ರಾಮದುರ್ಗ: ಹೊಲ್ದಾಗ ಇನ್ನೇನೈತಿ ಅಂತ ಜೀವನ ಮಾಡುದುರ್ರಿ ಸಾಕಷ್ಟ ಸಾಲ ಸೂಲಮಾಡಿ ಕಿಮ್ಮತ್ತಿನ ಬೀಜ ತಂದ ಹಾಕಿದ್ವಿ ಏನೋ ಸ್ವಲ್ಪ ಮಳೆಯಾದ ಮ್ಯಾಲ ಏನೋ ಬೆಳೆ ಬರತೈತಿ ಅಂತ ಮಾಡಿದ್ವಿ, ಈಗ ಸಿಕ್ಕಾಪಟ್ಟಿ ನೀರ ಬಂದ್ ಬೆಳೆ ಹಾಳಾಗಿ ಹೋಗೈತಿ ಕೈಗೆ ಬಂದ ತುತ್ತ ಬಾಯಿಗೆ ಬರದಂಗಾಗೈತಿ ಎಂಬುದು ಪ್ರವಾಹದಿಂದ ಫಸಲು ಕಳೆದುಕೊಂಡವರ ಗೋಳಿದು.
ತಾಲೂಕಿನಲ್ಲಿ ಎಷ್ಟೋ ವರ್ಷಗಳಿಂದ ಸಮರ್ಪಕ ಮಳೆಯಾಗದೆ ಸಾಕಷ್ಟು ರೈತರು ಸಂಕಷ್ಟು ಅನುಭವಿಸುತ್ತಿರುವ ಸಮಯದಲ್ಲಿಯೇ, ಇತ್ತೀಚೆಗೆ ಸುರಿದ ಅಲ್ಪಸ್ವಲ್ಪ ಮಳೆ ನಂಬಿಕೊಂಡು ನದಿಯ ಪಕ್ಕದ ರೈತರು ಸಾಲಸೂಲ ಮಾಡಿ ಬೀಜವನ್ನು ಹಾಕಿ ಬೆಳೆದ ಬೆಳೆ ಇಂದು ಮಲಪ್ರಭೆ ಪ್ರವಾಹಕ್ಕೆ ಸಿಕ್ಕಿಕೊಂಡು ರೈತರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಒಂದೆಡೆ ಪ್ರವಾಹದ ಕೂಪಕ್ಕೆ ತುತ್ತಾಗಿ ಹೊಲ ಗದ್ದೆಗಳಲ್ಲಿಯ ಬೆಳೆಗಳು ಸಂಪೂರ್ಣ ಹಾಳಾಗಿ ಹೊಗಿವೆ. ಆದರೆ ಇನ್ನೊಳಿದ ಕೆಲ ಭಾಗದಲ್ಲಿ ಮಳೆಯಾಗದೆ ಭೂಮಿಯಲ್ಲಾ ಬರಡಾಗಿ ರೈತರು ದನಕರುಗಳಿಗೆ ಮೇವಿಗಾಗಿ ಪರಿತಪಿಸಿದರೆ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಮುಖ್ಯವಾಗಿ ಈಗಿನ ಪರಸ್ಥಿತಿಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಜನ ಜೀವನ ಸಾಗಿಸುವುದು ತುಂಬಾ ದುಸ್ಥರವಾಗಿದೆ. ಎಷ್ಟೊ ಜನರು ನಿತ್ಯದ ಬದುಕಿಗಾಗಿ ಕೃಷಿ ಕೂಲಿಯನ್ನು ನಂಬಿಕೊಂಡಿದ್ದು. ಈಗ ಅದೆಲ್ಲಾ ವ್ಯರ್ಥವಾಗಿ ಹೊಟ್ಟೆಯ ಮೇಲೆ ತಣ್ಣಿರಿನ ಬಟ್ಟೆ ಹಾಕಿಕೊಳ್ಳುವಂತ ಪರಿಸ್ಥಿತಿ ಬಂದೊದಗಿದೆ.
ಈ ಮೊದಲು ಅಲ್ಪ ಸ್ವಲ್ಪ ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಸಂತಸಗೊಂಡ ರೈತರು ಸಾವಿರಾರು ಹಣ ಖರ್ಚು ಮಾಡಿ ಭೂಮಿಗೆ ಕಾಳು ಊರಿ ಶ್ರಮಪಟ್ಟು ಹುಲುಸಾಗಿ ಬೆಳೆಸಿದ್ದ. ಕೈಗೆ ಬಂದಿದ್ದ ಬೆಳೆಗಳೆಲ್ಲವೂ ಇಂದು ಪ್ರವಾಹದ ಕೂಪಕ್ಕೆ ಸಿಲುಕಿ ನಾಶಹೊಂದಿ ರೈತರು ದಿಕ್ಕು ತೊಚದೆ ಕಂಗಾಲಾಗಿದ್ದಾರೆ.
ಈ ಹಿಂದೆ ನದಿಗೆ ನೀರು ಬಿಡಿ ನಮಗೆ ಕುಡಿಲಿಕ್ಕೂ ನೀರಿಲ್ಲಾ ಎಂದು ಗೊಗೆರೆದರು ಅಧಿಕಾರಿಗಳು ಹನಿ ನೀರು ಬಿಡಲಿಲ್ಲ. ಆದರೆ ಈಗ ಏಕಾಏಕಿ ನೀರು ಬಿಟ್ಟು ನಮ್ಮ ಜೀವನದೊಂದಿಗೆ ಚಲ್ಲಾಟ ಮಾಡುತ್ತಿದ್ದಾರೆ ಎಂದು ನೊಂದ ರೈತರು ದೂರುತ್ತಾರೆ. ಇನ್ನೂ ಪ್ರವಾಹ ಕಡಿಮೆಯಾಗುವ ಲಕ್ಷಣ ಕಾಣದ ಕಾರಣ ಹೊಲಗದ್ದೆಗಳಲ್ಲಿನ ನೀರಿನಿಂದ ಬೆಳೆಯಲ್ಲಾ ನಾಶವಾಗಿದೆ