Advertisement

ಮಂದಿರ ನಿರ್ಮಾಣ ಸನ್ನಿಹಿತ?​​​​​​​

06:00 AM Nov 26, 2018 | |

ಅಯೋಧ್ಯೆ/ನಾಗ್ಪುರ: ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವ ಲಕ್ಷಾಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆಯೇ? ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭಾನುವಾರ ನಡೆದ ಬೃಹತ್‌ ಧರ್ಮಸಭಾ ಮತ್ತು ನಾಗ್ಪುರದಲ್ಲಿ ನಡೆದ ಹೂಂಕಾರ್‌ ಸಭೆಗಳು ಇಂಥದ್ದೊಂದು ಸುಳಿವನ್ನು ನೀಡಿವೆ.

Advertisement

ಅಯೋಧ್ಯೆಯಲ್ಲಿ ಲಕ್ಷಾಂತರ ಮಂದಿ ರಾಮಭಕ್ತರು ನಡೆಸಿದ ಮೆಗಾ ರ್ಯಾಲಿಯಲ್ಲಿ ವಿಹಿಂಪ ನಾಯಕರು, ಸಂತರು ಆಡಿರುವ ಮಾತುಗಳು ಮಂದಿರದ ಕನಸನ್ನು ಜೀವಂತವಾಗಿಸಿದೆ. ಮುಂದಿನ ಜನವರಿಯಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ರಾಮಮಂದಿರ ನಿರ್ಮಾಣದ ದಿನಾಂಕ ಘೋಷಿಸಲಾಗುತ್ತದೆ ಎಂದು ನಿರ್ಮೋಹಿ ಅಖಾರಾದ ರಾಮ್‌ಜೀ ದಾಸ್‌ ಘೋಷಿಸಿದ್ದಾರೆ. ಡಿಸೆಂಬರ್‌ 11ರ ನಂತರ ಪ್ರಧಾನಿ ಮೋದಿ ಹಾಗೂ ಅವರ ಸಚಿವರು ರಾಮಮಂದಿರದ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೇಂದ್ರದ ಸಚಿವರೊಬ್ಬರು ನನಗೆ ಭರವಸೆ ನೀಡಿದ್ದಾರೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಹೇಳಿದ್ದಾರೆ.

ಮತ್ತೂಂದೆಡೆ, ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೂಂಕಾರ್‌ ಸಭಾದಲ್ಲಿ ಭಾನುವಾರ ಮಾತನಾಡಿರುವ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, “ಸರ್ವೋಚ್ಚ ನ್ಯಾಯಾಲಯಕ್ಕೆ ರಾಮಮಂದಿರವು ಆದ್ಯತೆಯ ವಿಚಾರವಲ್ಲ ಎಂದಾದರೆ, ಕೇಂದ್ರ ಸರ್ಕಾರವೇ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸಲಿ’ ಎಂದು ಆಗ್ರಹಿಸಿದ್ದಾರೆ. 

ಇದೇ ವೇಳೆ, ಹಿಂದೂ ಮತ್ತು ಮುಸ್ಲಿಮರ ಒಪ್ಪಿಗೆಯೊಂದಿಗೆ 2019ರ ಲೋಕಸಭೆ ಚುನಾವಣೆಗೆ ಮೊದಲೇ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆಎತ್ತಲಿದೆ ಎಂದು ರಾಮಮಂದಿರ ನ್ಯಾಸ್‌ ಮಂಡಳಿ ಅಧ್ಯಕ್ಷ ರಾಮ್‌ ವಿಲಾಸ್‌ ವೇದಾಂತಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ಮಂದಿರ ನಿರ್ಮಾಣದ ಕುರಿತು ಸದ್ಯವೇ ತೀರ್ಮಾನ ಕೈಗೊಳ್ಳುವ ಲಕ್ಷಣ ಗೋಚರಿಸಿದೆ.ಇದೇ ವೇಳೆ, ಧರ್ಮಸಭಾದಲ್ಲಿ ಒಂದು ಹಿಡಿ ಮಣ್ಣು ಹಿಡಿದು ಅಲ್ಲಿ ಸೇರಿದ್ದ ಭಕ್ತರಿಗೆ ರಾಮಮಂದಿರ ಪ್ರಮಾಣವನ್ನು ವಿಎಚ್‌ಪಿ ನಾಯಕರು ಬೋಧಿಸಿದ್ದಾರೆ.

