ಬೆಂಗಳೂರು: ರಾಮಾ ರಾಮಾ ರೇ ‘ ಕನ್ನಡದಲ್ಲಿ ಗಮನಸೆಳೆದ ಚಿತ್ರ. ಕಳೆದ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರ ಈಗ ಯುಟ್ಯೂಬ್‌ನಲ್ಲಿಯೂ ಬಿಡುಗಡೆಯಾಗಿದೆ.
ಚಿತ್ರಮಂದಿರಗಳಲ್ಲಿ ಹೇಗೆ ಉತ್ತಮ ಪ್ರತಿಕ್ರಿಯೆ ಪಡೆದಿತ್ತೋ, ಈಗ ಯುಟ್ಯೂಬ್‌ನಲ್ಲೂ ಅಂಥದ್ದೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಡಿ.ಸತ್ಯಪ್ರಕಾಶ್ ನಿರ್ದೇಶನದ ಮೊದಲ ಚಿತ್ರವಿದು. ಈಗ ಹೊಸ ಸುದ್ದಿಯೆಂದರೆ, ಈ ಸಿನಿಮಾವನ್ನು ಇತ್ತೀಚೆಗೆ ನೋಡಿದ ಅಭಿಮಾನಿಯೊಬ್ಬರು, ಚಿತ್ರತಂಡಕ್ಕೆ ಹಣ ಕಳಿಸಿದ್ದಾರೆ. ಹೌದು, ನಾಲ್ಕು ವರ್ಷಗಳ ಬಳಿಕವೂ ಈ ಚಿತ್ರ ನೋಡಿ, ಹಣ ಕೊಡುತ್ತಿರುವುದು ಹೊಸ ಬೆಳವಣಿಗೆಯೇ ಸರಿ.
ಸಿನಿಮಾ ನೋಡಿದ ಅಭಿಮಾನಿಯು, ” ಈ ಚಿತ್ರ ನೋಡಲು ಸಾಧ್ಯವಾಗಿರಲಿಲ್ಲ. ಈಗ ಯುಟ್ಯೂಬ್‌ನಲ್ಲಿ ನೋಡುವ ಅವಕಾಶ ಸಿಕ್ಕಿತು. ಆದರೆ, ಇಂತಹ ಒಳ್ಳೆಯ ಚಿತ್ರವನ್ನು ಉಚಿತವಾಗಿ ನೋಡಿದಂತಾಯಿತು ‘ ಎಂದು ಅವರು ಈ ಚಿತ್ರದ ಹೀರೋ ನಟರಾಜ್ ಅವರಿಗೆ 250 ರುಪಾಯಿಗಳನ್ನು ಗೂಗಲ್‌ಪೇ ಮೂಲಕ ಕಳಿಸಿದ್ದಾರೆ.
ಅಂದಹಾಗೆ, ಯುಟ್ಯೂಬ್‌ನಲ್ಲಿ ” ರಾಮಾ ರಾಮಾ ರೇ ‘ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಈ ಚಿತ್ರದಲ್ಲಿ ನಟರಾಜ್, ಧರ್ಮಣ್ಣ ಕಡೂರು, ಜಯರಾಮ್, ಬಿಂಬಶ್ರೀ, ಭಾಸ್ಕರ್, ಎಂ.ಕೆ.ಮಠ ಸೇರಿದಂತೆ ಇತರರು ನಟಿಸಿದ್ದರು. ಇನ್ನು, ಕನ್ನಡದಲ್ಲಿ ಸೂಪರ್‌ಹಿಟ್ ಆಗಿದ್ದ ಈ ಸಿನಿಮಾ ತೆಲುಗಿನಲ್ಲೂ ರಿಮೇಕ್ ಆಗಿತ್ತು. ರಾಕ್‌ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಆಟಗಾಧರಾ ಶಿವ ಹೆಸರಲ್ಲಿ ಬಿಡುಗಡೆಯಾಗಿತ್ತು.
2016ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದಿತ್ತು. ಜತೆಗೆ ಸತ್ಯಪ್ರಕಾಶ್ ಅವರಿಗೆ ಪ್ರಶಸ್ತಿ ಲಭಿಸಿತ್ತು.