Advertisement

ಆಡಳಿತ ವೆಚ್ಚಕ್ಕೆ ಮಳಿಗೆ ಬಾಡಿಗೆಯೇ ಗತಿ

04:04 PM Feb 25, 2021 | Team Udayavani |

ರಾಮದುರ್ಗ: ಕೊರೊನಾ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಮಧ್ಯೆ ಕೃಷಿ ಉತ್ಪನ್ನ ಮಾರುಕಟ್ಟೆಗಳ  ಆರ್ಥಿಕ ಪರಿಸ್ಥಿತಿ ಮೊದಲೇ ಹದಗೆಟ್ಟು ಹೋಗಿರುವಾಗ ಸರಕಾರ ಈಗ ಜಾರಿಗೆ ತಂದ ಹೊಸ ಎಪಿಎಂಸಿ ನೀತಿಯಿಂದಾಗಿ ಮತ್ತಷ್ಟು ನೆಲಕಚ್ಚುವಂತಹ ಸ್ಥಿತಿ ಬಂದಿದೆ.

Advertisement

ಹೌದು.. ಇದು ರಾಮದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಪರಿಸ್ಥಿತಿ. ಸದ್ಯ ಹಲವಾರು ಸಮಸ್ಯೆಗಳ ಮಧ್ಯೆ ಚೇತರಿಕೆ ಕಂಡುಕೊಳ್ಳಲು ಹೆಣಗಾಡುತ್ತಿರುವ ಸಂದರ್ಭದಲ್ಲಿಯೇ ಹೊಸ ಎಪಿಎಂಸಿ ಕಾಯ್ದೆಗಳ ಜಾರಿಯಿಂದಾಗಿ ಮತ್ತಷ್ಟು ಆರ್ಥಿಕ ನಷ್ಟ ಎದುರಿಸಬೇಕಾಗಿದ್ದು, ಆಡಳಿತ ವೆಚ್ಚ ಹಾಗೂ ಇತರೆ ಅಭಿವೃದ್ಧಿಗೆ ಸರಕಾರದ ನೆರವಿಗಾಗಿ ಕಾಯುವಂತಾಗಿದೆ.

ಆದಾಯ ಕುಸಿತ: ಗ್ರಾಹಕರ ಮತ್ತು ವರ್ತಕರ ನಡುವೆ ಮುಕ್ತ ವ್ಯಾಪಾರ ಕಲ್ಪಿಸಿದಾಗಲೇ ಎಪಿಎಂಸಿ ಬಲ ಕುಗ್ಗಿ, ಬರುವ ಆದಾಯವು ಗಣನೀಯ ಇಳಿಕೆ ಕಂಡಿದ್ದು, ವಾಣಿಜ್ಯ ಮಳಿಗೆಯ ಬಾಡಿಗೆಯಿಂದಲೇ ಆಡಳಿತ ವೆಚ್ಚ ಸರಿದೂಗಿಸಬೇಕಾಗಿದೆ.

ಏಪ್ರೀಲ್‌ 2019 ರಿಂದ ಜನೇವರಿ 2020 ರ ಅವಧಿ  ಯಲ್ಲಿ ರೂ. 45 ಲಕ್ಷ ಕ್ಕಿಂತಲೂ ಅ ಧಿಕ ಆದಾಯ ಹೊಂದಿದ್ದ ರಾಮದುರ್ಗ ಎ.ಪಿ.ಎಂ.ಸಿ ಈ ವರ್ಷದ ಏಪ್ರೀಲ್‌-2020 ರಿಂದ ಜನೇವರಿ 2021 ರ ಅವ  ಧಿಯಲ್ಲಿ 19 ಲಕ್ಷ ಆದಾಯ ಗಳಿಸಿದ್ದು, ಅಂದಾಜು 26 ಲಕ್ಷ ಆದಾಯ ಕಡಿಮೆಯಾಗಿದೆ. ಕಳೆದ ವರ್ಷದ ಜನೇವರಿ ತಿಂಗಳ ಒಂದರಲ್ಲಿಯೇ 8 ಲಕ್ಷಕ್ಕೂ ಅಧಿಕ ವರಮಾನ ಬಂದಿತ್ತು. ಈ ವರ್ಷದ ಜನೇವರಿಯಲ್ಲಿ ಆದಾಯ 1.40 ಲಕ್ಷ ರೂ.ಗಳಿಗೆ ಸೀಮಿತವಾಗಿದೆ.

