Advertisement

ರಂಜಾನ್‌ ಸಾಮೂಹಿಕ ಪ್ರಾರ್ಥನೆ

12:00 PM Jun 27, 2017 | Team Udayavani |

ಹುಬ್ಬಳ್ಳಿ: ರಂಜಾನ್‌ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು. ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನ ಹಾಗೂ ಹಳೇ ಹುಬ್ಬಳ್ಳಿ ಈದ್ಗಾ ಮೈದಾನ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ನಾಡಿನ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಚನ್ನಮ್ಮ ವೃತ್ತ ಸಮೀಪದ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಾಂಧವರು ಬೆಳಗ್ಗೆ 10:30ರಿಂದ 11 ಗಂಟೆ ವರೆಗೆ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಇಸ್ಲಾಂ ಧರ್ಮದ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಕೋರ್ಟ್‌ ವೃತ್ತ, ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ಕೂಡ ಜನರು ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ನಂತರ ಇಸ್ಲಾಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಧಾರ್ಮಿಕ ಮುಖಂಡರಾದ ಹಜರತ್‌ ಜೈರುದ್ದಿನ್‌ ಖಾನ್‌ ಅವರು ಪ್ರಾರ್ಥನೆ ನಂತರ ಮಾತನಾಡಿ, ದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದ್ದು, ಅದನ್ನು ಮಟ್ಟ ಹಾಕುವುದು ಅವಶ್ಯ. 

ಭಯೋತ್ಪಾದನೆಯಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಭಯೋತ್ಪಾದನೆಯನ್ನು ಇಲ್ಲದಂತೆ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಮಳೆಗಾಗಿ ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ಮಳೆ-ಬೆಳೆ ಸಮೃದ್ಧಿಯಾದರೆ ಎಲ್ಲರೂ ನೆಮ್ಮದಿಯಿಂದ ಬಾಳಲು ಸಾಧ್ಯ ಎಂದು ಹೇಳಿದರು. 

ಸಾಮೂಹಿಕ ಪ್ರಾರ್ಥನೆಯಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹುಡಾ ಅಧ್ಯಕ್ಷ ಅನ್ವರ ಮುಧೋಳ, ಪಾಲಿಕೆ ಸದಸ್ಯ ಬಶೀರ್‌ ಗುಡಮಲ್‌,ಅಲ್ತಾಫ್‌ ಹಳ್ಳೂರ ಮುಂತಾದವರು ಪಾಲ್ಗೊಂಡಿದ್ದರು. ಪ್ರಾರ್ಥನೆ ನಂತರ ಶಾಸಕ ಪ್ರಸಾದ  ಅಬ್ಬಯ್ಯ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ, ಸಿದ್ದು ತೇಜಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.  

Advertisement

ನಂತರ ಮುಸ್ಲಿಂ ಮುಖಂಡರು ಮೂರುಸಾವಿರ ಮಠಕ್ಕೆ ತೆರಳಿ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು. ಶ್ರೀ ಮಠದ ವತಿಯಿಂದ ಹಣ್ಣು ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ ನಿಮಿತ್ತ ಚನ್ನಮ್ಮ ವೃತ್ತದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶವಿರಲಿಲ್ಲ.

ರೈಲ್ವೆ ನಿಲ್ದಾಣ, ಹೊಸೂರು, ಹಳೇ ಹುಬ್ಬಳ್ಳಿ, ಬಂಕಾಪುರ ಚೌಕ ಕಡೆಗೆ ಹೋಗುವ ವಾಹನಗಳು ಚನ್ನಮ್ಮ ವೃತ್ತದ ವರೆಗೆ ಬರಲು ಅವಕಾಶ ನೀಡಲಿಲ್ಲ. ಧಾರವಾಡ ಕಡೆಯಿಂದ ಬರುವ ವಾಹನಗಳು ಬಸವ ವನದ ವರೆಗೆ ಮಾತ್ರ ಬರಲು ಅವಕಾಶವಿತ್ತು. ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next