Advertisement

ಸಂಗಮ್‌ ಗ್ರಾಮದಲ್ಲಿ ರಾಮಚಂದ್ರನ್‌ ವಾಸ್ತವ್ಯ

06:12 PM Feb 19, 2021 | Team Udayavani |

ಬೀದರ: ಈ ಗ್ರಾಮದಲ್ಲಿ ಆರೋಗ್ಯ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ಸೇರಿ ಸರ್ಕಾರದ ಸೇವಾ ವ್ಯವಸ್ಥೆಗಳು ಇವೆ. ಆದರೆ, ಅಧಿಕಾರಿಗಳ ನಿಷ್ಕಾಳಜಿಯಿಂದ ಸದ್ಯ ಅಪ್ರಯೋಜಕವಾಗಿವೆ. ವೈದ್ಯ, ಸಿಬ್ಬಂದಿಗಳಿಲ್ಲದೇ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ್ದರೆ, ಉದ್ಘಾಟನೆಗೂ ಮುನ್ನವೇ ನೀರಿನ ಘಟಕ ಬಂದ್‌ ಆಗಿದೆ. ಇದರೊಟ್ಟಿಗೆ ಅಗತ್ಯ ಸೌಲತ್ತುಗಳ ಕೊರತೆ ಗ್ರಾಮಸ್ಥರನ್ನು ಕಾಡುತ್ತಿದೆ.

Advertisement

ಇದು “ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ’ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿರುವ ಕಮಲನಗರ ತಾಲೂಕಿನ ಸಂಗಮ್‌ ಗ್ರಾಮದ ಸ್ಥಿತಿ. ಫೆ.22ರಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರು ತಮ್ಮೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮ ಜನರಲ್ಲಿ ಆಶಾಭಾವ ಮೂಡಿದ್ದು, ಊರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಆಗಬಹುದೆಂಬ ನಿರೀಕ್ಷೆಗಳು ಗರಿಗೆದರಿವೆ.

ಆಡಳಿತ ವರ್ಗವು ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ, ಬೇಡಿಕೆಗಳನ್ನು ಪರಿಹರಿಸಬೇಕು. ಆ ಮೂಲಕ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಿದೆ. ಪ್ರತಿ ತಿಂಗಳ 3ನೇ ಶನಿವಾರ ಒಂದೊಂದು ತಾಲೂಕಿನ ಗ್ರಾಮದಲ್ಲಿ ಡಿಸಿ ವಾಸ್ತವ್ಯ ಮಾಡಲಿದ್ದಾರೆ. ಆದರೆ, ಈ ಶನಿವಾರ (ಫೆ. 20)ರಂದು ಜಿಲ್ಲೆಯಲ್ಲಿ ಕೃಷಿ ಸಚಿವರ ರೈತರೊಂದಿಗೊಂದು ದಿನ ಕಾರ್ಯಕ್ರಮ ನಿಗದಿ ಹಿನ್ನೆಲೆಯಲ್ಲಿ ಫೆ.22ರಂದು ಡಿಸಿ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆ ಆಲಿಸಲಿದ್ದಾರೆ.

ನೂತನ ತಾಲೂಕು ಕಮಲನಗರ ವ್ಯಾಪ್ತಿಗೆ ಸೇರಿರುವ ಸಂಗಮ್‌ ಗ್ರಾಮ ಖೇಡ್‌ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಜಿಲ್ಲಾ ಕೇಂದ್ರದಿಂದ 50 ಕಿ.ಮೀ. ಅಂತರದಲ್ಲಿದೆ. ಪ್ರಸಿದ್ಧ ಸಂಗಮನಾಥ ದೇಗುಲ ಇರುವ ಈ ಗ್ರಾಮದಲ್ಲಿ ಸುಮಾರು 1500ರಷ್ಟು ಜನಸಂಖ್ಯೆ ಇದೆ. ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ತಮ್ಮ ಅಧಿಕಾರಿಗಳ ತಂಡದೊಂದಿಗೆ ಗ್ರಾಮದಲ್ಲಿ ಒಂದು ದಿನ (ಫೆ.22) ವಾಸ್ತವ್ಯ ನಡೆಸುವ ಮೂಲಕ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಿದ್ದಾರೆ.

