Advertisement

ಮನಸೂರೆಗೊಂಡ ರಾಮ ನಿರ್ಯಾಣ- ಮೇಘ ಮಯೂರಿ

06:00 AM Sep 21, 2018 | |

ಮುಚ್ಚಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷಕೂಟ ಮುಚ್ಚಾರು ಇವರು ಇತ್ತೀಚೆಗೆ ಸಾದರಪಡಿಸಿದ 16ನೇ ವರ್ಷದ ಯಕ್ಷ ಆಟ-ಕೂಟವು ಯಶಸ್ವಿಯಾಗಿ ಸಮಾಪಣೆಗೊಂಡಿತು. 

Advertisement

ಮಧ್ಯಾಹ್ನ 2ರಿಂದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಕುರಿಯ ಗಣಪತಿ ಶಾಸ್ತ್ರೀಯವರ ಭಾಗವತಿಕೆ; ಅಡೂರು ಗಣೇಶ್‌ ರಾವ್‌, ಮೋಹನ್‌ ಶೆಟ್ಟಿಗಾರ್‌ರವರ ಹಿಮ್ಮೇಳ ಹಾಗೂ ಸುಣ್ಣಂಬಳ, ರಂಗ ಭಟ್‌, ಜಬ್ಟಾರ್‌, ಕಾವಳಕಟ್ಟೆಯವರ ಅರ್ಥಗಾರಿಕೆಯೊಂದಿಗೆ ಹೊಸತೋಟ ಮಂಜುನಾಥ ಭಾಗವತ ವಿರಚಿತ “ಶ್ರೀರಾಮ ನಿರ್ಯಾಣ’ ತಾಳಮದ್ದಳೆ ನಡೆಯಿತು. ಅಯೋಧ್ಯೆಯಲ್ಲಿ ರಾಮ ಲಕ್ಷ್ಮಣರನ್ನು ಕಳಕೊಂಡ ಪ್ರಜೆಗಳಂತೆ ತಾಳಮದ್ದಳೆ ನೋಡಿದ ಪ್ರೇಕ್ಷಕರ ಕಣ್ಣುಗಳು ತುಂಬಿದ್ದವು. ನಂತರ ಪುರುಷೋತ್ತಮ ಪೂಂಜ ರಚಿಸಿದ ಸಾಲಿಗ್ರಾಮ ಮೇಳದಲ್ಲಿ ಜಯಭೇರಿ ಬಾರಿಸಿದ “ಮೇಘ-ಮಯೂರಿ’ ಪ್ರಸಂಗ ಪ್ರದರ್ಶನಗೊಂಡಿತು. 

ಮನದ ತುಮುಲಗಳನ್ನು ಬದಿಗಿಟ್ಟು ಯಾವುದೇ ಭಾವನೆಗಳಿಗೆ ಒಳಗಾಗದೆ, ವೈಯಕ್ತಿಕ ಜೀವನಕ್ಕಿಂತ ದೇಶ ಮೊದಲು ಎಂದು ಬದುಕುವ ದಂಡನಾಯಕ ಮೇಘ ಮತ್ತು ಆತನನ್ನು ಪ್ರೀತಿಸಿ ಕೈ ಹಿಡಿದು, ಗಂಡನಿಗೆ ಧೈರ್ಯ ತುಂಬುತ್ತಾ, ತನಗೇನು ಕಷ್ಟ ಬಂದರೂ ತಾನೋರ್ವ ದಂಡನಾಯಕನ ಪತ್ನಿ ಎಂದು ಹೆಮ್ಮೆಯಿಂದಲೇ ಬದುಕುವ ಮಯೂರಿ, ಇವರೀರ್ವರ ಜೀವನದಲ್ಲಿ ಕಿನ್ನರ ಜೋಗಿಯೋರ್ವನ ಭವಿಷ್ಯ ಹೇಗೆ ಸತ್ಯವಾಗುತ್ತದೆ ಎನ್ನುವ ಕಥೆಯೇ ಮೇಘ-ಮಯೂರಿ. 

