ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡ ನೂರಾರು ಸಿನಿಮಾಗಳಿವೆ. ಆ ಪೈಕಿ ಬೆರಳೆಣಿಕೆ ಚಿತ್ರಗಳು, ಆ ಸಿನಿಮಾದ ಹುಟ್ಟು, ಪಟ್ಟ ಕಷ್ಟ ಪಡೆದ ಸಂಭ್ರಮ ಕುರಿತು ಪುಸ್ತಕ ಮೂಲಕ ಅಪರೂಪದ ವಿವರಗಳನ್ನು ದಾಖಲಿಸಿ ಬಿಡುಗಡೆ ಮಾಡಿದ್ದುಂಟು. ಅದರಲ್ಲೂ ದಶಕದ ಹಿಂದೆ ಬಂದ “ಮುಂಗಾರು ಮಳೆ’ ಚಿತ್ರ ಯಶಸ್ಸು ಕಂಡಿದ್ದೇ ತಡ, ಆ ಕುರಿತಾದ ಪುಸ್ತಕ ಬಿಡುಗಡೆಯಾಯಿತು.
ಆ ಬಳಿಕ “ಮಠ’, “ಎದ್ದೇಳು ಮಂಜುನಾಥ’ ಚಿತ್ರಗಳ ಬಗ್ಗೆಯೂ ಪುಸ್ತಕ ಹೊರಬಂತು. ಈಗ “ರಾಮಾ ರಾಮಾ ರೇ’ ಚಿತ್ರದ ಸರದಿ. ಹೌದು, ಹೊಸಬರೇ ಸೇರಿ ಮಾಡಿದ ‘ರಾಮಾ ರಾಮಾ ರೇ’ ಸಿನಿಮಾ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಆ ಸಿನಿಮಾ ಶುರುವಾಗಿದ್ದು, ಎಲ್ಲರೂ ಕಷ್ಟಪಟ್ಟಿದ್ದು, ಅನುಭವಿಸಿದ ನೋವು,ನಲಿವುಗಳ ಕುರಿತಾದ ಮೇಕಿಂಗ್ ಪುಸ್ತಕವೊಂದು ಹೊರಬರುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ನಲ್ಲಿ “ರಾಮಾ ರಾಮಾ ರೇ’ ಪುಸ್ತಕ ಬಿಡುಗಡೆಯಾಗಲಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಸತ್ಯಪ್ರಕಾಶ್, “ನಮಗೆ ಚಿತ್ರದ ಮೇಕಿಂಗ್ ವೀಡಿಯೋ ಮಾಡಿ ರಿಲೀಸ್ ಮಾಡುವ ಆಸೆ ಇತ್ತು. ಆದರೆ, ಹಾರ್ಡ್ ಡಿಸ್ಕ್ ಕ್ರಾಷ್ ಆಗಿದ್ದರಿಂದ ಅದನ್ನು ಹೊರ ತರಲು ಆಗಲಿಲ್ಲ.
ಆದರೆ, ಚಿತ್ರಕ್ಕೆ ಕಥೆ ಹುಟ್ಟಿದ್ದು, ಚಿತ್ರಕಥೆ ಮಾಡಿದ್ದು, ಅದು ಶುರುವಾಗಿದ್ದು, ಅದಕ್ಕೊಂದು ಶೀರ್ಷಿಕೆ ಇಟ್ಟಿದ್ದು, ಎಲ್ಲರೂ ಸೇರಿ ಕಷ್ಟಪಟ್ಟು ಸಿನಿಮಾ ಮಾಡಿದ್ದರ ಮೇಕಿಂಗ್ ಕುರಿತು ಬರಹಗಳ ರೂಪದಲ್ಲಿ ಓದುಗರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಸದ್ಯಕ್ಕೆ ಮೂವರು ಪ್ರಕಾಶಕರು ಸಿಕ್ಕಿದ್ದಾರೆ. ಯಾರ ಬಳಿ ಪುಸ್ತಕ ಮುದ್ರಣ ಮಾಡಿಸಿ ಬಿಡುಗಡೆ ಮಾಡಬೇಕೆಂಬ ಬಗ್ಗೆ ಮಾತುಕತೆ ನಡೆಯುತ್ತಿದೆ.
ಈಗಷ್ಟೇ ಮುಖಪುಟ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು, ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಸಿದ್ದಲಿಂಗಯ್ಯ ಕಂಬಾಳು ಅವರೇ ಪುಸ್ತಕ ಬರೆದಿದ್ದಾರೆ. ಯಾಕೆಂದರೆ, ನಮ್ಮ ಬಗ್ಗೆ ನಾವೇ ಬರೆದುಕೊಳ್ಳಬಾರದು. ಅದೊಂದು ಕಾದಂಬರಿ ರೀತಿಯ ಫೀಲ್ ಆಗಿರಬೇಕು ಎಂಬ ಕಾರಣಕ್ಕೆ ಅವರಿಂದಲೇ ಪುಸ್ತಕ ಬರೆಸುತ್ತಿದ್ದೇವೆ. ಚಿತ್ರ ಶುರುವಾದಾಗಿನಿಂದ ರಿಲೀಸ್ ಆಗಿ, ಯಶಸ್ಸು ಪಡೆದವರೆಗೂ ಅಪರೂಪದ ಮಾಹಿತಿಗಳು ಇರಲಿವೆ.
ಕೊನೆಯಲ್ಲಿ ಚಿತ್ರಕಥೆ ಇರಲಿದೆ’ ಎಂದು ಹೇಳುತ್ತಾರೆ ಸತ್ಯಪ್ರಕಾಶ್. ಈ ಪುಸ್ತಕ ಬಿಡುಗಡೆ ಮಾಡುವ ಇನ್ನೊಂದು ವಿಶೇಷವೆಂದರೆ, ಈಗ ಚಿತ್ರ ಮಾಡಲು ಯುವ ನಿರ್ದೇಶಕರು ತುದಿಗಾಲ ಮೇಲಿದ್ದಾರೆ. ಅಂತಹವರಿಗೆ ನಿರ್ಮಾಪಕರು ಸಿಗುವುದಿಲ್ಲ. ಅವರೆಲ್ಲರೂ ಹೇಗೆ ಸಿನಿಮಾ ಮಾಡಬೇಕು ಎಂಬುದನ್ನು ಇಲ್ಲಿ ಹೇಳಹೊರಟಿದ್ದೇನೆ. ಈ ಪುಸ್ತಕದಿಂದ ಕೆಲ ಸಿನಿಪ್ರೇಮಿಗಳಿಗೆ ಅನುಕೂಲವಾದರೆ ಅಷ್ಟು ಸಾಕು’ ಎನ್ನುತ್ತಾರೆ ಅವರು.