ಗ್ರಾಮದಲ್ಲಿ ಆರೋಗ್ಯ ಸೇವೆಗಾಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಇದ್ದು, ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೇ ಸದಾ ಬೀಗ ಹಾಕಲಾಗಿದ್ದು, ಸದ್ಯ ಕಟ್ಟಡ ಶಿಥಲಾವಸ್ಥೆಗೆ ತಲುಪಿದೆ. ಇನ್ನೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಶುದ್ಧೀಕರಣ ಘಟಕ ಅಳವಡಿಸಿ ಹಲವು ತಿಂಗಳು ಕಳೆದಿವೆ. ಆದರೆ,
ಯಂತ್ರದಲ್ಲಿನ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶುದ್ಧ ನೀರಿನಿಂದ ವಂಚಿತರಾಗುವಂತೆ ಮಾಡಿದೆ. ಘಟಕವನ್ನು ರಿಪೇರಿ ಮಾಡುವಲ್ಲಿ ಪಂಚಾಯತ ನಿರ್ಲಕ್ಷ ತೋರುತ್ತಿರುವುದೇ ಇದಕ್ಕೆ ಕಾರಣ. ವಯಕ್ತಿಕ ಶೌಚಾಲಯಗಳ ಪ್ರಮಾಣವೂ ಕಡಿಮೆ ಇದೆ. ಇನ್ನೂ ಸಂಗಮ್‌ ಗ್ರಾಮದಿಂದ ಹೆದ್ದಾರಿ ಅಂದಾಜು ಒಂದು ಕಿ.ಮೀ ಅಂತರ ಇದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸರಿಯಾದ ಸಾರಿಗೆ ಬಸ್‌ ವ್ಯವಸ್ಥೆಯೂ ಇಲ್ಲ. ಹೀಗಾಗಿ ಭಾಲ್ಕಿ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ
ಹೋಗುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಇದೆ.

Advertisement

“ಕಂದಾಯ ಸಮಸ್ಯೆಗಳ ಇತ್ಯರ್ಥ’ 
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಮುಖ್ಯವಾಗಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಇತ್ಯರ್ಥ ಹೆಚ್ಚು ಆದ್ಯತೆ ನೀಡುವುದು ಸರ್ಕಾರದ ನಿರ್ದೇಶನವಾಗಿದೆ. ಸಮಸ್ಯೆಗಳನ್ನು ಆಲಿಸುವುದರ ಜತೆ ಸ್ಥಳದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳಿಗೆ ತುರ್ತು ಸ್ಪಂದನೆ ನೀಡಲಾಗುತ್ತಿದೆ. ರೈತರ ಪಹಣಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವುದು, ನಕಾಶೆ ಸೇರಿ ಇತರ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುವುದು. ಜತೆಗೆ ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಸೌಲಭ್ಯ, ಬೆಳೆ ಪರಿಹಾರ, ಪಡಿತರ ಚೀಟಿ ಮತ್ತಿತರ ಸೌಲಭ್ಯಗಳಲ್ಲಿನ ಸಮಸ್ಯೆಗೆ ಸ್ಪಂದಿಸುವುದು. ಈಗಾಗಲೇ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಇತ್ಯರ್ಥಪಡಿಸುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅಪ್ರಯೋಜಕವಾಗಿದೆ. ಗ್ರಾಮಸ್ಥರಿಗೆ ಶುದ್ದ ನೀರು ಬೇಡಿಕೆ ಜತೆಗೆ ಗ್ರಾಮದಿಂದ ಸಂಗಮ್‌ ಕ್ರಾಸ್‌ವರೆಗಿನ ಹದಗೆಟ್ಟ ರಸ್ತೆ ರಿಪೇರಿ ನಿರ್ಮಾಣ ತುರ್ತು ಆಗಬೇಕಿದೆ. ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಗ್ರಾಮ ವಾಸ್ತವ್ಯದಿಂದ ನಮ್ಮೂರಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂಬುದು ನಮ್ಮ ಆಶಯ.
ಪ್ರಕಾಶ ಎಸ್‌. ಗ್ರಾಮಸ್ಥ, ಸಂಗಮ್‌

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next