ವಾಣಿಜ್ಯ ಮಳಿಗೆಗಳು ಖಾಲಿ: ಎಪಿಎಂಸಿಯ 43 ವಾಣಿಜ್ಯ ಮಳಿಗಳಲ್ಲಿ 18 ಮಳಿಗೆಗಳು ಮಾತ್ರ ಬಾಡಿಗೆ ಇದ್ದು, ಇನ್ನೂಳಿದ 25 ಮಳಿಗೆಗಳು ಖಾಲಿ ಇದೆ. ಈಗ ಖಾಲಿ ಇರುವ 25 ಮಳಿಗೆಗಳಲ್ಲಿ 9 ಮಳಿಗೆ ಬಾಡಿಗೆ ನೀಡಲು ಮಂಜೂರಾತಿ ನೀಡಿದ್ದು, ಇನ್ನುಳಿದ 16 ಮಳಿಗೆಗಳಿಗೆ ಟೆಂಡರ್‌ ಕರೆದು ಬಾಡಿಗೆ ನೀಡಬೇಕಿದೆ. ಈ ಮಳಿಗೆಗಳನ್ನು ಬಾಡಿಗೆ ನೀಡಿದರೆ ಕೆಲಮಟ್ಟಿಗೆ ಆರ್ಥಿಕ ಸ್ಥಿತಿ ಸುಧಾರಿಸಬಹುದಾಗಿದೆ.

Advertisement

ಇದ್ದು ಇಲ್ಲದಂತಾದ ದನಗಳ ಪೇಟೆ: ಪ್ರತಿ ರವಿವಾರ ನಡೆಯುವ ದನಗಳ ಸಂತೆಯಿಂದ ಯಾವುದೇ ನಿರೀಕ್ಷಿತ ಆದಾಯ ಬರದಾಗಿದೆ. ಶುಲ್ಕ ವಸೂಲಿ ಸಿಬ್ಬಂದಿಗಳು ಕೇಳಲು ಹೋದರೆ ಯಾವುದೇ ದನಗಳು ಮಾರಾಟವಾಗಿಲ್ಲ ಎಂದು ರೈತರು ಸಬೂಬ ಹೇಳಿ ಹೊರ ನಡೆಯುತ್ತಾರೆ. ಪ್ರತಿ ವಾರ ನಡೆಯುವ ದನಗಳ ಸಂತೆಯಲ್ಲಿ 500 ರೂ. ವರಮಾನ ಸಂಗ್ರಹಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಪೇಟೆಯಲ್ಲಿ ಸಂಗ್ರಹವಾಗುವ ವರಮಾನ ಕುಡಿಯುವ ನೀರು, ವಿದ್ಯುತ್‌, ವಾಹನ ಬಳಕೆ ಸೇರಿದಂತೆ ಇತರೆ ಸಣ್ಣ ಪುಟ್ಟ ಬಿಲ್‌ಗೆ ಮಾತ್ರ ಸರಿಯಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಆರ್ಥಿಕ ಸಂಕಷ್ಟ-ಭದ್ರತಾ ಸಿಬ್ಬಂದಿ ಔಟ್‌: ಆರ್ಥಿಕ ಸಂಕಷ್ಟದಿಂದಾಗಿ 9 ಜನ ಭದ್ರತಾ ಸಿಬ್ಬಂದಿಯಲ್ಲಿ ಐವರನ್ನು ಕಡಿಮೆ ಮಾಡಲಾಗಿದೆ. ಹಮಾಲರ ಪರಿಸ್ಥಿತಿ ಅಧೋಗತಿ: ಹಲವಾರು ವರ್ಷಗಳಿಂದ ಎಪಿಎಂಸಿಯಲ್ಲಿ ದುಡಿಯುತ್ತಿರುವ ಹಮಾಲರು ಎಪಿಎಂಸಿ ಹೊರತು ಪಡಿಸಿ ಬೇರೆ ಎಲ್ಲಿಯೂ ಹಮಾಲಿ ಮಾಡುತ್ತಿಲ್ಲ. ಈಗ ಸರಕಾರದ ಹೊಸ ಕಾಯ್ದೆಯನ್ವಯ ಎಪಿಎಂಸಿ ಆರ್ಥಿಕ ಸ್ಥಿತಿ ಹದಗೆಟ್ಟು ಹಮಾಲರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next