ಮಾಡಿದ ಪ್ರತಿ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ಅದರ ಪ್ರತಿಫಲಗಳನ್ನು ಪಡೆಯಲೇಬೇಕು. ಕರ್ಮ ಎಂಬುದು ಯಾರನ್ನೂ ಬಿಡುವುದಿಲ್ಲ. ಅದನ್ನು ಅನುಭವಿಸಿಯೇ ತೀರಬೇಕು ಎಂಬುದು ಕರ್ಮ ಸಿದ್ಧಾಂತದ ನಿಯಮ. ಇಂಥದ್ದೇ ಕರ್ಮ ಸಿದ್ಧಾಂತದ ಒಂದು ಎಳೆಯನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ರಾಮಾಚಾರಿ 2.0′
ಕೆಲವರ ಜೀವನದಲ್ಲಿ ಅದಾಗಲೇ ನಡೆದು ಹೋಗಿರುವ ಕೆಲವು ಘಟನೆಗಳು, ತನ್ನ ಜೀವನದಲ್ಲೂ ಕಾಕತಾಳೀಯ ಎಂಬಂತೆ ಮರುಕಳಿಸುತ್ತಿರುವುದನ್ನು ಗಮನಿಸುವ ನಾಯಕ ರಾಮಾಚಾರಿ, ಅದರ ಹಿಂದಿನ ರಹಸ್ಯವನ್ನು ಹುಡುಕುವ ಕೆಲಸಕ್ಕೆ ಮುಂದಾಗುತ್ತಾನೆ. ಈ ಹುಡುಕಾಟದಲ್ಲಿ ನಾಯಕ ರಾಮಾಚಾರಿಗೆ ಏನೇನು ಅಚ್ಚರಿಗಳು ಎದುರಾಗುತ್ತವೆ? ಅದೆಲ್ಲದಕ್ಕೂ ಕಾರಣವೇನು? ಎಂಬುದೇ “ರಾಮಾಚಾರಿ 2.0′ ಸಿನಿಮಾದ ಕಥಾಹಂದರ.
ರಾಮಾಚಾರಿಯ ಈ ಹುಡುಕಾಟ ಹೇಗಿರುತ್ತದೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ, ಖಂಡಿತವಾಗಿಯೂ ನೀವು “ರಾಮಾಚಾರಿ 2.0′ ಸಿನಿಮಾ ನೋಡಲು ಥಿಯೇಟರ್ ಕಡೆಗೆ ಮುಖ ಮಾಡಬಹುದು. ಕರ್ಮ ಸಿದ್ಧಾಂತ, ಸೈಕಾಲಜಿ, ಮನುಷ್ಯನ ವರ್ತನೆ ಎಲ್ಲವನ್ನೂ ಜೋಡಿಸಿ, ಅದಕ್ಕೊಂದಷ್ಟು ಮಾಸ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ಸೇರಿಸಿ “ರಾಮಾಚಾರಿ 2.0′ ಸಿನಿಮಾವನ್ನು ಸಸ್ಪೆನ್ಸ್ -ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ತಂದಿದ್ದಾರೆ ನಾಯಕ ನಟ ಕಂ ನಿರ್ದೇಶಕ ತೇಜ್.
ಇನ್ನು ತೆರೆಮುಂದೆ ಮಂಡ್ಯ ಸೊಗಡಿನ ಹುಡುಗನಾಗಿ ಮಿಂಚಿರುವ ತೇಜ್, ಅಪ್ಡೆàಟ್ ರಾಮಾಚಾರಿಯಾಗಿ ಗಮನ ಸೆಳೆಯುತ್ತಾರೆ. ತೆರೆಮುಂದೆ ಮತ್ತು ತೆರೆಹಿಂದೆ ಮಾಸ್ ಆಡಿಯನ್ಸ್ ಮುಟ್ಟುವಂತೆ ಮಾಡಲು ತೇಜ್ ಹಾಕಿರುವ ಪರಿಶ್ರಮ ಸಿನಿಮಾದಲ್ಲಿ ಕಾಣುತ್ತದೆ. ಉಳಿದಂತೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕಿ ಕೌಸ್ತುಭ ಮಣಿ ಒಂದು ಹಾಡು – ಕೆಲ ದೃಶ್ಯಗಳಿಗಷ್ಟೇ ಸೀಮಿತವಾದರೂ, ಮೊದಲ ನೋಟದಲ್ಲೇ ಗಮನ ಸೆಳೆಯುತ್ತಾರೆ. ಕಲಾವಿರಾದ ವಿಜಯ್ ಚೆಂಡೂರ್, ಸ್ಪರ್ಶ ರೇಖಾ, ಸ್ವಾತಿ, ಚಂದನಾ, ಪ್ರಭು ಸೂರ್ಯ ಸೇರಿದಂತೆ ಬಹುತೇಕರು ಪಾತ್ರಕ್ಕೆ ತಕ್ಕಂತೆ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಸಿನಿಮಾದ ಛಾಯಾಗ್ರಹಣ ರಾಮಾಚಾರಿಯನ್ನು ಮಾಸ್ ಲುಕ್‌ನಲ್ಲಿ ತೋರಿಸಲು ಯಶಸ್ವಿಯಾಗಿದೆ.
ಸಂಕಲನ ಇನ್ನಷ್ಟು ಹರಿತವಾಗಿದ್ದರೆ, ರಾಮಾಚಾರಿಯ ಓಟಕ್ಕೆ ಇನ್ನಷ್ಟು ವೇಗ ಸಿಗುತ್ತಿತ್ತು. ಕಲರಿಂಗ್ ಮತ್ತು ಬ್ಯಾಗ್ರೌಂಡ್ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಒಂದೆರಡು ಹಾಡುಗಳು ಥಿಯೇಟರ್ ಹೊರಗೂ ರಾಮಾಚಾರಿಯನ್ನು ಗುನುಗುವಂತೆ ಮಾಡಿವೆ. ಕ್ಲಾಸ್ ಕಥೆಯ ಜೊತೆಗೆ ಮಾಸ್ ಲುಕ್‌ನಲ್ಲಿ ತೆರೆಗೆ ಬಂದಿರುವ “ರಾಮಾಚಾರಿ 2.0′ ಸಿನಿಮಾವನ್ನು ಒಮ್ಮೆ ನೋಡಿ ಕಣ್ತುಂಬಿಕೊಳ್ಳಬಹುದು.