಾದೇಶಗಳು ಶ್ರೀರಾಮನ ಚಿತ್ರಗಳನ್ನು ಅಂಚೆಚೀಟಿಗಳಲ್ಲಿ ಬಳಸಿವೆ.

Advertisement

ಭಾರತೀಯ ಅಂಚೆ ಇಲಾಖೆ ಪ್ರಪ್ರಥಮವಾಗಿ “ರಾಮಾಯಣ’ ಹೆಚ್ಚಿನ ಮಹತ್ವ ನೀಡಿದ್ದು 2017ರಲ್ಲಿ. ಒಂದಲ್ಲ ಎರಡಲ್ಲ ಒಟ್ಟು 11 ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ ಅಂಚೆಇಲಾಖೆ ರಾಮಾಯಣದ ಮಿನಿಯೇಚರ್‌ ಹಾಳೆ, ಷೀಟ್‌ಲೆಟ್‌, ವಾಲ್ಮೀಕಿ ಕವಿ ಇರುವ ಮೊದಲ ದಿನ ಲಕೋಟೆಯನ್ನೂ ಹೊರತಂದಿತು.
ರಾಮಾಯಣದ ಸಂಕ್ಷಿಪ್ತ ರೂಪವನ್ನು ಆಕರ್ಷಕ ರೇಖಾಚಿತ್ರ ಗಳು ಹಾಗೂ ಸುಂದರ ಬಣ್ಣಗಳ ಸಂಯೋಜನೆ ಯೊಡನೆ ಹೊರತಂದಿರುವುದು ಈ ಅಂಚೆಚೀಟಿ ಸರಣಿಯ ವಿಶೇಷ. ಭಾರತೀಯ ಪರಂಪರೆಗೆ ಅಮೂಲ್ಯ ಕೊಡುಗೆ ನೀಡಿರುವ ರಾಮಾಯಣದ ಪ್ರಮುಖ ಘಟನಾವಳಿಗಳನ್ನು ಒಳಗೊಂಡ ಈ 11 ಅಂಚೆಚೀಟಿಗಳಲ್ಲಿ. ರಾಮ ಸೀತೆಯನ್ನು  ಬಿಲ್ವಿದ್ಯೆಯಿಂದ ವರಿಸಿದ್ದು, ದಶರಥ ರಾಮನನ್ನು ವನವಾಸಕ್ಕೆ ಕಳಿಸಿದ್ದು, ಅಂಬಿಗ ರಾಮ-ಲಕ್ಷ್ಮಣ-ಸೀತೆಯನ್ನು ಗಂಗೆಯಲ್ಲಿ ಪಯಣ ಮಾಡಿಸಿದ್ದು. ಶಬರಿ ಹಣ್ಣಿನ ರುಚಿ ರಾಮ ನೋಡಿದ್ದು, ರಾಮ ಸೇತುವೆ ನಿರ್ಮಾಣ. ಗಾಯಗೊಂಡ ಲಕ್ಷ್ಮಣನಿಗಾಗಿ ಆಂಜನೇಯ ದ್ರೋಣಗಿರಿಯನ್ನು ಹೊತ್ತುತಂದಿದ್ದು, ರಾವಣ-ಜಟಾಯು ಪ್ರಸಂಗ ಲಂಕೆಯ ಅಶೋಕವನದಲ್ಲಿ ಆಂಜನೇಯ-ಸೀತೆಗೆ ರಾಮನ ಉಂಗುರ ನೀಡಿದ್ದು ಸೇರಿದಂತೆ ಹನ್ನೊಂದು ಘಟನೆಗಳಿವೆ.

ಅಯೋಧ್ಯೆಯಲ್ಲಿ ಶ್ರೀರಾಮ ಪಟ್ಟಾಭಿಷೇಕಗೊಳ್ಳುವ ಸುಖಾಂತದ ವಿಶೇಷ ಅಂಚೆ ಇರುವ ಈ ಸರಣಿ ಅಂಚೆಚೀಟಿಗಳು ಸಂಗ್ರಾಹಕರ ಪಾಲಿಗೆ ವಿಶಿಷ್ಟ ಕೊಡುಗೆ.
ನೆರೆಹೊರೆಯ ರಾಷ್ಟ್ರಗಳೊಂದಿಗೆ ವಿಶೇಷ ಬಾಂಧವ್ಯ ಏರ್ಪಡಿಸಿಕೊಳ್ಳುವ ಹಾದಿಯಲ್ಲಿ ಭಾರತ 2018ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದಿನೋತ್ಸವಕ್ಕೆ ಆಹ್ವಾನಿಸಿತ್ತು. ಭಾರತದ ಆಹ್ವಾನ ಒಪ್ಪಿಕೊಂಡ ಮಲೇಶ್ಯಾ, ಲಾವೋಸ್‌, ಬ್ರೂನೆ, ಫಿಲಿಪೀನ್ಸ್‌, ವಿಯೆಟ್ನಾಂ, ಥೈಲ್ಯಾಂಡ್‌, ಮಾನ್ಮಾರ್‌, ಇಂಡೋನೇಷ್ಯಾ- ಈ ದೇಶಗಳಲ್ಲಿ ರಾಮಾಯಣದ ಕುರುಹುಗಳಿರುವುದೂ ವಿಶೇಷ.

ಭಾರತೀಯ ಅಂಚೆ ಇಲಾಖೆ ಈ ವಿಶೇಷ ಸಮಯದ ಸವಿನೆನಪಿಗಾಗಿ “ಆಸಿಯಾನ್‌’ ದೇಶಗಳ ಸಂಯುಕ್ತ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತು. ಈ ಸ್ಮರಣೀಯ ಅಂಚೆ ಸರಣಿಯಲ್ಲಿ ಶ್ರೀರಾಮನದ್ದೇ ವಿಶೇಷ ಸ್ಥಾನ. ಆಯಾ ದೇಶಗಳ ಸಾಂಸ್ಕೃತಿಕ ಇತಿಹಾಸದಲ್ಲಿ ಶ್ರೀರಾಮ ಮೂಡಿ ಬಂದಿರುವುದನ್ನು ಅಂಚೆಚೀಟಿಗಳಲ್ಲಿ ಚಿತ್ರಿಸಲಾಗಿದೆ.ನಾಟಕ-ದೇವಾಲಯ-ನೃತ್ಯಗಳಲ್ಲಿ ಶ್ರೀರಾಮ ಕಾಣಿಸಿಕೊಂಡಿರುವುದು ಈ ಜಂಟಿ ಅಂಚೆಸರಣಿಯಲ್ಲಿನ ಮುಖ್ಯಾಂಶ.

ಎನ್‌. ಜಗನ್ನಾಥ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next