ಥ್ಯಾಂಕ್ಸ್‌ ಹೇಳಿದ ಅನ್ಸಾರಿ
1992ರ ಕರಸೇವಾ ಬಳಿಕ ಅತಿ ಹೆಚ್ಚು ಜನರು ಅಯೋಧ್ಯೆಯಲ್ಲಿ ಸೇರಿದ್ದು ಇದೇ ಮೊದಲು. ಹೀಗಾಗಿ ಸಹಜವಾಗಿಯೇ ಎಲ್ಲರಲ್ಲೂ ಆತಂಕ ಮನೆಮಾಡಿತ್ತು. ಜನಸಾಗರವನ್ನು ನೋಡಿ ಆರಂಭದಲ್ಲಿ ಕಳವಳ ವ್ಯಕ್ತಪಡಿಸಿದ್ದ ಮುಸ್ಲಿಂ ಅರ್ಜಿದಾರ ಇಕ್ಬಾಲ್‌ ಅನ್ಸಾರಿ ಅವರು, ಕಾರ್ಯಕ್ರಮ ಮುಗಿದ ಬಳಿಕ ಉತ್ತಮ ವ್ಯವಸ್ಥೆ ಕಲ್ಪಿಸಿದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರವನ್ನು ಅಭಿನಂದಿಸಿದರು. ಇದಕ್ಕೂ ಮುನ್ನ, ಧರ್ಮಸಭಾಗೆ ಆಗಮಿಸಿದ ಭಕ್ತರು ಬೀದಿಗಳಲ್ಲಿ ತೆರಳುತ್ತಿದ್ದಾಗ ಸ್ಥಳೀಯ ಮುಸ್ಲಿಮರು ಕಟ್ಟಡಗಳ ಮೇಲಿಂದ ಪುಷ್ಪವೃಷ್ಟಿ ಮಾಡಿದ್ದೂ ಕಂಡುಬಂತು. ಇದೇ ವೇಳೆ, ಎಸ್‌ಪಿ ನಾಯಕ ಅಜಂ ಖಾನ್‌ ಅವರು, ಅಯೋಧ್ಯೆ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾರೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

Advertisement

ತೀರ್ಪು ತಡವಾದರೆ ನ್ಯಾಯ ಸಿಗಲ್ಲವೆಂದೇ ಅರ್ಥ
ನಾಗ್ಪುರ:
“”ಸುಪ್ರೀಂಕೋರ್ಟ್‌ಗೆ ರಾಮ ಮಂದಿರ ವಿವಾದ ಆದ್ಯತೆಯ ವಿಚಾರ ಅಲ್ಲವೇ ಅಲ್ಲ. ನ್ಯಾಯ ತೀರ್ಮಾನ ತಡವಾದರೆ, ನ್ಯಾಯ ಸಿಗಲಾರದು ಎಂದೇ ಅರ್ಥೈಸಬೇಕಾಗುತ್ತದೆ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ತರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸಂಬಂಧ ನಾಗ್ಪುರದಲ್ಲಿ ಆಯೋಜಿಸಲಾಗಿರುವ ಜನಾಗ್ರಹ ಆಂದೋಲನವಾದ “ಹೂಂಕಾರ್‌ ಸಭಾ’ದಲ್ಲಿ ಮಾತನಾಡಿದ ಅವರು, “”ರಾಮ ಮಂದಿರ ತೀರ್ಪಿಗಾಗಿ ವರ್ಷಗಟ್ಟಲೆ ಕಾಯಿರಿ” ಎಂದು ನಾನು ಜನರಿಗೆ ಹೇಳಬಯಸುವುದಿಲ್ಲ. ಕಳೆದ ವರ್ಷ ನಾನು ತೀರ್ಪು ಬರುವವರೆಗೂ ಕಾಯಿರಿ ಎಂದು ಹೇಳಿದ್ದೆ. ಆದರೀಗ, ಮಂದಿರ ನಿರ್ಮಾಣಕ್ಕಾಗಿ ಕಾನೂನು ರೂಪಿಸುವಂತೆ ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ” ಎಂದು ತಿಳಿಸಿದರು.