ಕನ್ನಡಿಕಟ್ಟೆ , ಕಕ್ಕೆಪದವು ಅವರ ಭಾಗವತಿಕೆ, ಬೊಳಿಂಜಡ್ಕ, ಮಿಜಾರು ದಯಾನಂದ, ಚೈತನ್ಯರ ಹಿಮ್ಮೇಳದಲ್ಲಿ ಕಲಾವಿದರ ಮನೋಜ್ಞ ಅಭಿನಯದ ಮೂಲಕ ಜನಮನ ಸೂರೆಗೊಂಡಿತು. ಸಾವನ್ನು ಅಪ್ಪುವುದಕ್ಕೆ ಸದಾ ಸಿದ್ಧನಾಗಿ ನಿಂತ ಯೋಧನ ಮದುವೆಯಾದರೆ ಕೈಗೆ ಹಚ್ಚಿದ ಮದರಂಗಿ ಮಾಸುವ ಮುನ್ನ ಕೈ ಬಳೆ ಚೂರಾದೀತು ಎಂಬ ವಾಸ್ತವವನ್ನು ಬಿಚ್ಚಿಡುವ ಕೆಚ್ಚೆದೆಯ ಯೋಧನಾಗಿ ಸುಬ್ರಾಯ ಹೊಳ್ಳರು, ತಾಳಿ ಕಟ್ಟಿದಾಕ್ಷಣ ವಿಧವೆಯಾದರೂ ಜೀವನ ಪರ್ಯಂತ ಯೋಧನ ಮಡದಿಯೆಂದು ಕೆಚ್ಚಿನಿಂದ ಬದುಕುವೆನೆಂದು, ಅದಕ್ಕಿಂತ ಹೆಚ್ಚಿನದ್ದು ಹೆಣ್ಣಾದವಳಿಗೆ ಬೇಕಿಲ್ಲ ಎಂದು ಬೆಚ್ಚಗೆ ನುಡಿಯುವ ಧೀರೆಯಾಗಿ ಹಿಲಿಯಾಣರವರ ಮೊದಲಾರ್ಧದ ಮೇಘ-ಮಯೂರಿ ಪಾತ್ರ ಮನಸ್ಸನ್ನು ಸೂರೆಗೊಂಡಿತು. 

ಬಳಿಕ ಮೇಘ – ಮಯೂರಿ ಪಾತ್ರ ಮಾಡಿದ ಸುಣ್ಣಂಬಳ ಹಾಗೂ ಶಶಿಕಾಂತ ಶೆಟ್ಟಿಯವರು ಮನ ಮಿಡಿಯುವ ಅಭಿನಯ ನೀಡಿದರು. ತುಂಬು ಗರ್ಣಿಣಿ ಮಡದಿಯನ್ನು ಬಿಟ್ಟು ರಣರಂಗಕ್ಕೆ ತೆರಳುವ ಪತಿಯನ್ನು , ರಣರಂಗಕ್ಕೆ ಹೊರಟ ಯೋಧ, ಪ್ರಸವಕ್ಕೆ ಹೊರಟ ಹೆಣ್ಣು ಬದುಕಿ ಬರುವ ಸಾಧ್ಯತೆ ಕಡಿಮೆ. ನೆರೆಯ ನೀರ ಮಧ್ಯೆ ನಿಂತಿರುವ ನಮ್ಮಿಬ್ಬರ ಬದುಕು ಕೊಚ್ಚಿ ಹೋಗಲೂ ಬಹುದು, ಮರಳಿ ಒಂದುಗೂಡಲೂ ಬಹುದು. ಎಲ್ಲವೂ ದೈವಚಿತ್ತ ಎಂದು ಧೈರ್ಯ ತುಂಬುವ ಸನ್ನಿವೇಶವನ್ನು ಈ ಇಬ್ಬರು ಕಲಾವಿದರು ಮನೋಜ್ಞವಾಗಿ ಚಿತ್ರಿಸಿದರು. 

Advertisement

 ವಿಜೃಂಭಿಸುವ ಕಂಠ, ವಿಶಿಷ್ಟ ಮುಖವರ್ಣಿಕೆಯ ಹಾವಭಾವದೊಂದಿಗೆ ಖಳನಾಯಕ ರಣತುಂಗನ ಪಾತ್ರಕ್ಕೆ ರವಿರಾಜ ಪನೆಯಾಲರು ಜೀವ ತುಂಬಿದರು.ಪೆರ್ಮುದೆ ಹಾಗೂ ಗಣೇಶ್‌ ಕನ್ನಡಿಕಟ್ಟೆಯವರ ಚೊಕ್ಕದಾದ ಪಾತ್ರ ನಿರ್ವಹಣೆ; ದಿಗಿಣ ವೀರರಾದ ಶಶಿಧರ್‌ ಕನ್ಯಾನ ಹಾಗೂ ಲೋಕೇಶ್‌ ಮುಚ್ಚಾರುರವರ ಪ್ರಚಂಡ ಪುಂಡು ವೇಷ; ಬಂಟ್ವಾಳ, ಮಿಜಾರು, ಮೋಹನ್‌ ಮುಚ್ಚಾರು, ಪ್ರಜ್ವಲ್‌ರವರ ಉತ್ತಮ ಹಾಸ್ಯ; ಕೊನೆ ಗಳಿಗೆಯಲ್ಲಿ ದಿವಾಕರ್‌ ರೈ ಹಾಗೂ ರಕ್ಷಿತ್‌ ರೈಯವರ ಶಶಾಂಕ – ಮಾಳವಿಕಾ ಜೋಡಿ ರಂಗದಲ್ಲಿ ಮಿಂಚಿನ ಸಂಚಾರ ಮೂಡಿಸಿತು. ಇತರ ಎಲ್ಲಾ ಕಲಾವಿದರ ಉತ್ಕೃಷ್ಟ ನಿರ್ವಹಣೆ ಪ್ರದರ್ಶನವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. 

  ಆರ್‌. ಕೆ. ಕೊಳಂಬೆ

Advertisement

Udayavani is now on Telegram. Click here to join our channel and stay updated with the latest news.

Next