ಜಡ್ಜ್ ಗಳಿಗೆ ಕಾಂಗ್ರೆಸ್‌ ಬೆದರಿಕೆ
ಭೋಪಾಲ್‌:
ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುವಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಾಂಗ್ರೆಸ್‌ ಬೆದರಿಕೆ ಹಾಕುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿಯೇ ಆರೋಪ ಮಾಡಿದ್ದಾರೆ. ಸುಪ್ರೀಂ ನ್ಯಾಯಮೂರ್ತಿಗಳು ಕಾಂಗ್ರೆಸ್‌ ಹೇಳಿದಂತೆ ಕೇಳದಿದ್ದರೆ, ಅವರ ವಿರುದ್ಧ ವಾಗ್ಧಂಡನೆ ವಿಧಿಸುವ ಬೆದರಿಕೆ ಹಾಕಲಾಗುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ಆಪಾದಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ತಿರುಗೇಟು ನೀಡಿದ್ದು, ಅಯೋಧ್ಯೆ ಕೇಸಿನಲ್ಲಿ ನಾವು ಯಾರ ಪರವೂ ವಾದಿಸುತ್ತಿಲ್ಲ ಎಂದಿದ್ದಾರೆ.

ಒಂದಿಂಚೂ ಭೂಮಿಯನ್ನೂ ಕೊಡಲ್ಲ
“ಜೈ ಶ್ರೀರಾಮ್‌’ ಎಂಬ ಘೋಷಣೆಗಳೊಂದಿಗೆ ಭಾನುವಾರ ನಡೆದ ಧರ್ಮಸಭಾದಲ್ಲಿ ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಚಂಪತ್‌ ರಾಯ್‌ ಪ್ರಮುಖ ಘೋಷಣೆಗಳನ್ನು ಮಾಡಿದ್ದು, ಮಂದಿರ ನಿರ್ಮಾಣ ಕುರಿತು ತಮ್ಮ ಸ್ಪಷ್ಟ ನಿಲುವುಗಳನ್ನು ಬಹಿರಂಗಪಡಿಸಿದ್ದಾರೆ.
– ರಾಮಮಂದಿರ ಹೊರತಾಗಿ ಬೇರೆ ಯಾವುದಕ್ಕೂ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ.
– ವಿವಾದಿತ ಜಾಗವನ್ನು ವಿಭಜಿಸುವುದನ್ನು ನಾವು ಒಪ್ಪುವುದಿಲ್ಲ. ಇಡೀ ಭೂಮಿಯನ್ನು ಶ್ರೀರಾಮನಿಗಷ್ಟೇ ಕೊಡಬೇಕು
– ಸುನ್ನಿ ವಕ್ಫ್ ಬೋರ್ಡ್‌ ಕೂಡಲೇ ಕೇಸನ್ನು ವಾಪಸ್‌ ಪಡೆಯಬೇಕು
– ವಿವಾದಾತ್ಮಕ ಪ್ರದೇಶದಲ್ಲಿ ಮುಸ್ಲಿಮರಿಗೆ ನಮಾಜ್‌ ಮಾಡಲು ಹಿಂದೂಗಳು ಅವಕಾಶ ನೀಡುವುದಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next